ಮಂಗಳವಾರ, ಸೆಪ್ಟೆಂಬರ್ 17, 2019
21 °C

ವಿವಿಧೆಡೆ ಮಾತೃಪೂರ್ಣ ಯೋಜನೆಗೆ ಚಾಲನೆ

Published:
Updated:

ಚಾಮರಾಜನಗರ: ‘ಬಡ ವರ್ಗದ ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಟಿಕತೆಯನ್ನು ಹೆಚ್ಚಿಸಲು ಸರ್ಕಾರವು ಮಾತೃಪೂರ್ಣ ಯೋಜನೆ ಜಾರಿಗೊಳಿಸಿದೆ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ತಾಲ್ಲೂಕಿನ ಹರದನಹಳ್ಳಿ ಗ್ರಾಮದ ನಾಯಕ ಸಮುದಾಯ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆಯು ಬಡವರು, ದೀನದಲಿತರ ಪರವಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಿಸಲು ಸಹಕಾರಿಯಾಗಲಿದೆ ಎಂದರು.

ಗರ್ಭಿಣಿಯರು, ಬಾಣಂತಿಯರು ಅಪೌಷ್ಟಿಕತೆಯಿಂದ ನರಳಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಮಧ್ಯಾಹ್ನದ ವೇಳೆ ಸೊಪ್ಪು, ತರಕಾರಿ ಒಳಗೊಂಡ ಬೇಳೆ ಸಾರು, ಅನ್ನ, ಮೊಟ್ಟೆ, ಕಾಳುಗಳನ್ನು ನೀಡುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೊಪ್ಪು, ತರಕಾರಿ ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ಬಳಸಿಕೊಂಡು ಗರ್ಭಿಣಿಯರು ಆರೋಗ್ಯವಂತ ಮಕ್ಕಳನ್ನು ಪಡೆಯಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರು ಇದೊಂದು ಸೇವೆ ಎಂದು ತಿಳಿದು ಕಾರ್ಯನಿರ್ವಹಿಸಿದರೆ ಸರ್ಕಾರದ ಉದ್ದೇಶ ಖಂಡಿತಾ ಸಫಲವಾಗುತ್ತದೆ. ಈ ಮೂಲಕ ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರದಿಂದ ನೀಡುವ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ತಲುಪಿಸಿ ಅವರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮಾ, ಸಾಕಮ್ಮ, ಸಾವಿತ್ರಮ್ಮ, ರಾಜಮ್ಮ, ಕೆಂಪಮ್ಮ, ಕೃಷ್ಣ, ವೈದ್ಯಾಧಿಕಾರಿ ಶ್ರೀನಿವಾಸ್, ಸಿಡಿಪಿಒ ಮಹದೇವಯ್ಯ, ಮುಖಂಡರಾದ ಶ್ರೀನಿವಾಸ್, ರಂಗಸ್ವಾಮಿ, ಶಿವಣ್ಣ, ವೆಂಕಟರಮಣ ನಾಯಕ ಹಾಜರಿದ್ದರು.

25ನೇ ವಾರ್ಡ್: ನಗರದ 25ನೇ ವಾರ್ಡ್‌ನ ಭಗೀರಥ ನಗರದಲ್ಲಿ ಮಾತೃಪೂರ್ಣ ಯೋಜನೆಗೆ ನಗರಸಭೆ ಸದಸ್ಯ ಮಹೇಶ್ ಉಪ್ಪಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಉಂಟಾಗಬಾರದು ಎಂದು ಕಳಕಳಿಯಿಂದ ಈ ಯೋಜನೆ ಜಾರಿಗೊಳಿಸಿ ಮಧ್ಯಾಹ್ನದ ವೇಳೆ ಸೊಪ್ಪು ತರಕಾರಿ ಒಳಗೊಂಡ ಮೊಟ್ಟೆ, ಕಾಳುಗಳನ್ನು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನಾರಾಯಣ್, ಶಂಕರ್, ಸಿ.ಎಸ್. ನಾಗರಾಜ್, ಅಂಗನವಾಡಿ ಕಾರ್ಯಕರ್ತರಾದ ಸಂಪತ್‌ಕುಮಾರಿ, ಪಿ. ಶಶಿಕಲಾ, ವರಲಕ್ಷ್ಮಿ, ಸಹಾಯಕಿರಾದ ನಾಗಮ್ಮ, ಮಾಯಮ್ಮ, ವಿಜಯಲಕ್ಷ್ಮಿ ಹಾಜರಿದ್ದರು.

ಅಂಬೇಡ್ಕರ್ ಬಡಾವಣೆ: ‘ಮಾತೃಪೂರ್ಣ ಯೋಜನೆ ರಾಜ್ಯದಾದ್ಯಂತ ಜಾರಿಯಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತ ಮಗುವನ್ನು ಪಡೆಯಬೇಕು’ ಎಂದು ನಗರಸಭೆ ಸದಸ್ಯ ಎಸ್. ನಂಜುಂಡಸ್ವಾಮಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಗರಸಭೆ ಸದಸ್ಯೆ ಕಲಾವತಿ ಮಾತನಾಡಿ, ಬಾಣಂತಿಯರು ಮತ್ತು ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮತ್ತು ಔಷಧ ಸೇವಿಸುವಂತೆ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ಯರಾದ ಜಯಲಕ್ಷ್ಮಿ, ಸಿ.ಎನ್‌. ಮಂಜುಳಾ, ಆರ್. ಪಾರ್ವತಿ, ಸಹಾಯಕಿಯರಾದ ಪಿ. ವೀಣಾ, ಶಿವಮ್ಮ, ಪುಟ್ಟಮ್ಮ, ಮುಖಂಡ ಸಿ.ಕೆ. ರವಿಕುಮಾರ್ ಹಾಜರಿದ್ದರು.

Post Comments (+)