ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ ಪಾರ್ಕಿಂಗ್‌’ ಸೌಲಭ್ಯ

ಮಹಾನಗರ ಪಾಲಿಕೆ ನಿರ್ಧಾರಕ್ಕೆ ಸಂಘ ಸಂಸ್ಥೆಗಳ ಟೀಕಾಪ್ರಹಾರ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಆಯ್ದ ರಸ್ತೆಗಳಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ಸೌಲಭ್ಯವನ್ನು ಜಾರಿಗೆ ತರಲು ಬಿಬಿಎಂ‍ಪಿ ಸಿದ್ಧತೆ ಮಾಡಿಕೊಂಡಿದೆ.

‘ಸಂಪೂರ್ಣ ತಂತ್ರಜ್ಞಾನ ಆಧಾರಿತ ನಿರ್ವಹಣೆ, ನಗದುರಹಿತ ಪಾವತಿ, ಸೆನ್ಸರ್‌ ಆಧರಿತ ಅತ್ಯಾಧುನಿಕ ಪಾರ್ಕಿಂಗ್‌ ವ್ಯವಸ್ಥೆಯನ್ನು ನಗರ ಹೊಂದಲಿದೆ. ಯೋಜನೆ ಜಾರಿಗೆ ಬಂದ ನಂತರ, ಪಾರ್ಕಿಂಗ್‌ ತಾಣಗಳಲ್ಲಿ ಅಂದಾಜು 7,500 ವಾಹನಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ಈ ಸೌಲಭ್ಯ ಕಲ್ಪಿಸುವ ಸಲುವಾಗಿ 85 ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆಯುವುದಷ್ಟೇ ಬಾಕಿ ಇದೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾರ್ಕಿಂಗ್‌ ತಾಣಗಳಲ್ಲಿ ಸೆನ್ಸರ್‌ಗಳನ್ನು ಜೋಡಿಸಿ, ಮೀಟರ್‌ ಅಳವಡಿಸಲಾಗುತ್ತದೆ. ವಾಹನ ಬಂದ ಸಮಯ, ಎಷ್ಟು ಸಮಯ ಇತ್ತು ಎಂಬ ಸಮಗ್ರ ಮಾಹಿತಿ ಅದರಲ್ಲಿ ದಾಖಲಾಗುತ್ತದೆ. ಪಾರ್ಕಿಂಗ್‌ ತಾಣಗಳ ಬಗ್ಗೆ ವಾಹನ ಚಾಲಕರಿಗೆ ಮೊಬೈಲ್‌ ಆ್ಯಪ್‌ ಮೂಲಕವೇ ಮಾಹಿತಿ ಸಿಗಲಿದೆ. ಎಲ್ಲಿ ಪಾರ್ಕಿಂಗ್‌ಗೆ ಜಾಗ ಖಾಲಿ ಇದೆ ಎನ್ನುವ ವಿವರ ವಾಹನ ಚಾಲಕರು, ಬೈಕ್‌ ಸವಾರರಿಗೆ ಮೊದಲೇ ಗೊತ್ತಾಗಲಿದೆ. ವಾಹನ ನಿಲುಗಡೆ ಮಾಡಲು ಅಲೆದಾಡುವುದು ಇದರಿಂದ ತಪ್ಪಲಿದೆ ಎಂದು ವಿವರಿಸಿದರು.

‘ಸೆಂಟ್ರಲ್‌ ಪಾರ್ಕಿಂಗ್‌ ಸರ್ವೀಸ್‌ ಮತ್ತು ಸಿವಿಕ್‌ ಸ್ಮಾರ್ಟ್‌ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿವೆ. ಈ ಎರಡೂ ಸಂಸ್ಥೆಗಳ ತಾಂತ್ರಿಕ ಸಾಮರ್ಥ್ಯದ ಮೌಲ್ಯಮಾಪನ ನಡೆಸಲಾಗಿದೆ. ಗೃಹ ಇಲಾಖೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ (ಡಲ್ಟ್‌) ಅಂತಿಮ ವರದಿ ಬಂದ ನಂತರ ಯೋಜನೆ ಕಾರ್ಯರೂಪಕ್ಕೆ ತರುತ್ತೇವೆ’ ಎಂದರು.

ಗಂಟೆಗಳ ಆಧಾರದ ಮೇಲೆ ಶುಲ್ಕ ವಿಧಿಸುವ ಮೀಟರ್‌ (ಸ್ವೈಪ್‌ ಕಾರ್ಡ್‌, ಮೊಬೈಲ್‌ ಅಪ್ಲಿಕೇಶನ್‌) ಅಳವಡಿಕೆ ಮಾಡಲಾಗುತ್ತದೆ. ಇದಲ್ಲದೆ ₹1 , ₹5 ಹಾಗೂ ₹10 ನಾಣ್ಯಗಳನ್ನೂ ಸ್ವೀಕರಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಸ್ಮಾರ್ಟ್‌ ಕಾರ್ಡ್‌ ಸಹ ದೊರೆಯಲಿದ್ದು, ರೀಚಾರ್ಜ್‌ ಮಾಡಿಸಿ ಬಳಸಬಹುದು. ಪಾರ್ಕಿಂಗ್‌ ವ್ಯವಸ್ಥೆ ಹೊಂದಿದ ರಸ್ತೆಗಳ ಸ್ಥಳಾವಕಾಶದ ಕ್ಷಣ, ಕ್ಷಣದ ಮಾಹಿತಿ ಒದಗಿಸುವುದು ಮತ್ತು ಪಾರ್ಕಿಂಗ್‌ ತಾಣಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವುದು ಈ ಯೋಜನೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಹಲಸೂರಿನಿಂದ ಸಿರ್ಸಿ ವೃತ್ತ ಮತ್ತು ಲಾಲ್‌ಬಾಗ್‌ನಿಂದ ಅರಮನೆ ಮೈದಾನದವರೆಗಿನ ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಪರಿಶೀಲಿಸಲಾಗಿದೆ. ಟೆಂಡರ್‌ ಅರ್ಜಿ ಸಲ್ಲಿಸಿರುವ ಕಂಪೆನಿಗಳು ತಮ್ಮ ಬಳಿ ಇರುವ ತಾಂತ್ರಿಕ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡಿವೆ ಎಂದು ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಪ್ರಭಾರ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದರು.

* ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ಯಾವುದೇ ಹಂತದಲ್ಲೂ ಹಣ ದುರುಪಯೋಗಕ್ಕೆ ಅವಕಾಶವೇ ಇಲ್ಲ.

– ಬಿ.ಎಸ್‌.ಪ್ರಹ್ಲಾದ್‌, ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT