ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3,600 ಕೋಟಿ ನೀಡಿದರೂ ರಸ್ತೆಗಳು ಶೋಚನೀಯ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ರಸ್ತೆಗಳು ಹಾಗೂ ವಾರ್ಡ್‌ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಮೂರು ವರ್ಷಗಳಲ್ಲಿ ಒಟ್ಟು ₹3,600 ಕೋಟಿ ನೀಡಲಾಗಿದೆ. ಇಷ್ಟು ಅನುದಾನ ನೀಡಿದ್ದರೂ ಅಕ್ಟೋಬರ್‌ ಮಳೆಗೆ ರಾಜಧಾನಿಯ ರಸ್ತೆಗಳ ಸ್ಥಿತಿ ಶೋಚನೀಯ ಮಟ್ಟಕ್ಕೆ ತಿರುಗಿದೆ.

ನಗರವು 800 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. 14 ಸಾವಿರ ಕಿ.ಮೀ. ಉದ್ದದ ರಸ್ತೆಗಳಿದ್ದು, ಇದರಲ್ಲಿ 1,500 ಕಿ.ಮೀ. ಪ್ರಮುಖ ರಸ್ತೆಗಳು ಹಾಗೂ 13,500 ವಾರ್ಡ್‌ ಮಟ್ಟದ ರಸ್ತೆಗಳಿವೆ. ಸರ್ಕಾರವು ನಗರೋತ್ಥಾನ ಯೋಜನೆಯಡಿ 2015–16ನೇ ಸಾಲಿನಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ₹600 ಕೋಟಿ, ವಾರ್ಡ್‌ ಮಟ್ಟದ ರಸ್ತೆಗಳಿಗೆ ₹800 ಕೋಟಿ ನೀಡಿತ್ತು. 2016–17 ಹಾಗೂ 2017–18ನೇ ಸಾಲಿನಲ್ಲಿ ಪ್ರಮುಖ ರಸ್ತೆಗಳಿಗೆ ₹800 ಕೋಟಿ ಹಾಗೂ ವಾರ್ಡ್‌ ಮಟ್ಟದ ರಸ್ತೆಗಳಿಗೆ ₹1,400 ಕೋಟಿ ನೀಡಿದೆ.

ರಸ್ತೆಗಳ ನಿರ್ವಹಣೆ ಮಾಡದ ಗುತ್ತಿಗೆದಾರರು:

‘ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಿದ ಗುತ್ತಿಗೆದಾರರಿಗೆ ದೋಪಪೂರಿತ ಅವಧಿ 2 ವರ್ಷಗಳು ಹಾಗೂ ನಿರ್ವಹಣಾ ಅವಧಿ ಒಂದು ವರ್ಷ ನೀಡಲಾಗುತ್ತದೆ. ಈ ಮೂರು ವರ್ಷಗಳಲ್ಲಿ ರಸ್ತೆಯ ನಿರ್ವಹಣೆಯನ್ನು ಅವರೇ ಮಾಡಬೇಕು. ರಸ್ತೆ ಹಾಳಾದರೆ ಅಥವಾ ಗುಂಡಿ ಬಿದ್ದರೆ ಅವರೇ ಸರಿಪಡಿಸಬೇಕು. ರಸ್ತೆಯನ್ನು ಅಭಿವೃದ್ಧಿಪಡಿಸದೇ ಇದ್ದರೆ, ಬೇರೆ ಗುತ್ತಿಗೆದಾರರಿಂದ ಆ ರಸ್ತೆಯನ್ನು ಸರಿಪಡಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಮೂಲ ಗುತ್ತಿಗೆದಾರರಿಂದ ವಸೂಲಿ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಗುತ್ತಿಗೆದಾರರು ಯೋಜನಾ ವೆಚ್ಚದಲ್ಲಿ ಶೇ 5ರಷ್ಟು ಕಾರ್ಯಕ್ಷಮತೆಯ ಖಾತರಿ ಹಾಗೂ ಶೇ 1ರಷ್ಟು ಇಎಂಡಿ ಹಣವನ್ನು ಪಾಲಿಕೆಯಲ್ಲಿ ಇರಿಸಬೇಕು. ಈ ಹಣವನ್ನು ಮೂರು ವರ್ಷಗಳ ಬಳಿಕ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಈ ಅವಧಿಯಲ್ಲಿ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಈ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ’ ಎಂದರು.

‘ಗುತ್ತಿಗೆದಾರರು ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಈಗ ಇಷ್ಟೊಂದು ಸಮಸ್ಯೆಗಳು ಬರುತ್ತಿರಲಿಲ್ಲ. ರಸ್ತೆಯನ್ನು ನಿರ್ವಹಣೆ ಮಾಡದ ಗುತ್ತಿಗೆದಾರರಿಗೆ ಪಾಲಿಕೆಯ ಎಂಜಿನಿಯರ್‌ಗಳು ದಂಡ ವಿಧಿಸುತ್ತಿಲ್ಲ. ಇದರಿಂದ ಸರ್ಕಾರ, ಪಾಲಿಕೆಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ’ ಎಂದು ದೂರಿದರು.

ಅವೈಜ್ಞಾನಿಕ ಕಾಮಗಾರಿ:‘ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಇಳಿಜಾರು ಇರಬೇಕು. ಮಳೆ ನೀರು ರಸ್ತೆ ಮೇಲೆ ನಿಲ್ಲದೆ ಸರಾಗವಾಗಿ ಹರಿದು ಹೋಗುವಂತಿರಬೇಕು. ಆದರೆ, ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ಈ ನೀರು ಕೆಳಗೆ ಇಳಿದು ಮಣ್ಣು ಸಡಿಲಗೊಂಡು ಕುಸಿಯಲಾರಂಭಿಸುತ್ತದೆ. ಡಾಂಬರಿನ ಪದರವೂ ದುರ್ಬಲಗೊಂಡು, ರಸ್ತೆ ಹಾಳಾಗುತ್ತದೆ’ ಎಂದು ದೂರಿದರು.

‘ಡಾಂಬರು ಹಾಕುವಾಗ ಅದಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಬಿಟಮಿನ್‌ ಉಪಯೋಗಿಸುವುದಿಲ್ಲ. ಇದರಿಂದ ರಸ್ತೆಯು ದುರ್ಬಲಗೊಳ್ಳುತ್ತದೆ. ಬಿರುಕು ಬಿಟ್ಟ ಹಾಗೂ ಗುಂಡಿ ಬಿದ್ದ ಜಾಗದಲ್ಲಿರುವ ಡಾಂಬರನ್ನು ತೆಗೆದು, ಅದನ್ನು ಪುನಶ್ಚೇತನಗೊಳಿಸಬೇಕು. ಅದರ ಮೇಲೆ ಡಾಂಬರೀಕರಣ ಮಾಡಬೇಕು. ಆದರೆ, ಈ ನಿಯಮವನ್ನು ಯಾರೂ ಪಾಲಿಸುತ್ತಿಲ್ಲ. ಹದಗೆಟ್ಟಿರುವ ರಸ್ತೆಯ ಮೇಲೆಯೇ ಡಾಂಬರೀಕರಣ ಮಾಡುವುದರಿಂದ ರಸ್ತೆ ಬೇಗ ಹಾಳಾಗುತ್ತದೆ’ ಎಂದು ತಿಳಿಸಿದರು.

ಅಂಕಿ–ಅಂಶ

₹1,400 ಕೋಟಿ -2015–16ನೇ ಸಾಲಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ನೀಡಿರುವ ಹಣ


₹2,200 ಕೋಟಿ - 2016–17 ಹಾಗೂ 2017–18ನೇ ಸಾಲಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ನೀಡಿರುವ ಹಣ

‘ರಸ್ತೆ ಅಗೆಯುವುದಕ್ಕೆ ಕಡಿವಾಣ ಅಗತ್ಯ’

‘ಜಲಮಂಡಳಿ, ಬೆಸ್ಕಾಂ, ಒಎಫ್‌ಸಿಯವರು ಪದೇಪದೇ ರಸ್ತೆ ಅಗೆಯುತ್ತಾರೆ. ಆದರೆ, ಆ ಜಾಗವನ್ನು ಸರಿಪಡಿಸುವುದಿಲ್ಲ. ಕುಡಿಯುವ ನೀರಿನ ಪೈಪ್‌ಗಳು ಒಡೆಯುವುದು ಹಾಗೂ ಕೊಳಚೆ ನೀರು ಉಕ್ಕಿ ಹರಿಯುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಒಎಫ್‌ಸಿ ಕೇಬಲ್‌ನವರು ಪ್ರತಿ 300 ಮೀಟರ್‌ಗೆ ಒಂದು ಗುಂಡಿ ತೋಡುತ್ತಾರೆ. ಆದರೆ, ಆ ಗುಂಡಿಗಳನ್ನು ಅವರು ಮುಚ್ಚುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ದೂರಿದರು.

‘ನಿಯಮ ಉಲ್ಲಂಘಿಸಿದರೆ ಪಾಲಿಕೆಯಲ್ಲಿ ಇರಿಸಿದ್ದ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಷರತ್ತು ವಿಧಿಸಲಾಗಿರುತ್ತದೆ. ಆದರೆ, ಒಎಫ್‌ಸಿಯವರು ಗುಂಡಿಗಳನ್ನೂ ಮುಚ್ಚುವುದಿಲ್ಲ, ಭದ್ರತಾ ಠೇವಣಿಯನ್ನೂ ಪಡೆಯುವುದಿಲ್ಲ’ ಎಂದು ತಿಳಿಸಿದರು.

‘ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪ್ರಮುಖ ರಸ್ತೆಗಳ ಬದಿಯ ಚರಂಡಿಗಳಲ್ಲಿ ಹೂಳು ತೆಗೆಯಬೇಕು. ಆದರೆ, ಆ ಕೆಲಸ ನಡೆಯುತ್ತಿಲ್ಲ. ಒಳಚರಂಡಿಗೆ ನೀರು ಹೋಗುವ ಜಾಗದಲ್ಲಿ ಮಣ್ಣು ತುಂಬಿಕೊಂಡಿರುತ್ತದೆ. ಮಳೆ ನೀರು ಒಳಚರಂಡಿಗೆ ಹರಿದು ಹೋಗುವುದಿಲ್ಲ’ ಎಂದು ವಿವರಿಸಿದರು.

‘ನಡೆಯದ ಸಮನ್ವಯ ಸಮಿತಿ ಸಭೆ’

‘ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಸೇವಾ ಸಂಸ್ಥೆಗಳನ್ನು ಒಳಗೊಂಡ ಸಮನ್ವಯ ಸಮಿತಿಯ ಸಭೆ ಸುಮಾರು 8 ತಿಂಗಳಿಂದ ನಡೆದಿಲ್ಲ. ಈ ಸಭೆಯನ್ನು 15 ದಿನಗಳಿಗೊಮ್ಮೆ ನಡೆಸಬೇಕಿತ್ತು. ವಲಯ ಹಾಗೂ ವಾರ್ಡ್‌ ಮಟ್ಟದಲ್ಲೂ ಸಮನ್ವಯ ಸಮಿತಿಯ ಸಭೆಗಳನ್ನು ಪಾಲಿಕೆ ಕಚೇರಿಗಳಲ್ಲಿ ನಡೆಸಬೇಕು. ಆದರೆ, ಅಲ್ಲೂ ಸಭೆಗಳು ನಡೆಯುತ್ತಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ದೂರಿದರು.

‘ಪಾಲಿಕೆಯು ಕೈಗೊಳ್ಳುವ ಯೋಜನೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತಿತ್ತು. ಜಲಮಂಡಳಿ ಅಥವಾ ಬೆಸ್ಕಾಂನ ಕೆಲಸಗಳಿದ್ದರೆ ಆ ಸಂದರ್ಭದಲ್ಲಿ ಮಾಡಬಹುದಿತ್ತು. ಆದರೆ, ಸಭೆ ನಡೆಯದ ಕಾರಣ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT