ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಉಚಿತ; ಸಾರಿಗೆ ದುಬಾರಿ!

Last Updated 4 ಅಕ್ಟೋಬರ್ 2017, 5:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ರೋಗಿಗಳಿಗೆ ಸಾರಿಗೆ ಸಂಪರ್ಕ ಸಮಸ್ಯೆ ತಲೆದೋರಿದೆ. ನಗರದಲ್ಲಿರುವ ಬಸ್‌ ನಿಲ್ದಾಣಗಳಿಂದ ದೂರದಲ್ಲಿರುವ ಆಸ್ಪತ್ರೆಗೆ ತೆರಳಲು ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರು, ಚಿಕ್ಕ ಮಕ್ಕಳು ಪರದಾಡುತ್ತಿದ್ದಾರೆ.

ಇದೇ ಅವಕಾಶವನ್ನು ಸದ್ಯ ಉಪಯೋಗಿಸಿಕೊಳ್ಳುವ ಆಟೊ ಚಾಲಕರು ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಂದ ಬಾಯಿ ಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಆರೋಗ್ಯ, ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಗಮನ ಹರಿಸುತ್ತಿಲ್ಲ ಎಂದು ಆಸ್ಪತ್ರೆಗೆ ಬರುವವರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಆಸ್ಪತ್ರೆ ಹಳೆ ಕಟ್ಟಡದಲ್ಲಿದ್ದಾಗ ನಗರಸಭೆ ಖಾಸಗಿ ಬಸ್‌ ನಿಲ್ದಾಣ ಮತ್ತು ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ ಕೂಗಳತೆ ದೂರದಲ್ಲಿದ್ದವು. ಹೀಗಾಗಿ ರೋಗಿಗಳಿಗೆ ತೊಂದರೆಯಾಗುತ್ತಿರಲಿಲ್ಲ. ಇದೀಗ ಆಸ್ಪತ್ರೆಯನ್ನು 8ನೇ ವಾರ್ಡ್‌ನಲ್ಲಿ ನಿರ್ಮಿಸಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ನಂತರ ಕಳೆದ ನಾಲ್ಕೈದು ತಿಂಗಳಿಂದ ಇತ್ತೀಚೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆಗಿಂತಲೂ ಪ್ರಯಾಣದ ವೆಚ್ಚವೇ ‘ದುಬಾರಿ’ಯಾಗುತ್ತಿದೆ.

ಪ್ರಸ್ತುತ ಜಿಲ್ಲಾ ಆಸ್ಪತ್ರೆಗೆ ನಿತ್ಯ ಸರಾಸರಿ 500 ರೋಗಿಗಳು ಬರುತ್ತಾರೆ. ಒಂದೊಂದು ಬಾರಿ ಅದರ ಸಂಖ್ಯೆ 800ಕ್ಕೂ ತಲುಪುದುಂಟು. ಆ ಪೈಕಿ ಬಹುತೇಕರು ಬಾಧೆ ಪಟ್ಟುಕೊಂಡೇ ಆಸ್ಪತ್ರೆಗೆ ಬರುತ್ತಾರೆ. ಇನ್ನು ಶೇ 50 ರಷ್ಟು ಜನರು ಆಟೊಗಳಿಗೆ ಕೇಳಿದಷ್ಟು ಬಾಡಿಗೆ ಕೊಟ್ಟು ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದಾರೆ.

‘ಈ ಹಿಂದೆ ಬಸ್‌ ನಿಲ್ದಾಣದಿಂದ ನಡೆದುಕೊಂಡೇ ಆಸ್ಪತ್ರೆಗೆ ಹೋಗುತ್ತಿದ್ದೆವು. ಇದೀಗ ಸ್ಥಳ ಬದಲಾಯಿಸಿರುವ ಕಾರಣ ಹುಡುಕಾಡಿ ಸುಸ್ತಾಗುವುದು ಬೇಡ ಎಂದು ಆಟೊ ಕೇಳಲು ಹೋದರೆ ಒಂದು ಕಿ.ಮೀ ನಷ್ಟು ದೂರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ₹ 50 ಕೇಳುತ್ತಾರೆ. ಉಳ್ಳವರು ಕೊಟ್ಟು ಹೋಗುತ್ತಾರೆ. ಬಡವರು, ಕೂಲಿನಾಲಿ ಮಾಡಿ ಬದುಕುವ ಜನರು ಬರೀ ಆಟೊಗಾಗಿಯೇ ₹ 100 ಎಲ್ಲಿಂದ ತಂದಾರು’ ಎಂದು ಮುಷ್ಟೂರಿನಿಂದ ಆಸ್ಪತ್ರೆಗೆ ಬಂದಿದ್ದ ಗಾಯಿತ್ರಿ ಹೇಳಿದರು.

‘ಆಸ್ಪತ್ರೆಯಿಂದ ಮುಷ್ಟೂರು ಒಂದೂವರೆ ಕಿಲೋ ಮೀಟರ್‌ ದೂರವಿದೆ. ಅಷ್ಟಕ್ಕೆ ಆಟೊ ಚಾಲಕರು ₹ 100 ಬಾಡಿಗೆ ಕೇಳುತ್ತಾರೆ. ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು? ಹಳ್ಳಿಗಳಿಂದ ಬರುವ ಬಡಜನರು ತಮ್ಮ ನೋವನ್ನು ಯಾರ ಬಳಿ ತೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಈ ವಿಚಾರದಲ್ಲಿ ಕನಿಷ್ಠ ಮಾನವೀಯತೆಯಿಂದ ಯೋಚಿಸುವುದು ಬೇಡವೆ’ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆಯ ಬಳಿ ಬಸ್‌ ನಿಲ್ದಾಣ ಇಲ್ಲದೆ ಇರುವುದು ಮತ್ತು ಆಸ್ಪತ್ರೆಗೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸದೆ ಇರುವುದು ರೋಗಿಗಳನ್ನು ಬಹಳಷ್ಟು ಹೈರಾಣು ಮಾಡಿದೆ. ಆಸ್ಪತ್ರೆ ಕಟ್ಟಿಸಲು ಕಾಳಜಿ ತೋರುವವರಿಗೆ ಇಂತಹ ಕನಿಷ್ಠ ವಿಷಯಗಳು ಏಕೆ ಹೊಳೆಯುವುದಿಲ್ಲ? ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಎನ್ನುವ ಆಸೆಗೆ ಪರಸ್ಥಳದಿಂದ ಬರುವ ಜನರ ಕಷ್ಟ ಕೇಳುವವರು ಯಾರು’ ಎಂದು ತಿಪ್ಪೇನಹಳ್ಳಿ ನಿವಾಸಿ ರಘುರಾಮ್‌ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರನ್ನು ಪ್ರಶ್ನಿಸಿದಾಗ, ‘ಇದು ತುಂಬಾ ಕಳವಳದ ವಿಚಾರ. ನಾನು ಶೀಘ್ರ ಕೆ.ಎಸ್.ಆರ್‌.ಟಿ.ಸಿ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆ. ಆದಷ್ಟು ಬೇಗ ಜನರಿಗೆ ಅನುಕೂಲವಾಗುವಂತಹ ಪರ್ಯಾಯ ವ್ಯವಸ್ಥೆ ಮಾಡಿಸೋಣ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT