ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ‘ಎ’ವಿರುದ್ಧದ ಟೆಸ್ಟ್‌ ಸರಣಿ: ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಜಯವಾಡ: ಕರಣ್‌ ಶರ್ಮಾ (78ಕ್ಕೆ5) ಮತ್ತು ಶಹಬಾಜ್‌ ನದೀಮ್‌ (41ಕ್ಕೆ4) ಮಂಗಳವಾರ ನ್ಯೂಜಿಲೆಂಡ್‌ ‘ಎ’ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು.

ಇವರ ಸ್ಪಿನ್‌ ಮೋಡಿಯಿಂದಾಗಿ ಭಾರತ ‘ಎ’ ತಂಡ ನಾಲ್ಕು ದಿನಗಳ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 26ರನ್‌ಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತು.

ಸೆಪ್ಟೆಂಬರ್‌ 23ರಿಂದ 25ರವರೆಗೆ ನಡೆದಿದ್ದ ಮೊದಲ ಪಂದ್ಯದಲ್ಲೂ ಕರ್ನಾಟಕದ ಕರುಣ್‌ ನಾಯರ್‌ ಸಾರಥ್ಯದ ಆತಿಥೇಯ ತಂಡ ಇನಿಂಗ್ಸ್‌ ಮತ್ತು 31ರನ್‌ಗಳಿಂದ ಗೆದ್ದಿತ್ತು.

ಗೋಕರಾಜು ಲಿಯಾಲ ಗಂಗರಾಜು ಕ್ರೀಡಾಂಗಣದಲ್ಲಿ 1 ವಿಕೆಟ್‌ಗೆ 104ರನ್‌ಗಳಿಂದ ನಾಲ್ಕನೇ ದಿನವಾದ ಮಂಗಳವಾರ ಆಟ ಮುಂದುವರಿಸಿದ ಕಿವೀಸ್‌ ನಾಡಿನ ತಂಡ ಕರಣ್‌ ಮತ್ತು ನದೀಮ್‌ ಬೀಸಿದ ಸ್ಪಿನ್‌ ಬಲೆಯಲ್ಲಿ ಸಿಲುಕಿ ಒದ್ದಾಡಿತು.

ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಉರುಳಿಸಿದ್ದ ಲೆಗ್‌ ಸ್ಪಿನ್ನರ್‌ ಕರಣ್‌, ಎರಡನೇ ಇನಿಂಗ್ಸ್‌ನಲ್ಲೂ ಗೂಗ್ಲಿ ಎಸೆತಗಳ ಮೂಲಕ ಜಾದೂ ಮಾಡಿದರು. ದುಲೀಪ್‌ ಟ್ರೋಫಿ ಆರಂಭವಾದ ನಂತರ ನಾಲ್ಕು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು15.29ರ ಸರಾಸರಿಯಲ್ಲಿ 31 ವಿಕೆಟ್‌ ಉರುಳಿಸಿದ್ದಾರೆ. ಜೊತೆಗೆ ಮೂರನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದ ಹಿರಿಮೆಗೂ ಪಾತ್ರರಾಗಿದ್ದಾರೆ.

(ವಿಜಯವಾಡದಲ್ಲಿ ನಡೆದ ಭಾರತ ‘ಎ’ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ನ್ಯೂಜಿಲೆಂಡ್‌ ‘ಎ’ ತಂಡದ ಹೆನ್ರಿ ನಿಕೊಲಸ್‌ ಬ್ಯಾಟಿಂಗ್‌ ವೈಖರಿ)

132ರನ್‌ಗಳ ಹಿನ್ನಡೆ ಅನುಭವಿಸಿದ್ದ ಕಿವೀಸ್‌ ನಾಡಿನ ತಂಡ ಮಂಗಳವಾರ ಪೂರ್ಣ 90 ಓವರ್‌ಗಳನ್ನು ಆಡಿ ಡ್ರಾ ಮಾಡಿಕೊಳ್ಳುವ ಆಲೋಚನೆ ಹೊಂದಿತ್ತು. ನಾಯಕ ಹೆನ್ರಿ ನಿಕೊಲಸ್‌ ಮತ್ತು ಜೀತ್‌ ರಾವಲ್‌ (47;148ಎ, 6ಬೌಂ)  ಕ್ರೀಸ್‌ನಲ್ಲಿದ್ದರಿಂದ ಇದು ಸಾಧ್ಯ ಎಂದೇ ಭಾವಿಸಲಾಗಿತ್ತು. ದಿನದ ಮೊದಲ 11.3 ಓವರ್‌ಗಳ ಕಾಲ ಇವರು ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು.

52ನೇ ಓವರ್‌ನಲ್ಲಿ ದಾಳಿಗಿಳಿದ ಶಹಬಾಜ್‌ ನದೀಮ್‌ ಈ ಊಹೆಯನ್ನು ತಲೆ ಕೆಳಗಾಗಿಸಿದರು. ಮೂರನೇ ಎಸೆತದಲ್ಲಿ ರಾವಲ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಆತಿಥೇಯರ ಗೆಲುವಿಗೆ ಮುನ್ನುಡಿ ಬರೆದರು.

ವಿಲ್‌ ಯಂಗ್‌ (14; 34ಎ, 3ಬೌಂ) ಮತ್ತು ಕಾಲಿನ್‌ ಮುನ್ರೊ (13; 11ಎ, 1ಬೌಂ,1ಸಿ) ಅವರಿಗೆ ಕರಣ್‌ ಪೆವಿಲಿಯನ್‌ ದಾರಿ ತೋರಿಸಿದರು. ಇವರು ಔಟಾದ ನಂತರ ಪ್ರವಾಸಿ ಪಡೆ ಕುಸಿತದ ಹಾದಿ ಹಿಡಿಯಿತು. ಟಾಮ್‌ ಬ್ರೂಸ್‌ಗೆ (0) ಶಾರ್ದೂಲ್‌ ಠಾಕೂರ್‌ ತೋಳರಳಿಸಲು ಅವಕಾಶ ನೀಡಲಿಲ್ಲ.

72ನೇ ಓವರ್‌ನಲ್ಲಿ ಕರಣ್‌ ಮತ್ತೊಮ್ಮೆ ಮಿಂಚಿದರು. ನಾಲ್ಕನೇ ಎಸೆತದಲ್ಲಿ ನಿಕೊಲಸ್‌ ವಿಕೆಟ್‌ ಉರುಳಿಸಿದ ಅವರು ಭಾರತದ ಗೆಲುವನ್ನು ಖಾತ್ರಿ ಪಡಿಸಿದರು. 190 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 94ರನ್‌ ಗಳಿಸಿದ್ದ ನಿಕೊಲಸ್‌, ಶತಕದ ಸನಿಹದಲ್ಲಿ ಮುಗ್ಗರಿಸಿದರು.

ಇದರ ಬೆನ್ನಲ್ಲೇ  ಟಿಮ್‌ ಸೀಫರ್ಟ್‌ (9) ಮತ್ತು ಸ್ಕಾಟ್‌ ಕುಗ್ಗೆಲೀಜ್ನ್‌ (7) ಅವರನ್ನು ನದೀಮ್‌ ಕಟ್ಟಿಹಾಕಿದರು.

ಕೆಳ ಕ್ರಮಾಂಕದ ಆಟಗಾರರಾದ ಲೂಕಿ ಫರ್ಗ್ಯೂಸನ್‌ (6) ಮತ್ತು ಇಶ್‌ ಸೋಧಿ (0) ಅವರನ್ನು ಔಟ್‌ ಮಾಡಿದ ಕರಣ್‌, ಭಾರತದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ನ್ಯೂಜಿಲೆಂಡ್‌ ತಂಡ 86 ರನ್‌ ಗಳಿಸುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲೆಂಡ್‌ ‘ಎ’: ಮೊದಲ ಇನಿಂಗ್ಸ್‌: 69.5 ಓವರ್‌ಗಳಲ್ಲಿ 211 ಮತ್ತು 79.3 ಓವರ್‌ಗಳಲ್ಲಿ 210 (ಜೀತ್‌ ರಾವಲ್‌ 47, ಹೆನ್ರಿ ನಿಕೊಲಸ್‌ 94, ವಿಲ್‌ ಯಂಗ್‌ 14, ಕಾಲಿನ್‌ ಮುನ್ರೊ 13; ಶಾರ್ದೂಲ್‌ ಠಾಕೂರ್‌ 34ಕ್ಕೆ1, ಶಹಬಾಜ್‌ ನದೀಮ್‌ 41ಕ್ಕೆ4, ಕರಣ್‌ ಶರ್ಮಾ 78ಕ್ಕೆ5).

ಭಾರತ ‘ಎ’: ಪ್ರಥಮ ಇನಿಂಗ್ಸ್‌:110 ಓವರ್‌ಗಳಲ್ಲಿ 447.

ಫಲಿತಾಂಶ: ಭಾರತ ‘ಎ’ ತಂಡಕ್ಕೆ ಇನಿಂಗ್ಸ್‌ ಮತ್ತು 26ರನ್‌ಗಳ ಗೆಲುವು. ಹಾಗೂ 2–0ರಲ್ಲಿ ಸರಣಿ.

*

ಹಿಂದಿನ ನಾಲ್ಕು ಪಂದ್ಯಗಳಲ್ಲಿ 31 ವಿಕೆಟ್‌ ಉರುಳಿಸಿರುವ ಕರಣ್‌

ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 31ರನ್‌ ಗಳಿಂದ ಸೋತಿದ್ದ ಕಿವೀಸ್‌

ಕರ್ನಾಟಕದ ಕರುಣ್‌ ನಾಯರ್‌ ಭಾರತ ತಂಡವನ್ನು ಮುನ್ನಡೆಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT