ಲ್ಯಾಪ್‌ಟಾಪ್‌ಗೆ ಒತ್ತಾಯಿಸಿ ಅಂಧರ ಪ್ರತಿಭಟನೆ

ಭಾನುವಾರ, ಮೇ 26, 2019
32 °C

ಲ್ಯಾಪ್‌ಟಾಪ್‌ಗೆ ಒತ್ತಾಯಿಸಿ ಅಂಧರ ಪ್ರತಿಭಟನೆ

Published:
Updated:
ಲ್ಯಾಪ್‌ಟಾಪ್‌ಗೆ ಒತ್ತಾಯಿಸಿ ಅಂಧರ ಪ್ರತಿಭಟನೆ

ಬೆಂಗಳೂರು: ‘ಅಂಧ ವಿದ್ಯಾರ್ಥಿಗಳಿಗೆ ಸರ್ಕಾರ ಲ್ಯಾಪ್‌ಟಾಪ್‌ಗಳನ್ನು ನೀಡಬೇಕು’ ಎಂದು ಒತ್ತಾಯಿಸಿ ನ್ಯಾಷನಲ್ ಫೆಡರೇಷನ್ ಆಫ್‌ ದಿ ಬ್ಲೈಂಡ್‌ನ (ಎನ್‌ಎಫ್‌ಬಿ) ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘2014–15ನೇ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮೆಟ್ರಿಕ್‌ ನಂತರದ ಅಂಧ ವಿದ್ಯಾರ್ಥಿಗಳಿಗೆ 1,000 ಲ್ಯಾಪ್‌ಟಾಪ್‌ ವಿತರಿಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿತ್ತು. ಈ ಯೋಜನೆ ಅಡಿ ಒಂದು ವರ್ಷ ಮಾತ್ರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ’ ಎಂದು ಎನ್‌ಎಫ್‌ಬಿ ಯುವ ಸಮಿತಿಯ ಸದಸ್ಯ ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಎರಡು ವರ್ಷಗಳಿಂದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಆದರೆ ಲ್ಯಾಪ್‌ಟಾಪ್‌ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ,  ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ತಾಂತ್ರಿಕ ಕಾರಣದಿಂದ ಲ್ಯಾಪ್‌ಟಾಪ್‌ಗಳ ವಿತರಣೆ ವಿಳಂಬವಾಗುತ್ತಿದೆ. ತ್ವರಿತವಾಗಿ ಎಲ್ಲವನ್ನೂ ಸರಿಪಡಿಸುತ್ತೇವೆ ಎನ್ನುತ್ತಿದ್ದಾರೆ. ಅಂಧರಿಗೆ ನೆರವಾಗಬೇಕಿದ್ದ ಸರ್ಕಾರವೇ ನಮ್ಮನ್ನು ನಿರ್ಲಕ್ಷಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು, ‘ಎರಡು ತಿಂಗಳು ಕಾಲಾವಕಾಶ ನೀಡಿ ಅಷ್ಟರೊಳಗೆ ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ. ಹೀಗಾಗಿ, ಲ್ಯಾಪ್‌ಟಾಪ್‌ ವಿತರಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ವೀರೇಶ್ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry