ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳಿಗೆ ಸಾಗರೋಲ್ಲಂಘನ ಭಾಗ್ಯ!

ಅಮೆರಿಕ, ಯುರೋಪ್, ಕೊಲ್ಲಿ ರಾಷ್ಟ್ರಗಳಿಗೆ ಪರಿಚಯ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಜ್ಜೆ, ನವಣೆ, ಊದಲು, ಆರ್ಕ, ಕೊರ್ಲು, ಸಾಮೆಯಂತಹ ಸಿರಿಧಾನ್ಯಗಳು ಈಗ ‘ಸಾಗರೋಲ್ಲಂಘನ’ಕ್ಕೆ ಸಿದ್ಧವಾಗಿವೆ!

ಅಮೆರಿಕ, ಜರ್ಮನಿ, ಸ್ವಿಜರ್‌ಲ್ಯಾಂಡ್‌, ಇಟಲಿ ಮತ್ತು ಕೊಲ್ಲಿ ರಾಷ್ಟ್ರಗಳ ಜನರಿಗೆ ಈ ಕಿರು ಧಾನ್ಯಗಳನ್ನು ಪರಿಚಯಿಸಲು ಹಾಗೂ ಇವುಗಳಿಂದ ತಯಾರಿಸಬಹುದಾದ ಖಾದ್ಯಗಳು, ಪೌಷ್ಟಿಕತೆಯನ್ನು ಮನವರಿಕೆ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

‘ಇದೇ ತಿಂಗಳು ಅಮೆರಿಕದ ಬಾಲ್ಟಿಮೋರ್‌ ನಗರದಲ್ಲಿ ನಡೆಯುವ ಆಹಾರೋತ್ಸವದಲ್ಲಿ ಎಲ್ಲ ಸಾವಯವ ಮತ್ತು ಸಿರಿಧಾನ್ಯಗಳನ್ನು ಅಲ್ಲಿನ ನಾಗರಿಕರು ಮತ್ತು ಆಹಾರ ಉತ್ಪನ್ನಗಳ ತಯಾರಿಕಾ ಕಂಪೆನಿಗಳಿಗೂ ಪರಿಚಯಿಸಲಾಗುವುದು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲ್ಟಿಮೋರ್‌ನ ಎಂಟು ಕಂಪೆನಿಗಳು, ಯುರೋಪ್‌ ಮತ್ತು ಕೊಲ್ಲಿ ರಾಷ್ಟ್ರಗಳ ಕೆಲವು ಕಂಪೆನಿಗಳು ಸಿರಿಧಾನ್ಯಗಳ ಬಗ್ಗೆ ಆಸಕ್ತಿ ತೋರಿಸಿವೆ. ಧಾನ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬೆಂಗಳೂರಿಗೆ ಭೇಟಿ ನೀಡಲಿವೆ. ಆ ರಾಷ್ಟ್ರಗಳಲ್ಲಿ ಜನತೆ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪರ್ಯಾಯ ಪೌಷ್ಟಿಕ ಆಹಾರ ಧಾನ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಅದರ ಲಾಭ ಪಡೆಯುವ ಉದ್ದೇಶ ನಮ್ಮದು. ಜಾಗತಿಕ ಆಹಾರ ಕಂಪೆನಿಗಳನ್ನು ಸೆಳೆಯುವ ಉದ್ದೇಶದಿಂದ ಸದ್ಯದಲ್ಲೇ ಜಾಗತಿಕ ಸಿರಿಧಾನ್ಯ ಮೇಳ ಆಯೋಜಿಸಲಾಗುವುದು’ ಎಂದೂ ಅವರು ಹೇಳಿದರು.

ಸಿರಿ ಧಾನ್ಯಗಳ ಪೌಷ್ಟಿಕಾಂಶಗಳ ಬಗ್ಗೆ ಮಾಹಿತಿ ಮತ್ತು ಅವುಗಳ ಸೇವನೆಯಿಂದ ಆಗಿರುವ ಅನುಭವಗಳನ್ನು ಹಂಚಿಕೊಳ್ಳಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ (ಎಫ್‌ಎಒ) ರಾಜ್ಯ ಸರ್ಕಾರಕ್ಕೆ ಆಹ್ವಾನ ನೀಡಿದೆ. ಅದರಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.

ವಿಶ್ವದ ವಿವಿಧ ರಾಷ್ಟ್ರಗಳ ಜನರಿಗೆ ಸಿರಿಧಾನ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರೆ, ನಮ್ಮ ಉತ್ಪನ್ನಗಳಿಗೆ ಅಲ್ಲಿಂದ ಬೇಡಿಕೆ ಸಿಗುತ್ತದೆ ಎಂದರು.

ಅಲ್ಲದೆ, ದೇಶದ ಇತರ ಮಹಾನಗರಗಳಲ್ಲಿಯೂ ಸಿರಿಧಾನ್ಯಗಳನ್ನು ಪರಿಚರಿಯಿಸುವ ಉದ್ದೇಶದಿಂದ ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ, ಹೈದರಾಬಾದ್‌ ನಗರಗಳಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಿರಿ ಧಾನ್ಯ ಕೃಷಿ ಪ್ರದೇಶ ದ್ವಿಗುಣ: ರಾಜ್ಯದಲ್ಲಿ ಸಿರಿ ಧಾನ್ಯಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಕಳೆದ ಒಂದು ವರ್ಷದಲ್ಲಿ ರಾಗಿ, ಜೋಳ, ಸಜ್ಜೆ ಅಲ್ಲದೆ, ಅಪರೂಪದ ಧಾನ್ಯಗಳೆನಿಸಿರುವ ನವಣೆ, ಸಾಮೆ, ಊದಲು, ಆರ್ಕ ಮುಂತಾದವುಗಳ ಬೇಸಾಯ ಪ್ರದೇಶ ದ್ವಿಗುಣಗೊಂಡಿದೆ ಕೃಷ್ಣ ಬೈರೇಗೌಡ ತಿಳಿಸಿದರು.

ಸಿರಿಧಾನ್ಯ ಬೆಳೆಯುವವರಿಗೆ ಕೃಷಿ ಇಲಾಖೆ ವತಿಯಿಂದ ₹ 2,500 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಿರಿ ಧಾನ್ಯಕ್ಕೆ ಬೇಡಿಕೆ ಮತ್ತು ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾರಂಭಿಸಿದ್ದಾರೆ ಎಂದರು.

(ಕೃಷ್ಣಬೈರೇಗೌಡ)

**

40 ಸಾವಿರ ಹೆಕ್ಟೇರ್‌ಗೆ ಏರಿಕೆ:

ಕೇವಲ ಒಂದು ವರ್ಷದ ಅವಧಿಯಲ್ಲಿ ನವಣೆ, ಊದಲು, ಆರ್ಕ, ಸಾಮೆ, ಕೊರ್ಲುಗಳಂತಹ  ಸಿರಿಧಾನ್ಯ ಬೆಳೆಯುವ ಪ್ರದೇಶ 20 ಸಾವಿರ ಹೆಕ್ಟೇರ್‌ಗಳಿಂದ 40 ಸಾವಿರ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ.  ರಾಗಿ, ಜೋಳ ಮತ್ತು ಸಜ್ಜೆ ಬೆಳೆಯುವ ಪ್ರದೇಶವೂ ಶೇ 20 ರಷ್ಟು ಹೆಚ್ಚಳವಾಗಿದೆ. ಸಿರಿಧಾನ್ಯಗಳಿಗೆ ಬೇಡಿಕೆ ಗಣನೀಯವಾಗಿ ಏರಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

**

ಪಂಚತಾರಾ ಹೋಟೆಲ್‌ಗಳಲ್ಲಿ ಸಿರಿಧಾನ್ಯ ಖಾದ್ಯ:

ನಗರದ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ ಆಹಾರ ತಯಾರಿಕೆಯಲ್ಲಿ ಸಿರಿಧಾನ್ಯಗಳ ಬಳಕೆ ಆರಂಭವಾಗಿದೆ. ಬೇಕರಿ ತಿನಿಸುಗಳ ತಯಾರಿಕೆ, ಕೆಲವು ಬಗೆಯ ಖಾದ್ಯಗಳಲ್ಲಿ ಇವುಗಳನ್ನು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT