ರೈಲ್ವೆ ಮೇಲ್ಸೇತುವೆ; ಸಂಸದರಿಂದ ದಿಢೀರ್‌ ಪೂಜೆ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ರೈಲ್ವೆ ಮೇಲ್ಸೇತುವೆ; ಸಂಸದರಿಂದ ದಿಢೀರ್‌ ಪೂಜೆ

Published:
Updated:

ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ಮೇಲ್ಸೇತುವೆ ತೆರವುಗೊಳಿಸುವ ಹಾಗೂ ಹೊಸದಾಗಿ ನಿರ್ಮಿಸುವ ಕಾಮಗಾರಿ ಆರಂಭಿಸಲು ಸಂಸದ ಸುರೇಶ ಅಂಗಡಿ ಮಂಗಳವಾರ ದಿಢೀರ್‌ ಪೂಜೆ ನೆರವೇರಿಸಿದರು.

ತರಾತುರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆರಳಣಿಕೆಯಷ್ಟು ಅಧಿಕಾರಿಗಳು ಹಾಗೂ ಬಿಜೆಪಿಗೆ ಸೇರಿದ ಕೆಲವು ಮುಖಂಡರನ್ನು ಹೊರತುಪಡಿಸಿದರೆ ಬೇರಾರೂ ಇರಲಿಲ್ಲ. ಸ್ಥಳೀಯ ಶಾಸಕ ಸಂಭಾಜಿ ಪಾಟೀಲ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖರಾರೂ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.

ಇದಕ್ಕಿಂತ ಮುಂಚೆ ನಗರದ ಕಾಡಾ ಕಚೇರಿಯಲ್ಲಿ ಸಭೆಯಲ್ಲಿ ಸುರೇಶ ಅಂಗಡಿಯವರು ಪೂಜೆ ನೆರವೇರಿಸುವುದಾಗಿ ಪ್ರಕಟಿಸಿದರು. ‘ಈಗ ಪೂಜೆ ಮಾಡಿ ಬಿಡೋಣ. ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಿದ ನಂತರ ಸಂಚಾರ ಸ್ಥಗಿತಗೊಳಿಸಿ, ಕಾಮಗಾರಿ ಆರಂಭಗೊಳ್ಳಲಿ’ ಎಂದು ಸಭೆಗೆ ಮನವರಿಕೆ ಮಾಡಿದರು.

‘ಸಂಚಾರ ಸ್ಥಗಿತಗೊಳಿಸಲು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಇದಕ್ಕೂ ಮೊದಲು ಈ ರಸ್ತೆಗೆ ಪರ್ಯಾಯ ರಸ್ತೆಗಳನ್ನು ನಿಗದಿಪಡಿಸಬೇಕು. ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮೇಲ್ಸೇತುವೆ ತೆರವು ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೇಳಿದರು.

‘ಈಗಲೇ ಕಾಮಗಾರಿ ಆರಂಭಿಸದಿದ್ದರೆ ಮುಂದೆ ಜೂನ್‌ ವೇಳೆಗೆ ಮಳೆ ಆರಂಭಗೊಳ್ಳುತ್ತದೆ. ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತದೆ. ನಂತರ ಪೂರ್ಣಗೊಳ್ಳಬೇಕಾದರೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ವಿಳಂಬವಾದರೆ, ಸರ್ಕಾರ ಬಿಡುಗಡೆ ಮಾಡಿರುವ ಅನುದಾನವು ವಾಪಸ್‌ ಹೋಗುವ ಆತಂಕವಿದೆ’ ಎಂದು ನುಡಿದರು.

‘ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಏಪ್ರಿಲ್‌ ವೇಳೆಗೆ ಹಸ್ತಾಂತರಗೊಳಿಸಬೇಕು’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

‘ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ 1ನೇ, 2ನೇ ಹಾಗೂ 3ನೇ ರೈಲ್ವೆ ಗೇಟ್‌ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

ಜನರ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ನಮ್ಮಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ರೈಲ್ವೆ, ಮಹಾನಗರ ಪಾಲಿಕೆ, ಪೊಲೀಸ್‌ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

ಹಳೆಯ ಪಿ.ಬಿ. ರಸ್ತೆಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಾದ ನಂತರ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲಿ. ಆಗ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಈಗಲೇ ಮೇಲ್ಸೇತುವೆ ತೆರವು ಮಾಡಿದರೆ, ಜನರ ಸಂಚಾರಕ್ಕೆ ತೊಂದರೆ ಅನುಭವಿಸುತ್ತಾರೆ. ಈ ಯೋಜನೆಯನ್ನು ನಾವು ವಿರೋಧಿಸುತ್ತಿಲ್ಲ. ಜನರಿಗೆ ತೊಂದರೆಯಾಗಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ ಎಂದು ಮಹಾನಗರ ಪಾಲಿಕೆ ಸದಸ್ಯ ದೀಪಕ ಜಮಖಂಡಿ ಹೇಳಿದರು.

ಬಿಜೆಪಿ ಮುಖಂಡ ಅನಿಲ ಬೆನಕೆ ಮಾತನಾಡಿ, 1ನೇ, 2ನೇ ಹಾಗೂ 3ನೇ ರೈಲ್ವೆ ಗೇಟ್‌ ಮೂಲಕ ಹಾದು ಬರಲು ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಈಗಿರುವ ಮೇಲ್ಸೇತುವೆ ಅಕ್ಕಪಕ್ಕ ತಾತ್ಕಾಲಿಕ ರಸ್ತೆಯ ವ್ಯವಸ್ಥೆ ಮಾಡಿಕೊಡಬಹುದು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಅಭಯ ಪಾಟೀಲ ಮಾತನಾಡಿ, ಈಗಿರುವ ಮೇಲ್ಸೇತುವೆ ಪಕ್ಕದಲ್ಲಿ ಗೂಡ್ಸ್‌ಶೆಡ್‌ ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ರಾಜೇಂದ್ರ ಹರಕುಣಿ ಮಾತನಾಡಿ, ಮುಂಬೈ ಹಾಗೂ ಕೊಲ್ಹಾಪುರದಲ್ಲಿ ಪ್ರತಿದಿನ ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತವೆ. ಆದರೆ, ವಾಹನಗಳ ಸಂಚಾರವನ್ನು ತಡೆಗಟ್ಟುವುದಿಲ್ಲ. ಹೊಸ ಹೊಸ ತಂತ್ರಜ್ಞಾನ ಬಳಸಿ, ವಾಹನಗಳ ಸಂಚಾರಕ್ಕೂ ಅನುಕೂಲ ಮಾಡಿಕೊಡುತ್ತಾರೆ, ಕಾಮಗಾರಿಯನ್ನೂ ಪೂರ್ಣಗೊಳಿಸುತ್ತಾರೆ. ಇಂತಹ ತಂತ್ರಜ್ಞಾನವನ್ನು ನಮ್ಮಲ್ಲೇಕೆ ಬಳಸಬಾರದು ಎಂದು ರೈಲ್ವೆ ಇಲಾಖೆಯ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ಜಿಲ್ಲಾಡಳಿತವು ಯೋಜನೆಯ ಪರವಾಗಿದೆ. ಇದಕ್ಕೆ ಅನುಮತಿ ನೀಡಲು ಯಾವುದೇ ಮೀನಮೇಷ ಎಣಿಸುತ್ತಿಲ್ಲ. ಜನರಿಗೆ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲು ಪ್ರಯತ್ನಿಸಲಾಗುತ್ತಿದೆ. ಪೊಲೀಸ್‌, ಮಹಾನಗರ ಪಾಲಿಕೆ ವರದಿ ಬಂದ ನಂತರ ಹಾಗೂ ಪರ್ಯಾಯ ರಸ್ತೆಗಳನ್ನು ಅಂತಿಮಗೊಳಿಸಿದ ನಂತರ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry