ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಗಲಿಯ ಕುಟುಂಬಗಳ ತೆರವು ಮಾಡುವುದಿಲ್ಲ: ರೈ

Last Updated 4 ಅಕ್ಟೋಬರ್ 2017, 6:00 IST
ಅಕ್ಷರ ಗಾತ್ರ

ಮೂಡಿಗೆರೆ: ಮಸಗಲಿ ಗ್ರಾಮದಲ್ಲಿರುವ 211 ಕುಟುಂಬಗಳನ್ನು ತೆರವು ಮಾಡುವುದಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದರು. ಪಟ್ಟಣದ ರೈತಭವನದಲ್ಲಿ ತಾಲ್ಲೂಕು ಬೆಳೆಗಾರರ ಒಕ್ಕೂಟದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಮುದಾಯ ಭವನ ಶಂಕುಸ್ಥಾಪನೆ ಹಾಗೂ ಅಂತರರಾಷ್ಟ್ರೀಯ ಕಾಫಿ ದಿನಾ ಚರಣೆಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕೇಂದ್ರ ಬೆಲೆ ಆಯೋಗದ ಮಾಜಿ ಸದಸ್ಯ ಡಿ.ಎಸ್‌. ರಘು ಮಾತನಾಡಿ, ‘ಮಸಗಲಿ ಒತ್ತುವರಿ ಪ್ರಕರಣವನ್ನು ತೆರವುಗೊಳಿಸಲು ಸಿದ್ಧತೆ ನಡೆಸಲಾಗು ತ್ತಿದೆ ಎಂಬ ಸುದ್ದಿಯಿದ್ದು, 211 ಕುಟುಂಬಗಳು ಬೀದಿಪಾಲಾಗುವ ಅಪಾಯವಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಸಚಿವರು ಈ ಪ್ರಕರಣವು ನ್ಯಾಯಾಲಯದಲ್ಲಿದ್ದು, ಯಾವುದೇ ಕುಟುಂಬವನ್ನು ತೆರವು ಮಾಡುವುದಿಲ್ಲ. ಅಲ್ಲದೇ ಇದುವರೆಗೂ 22 ಕಾಡು ಜಾತಿಯ ಮರಗಳನ್ನು ಕಡಿಯಲು ಅನುಮತಿಯಿತ್ತು. ಅದನ್ನು ಇದೀಗ 42 ಜಾತಿಗೆ ಹೆಚ್ಚಿಸಲಾಗಿದೆ. ಮಲೆನಾಡಿನಲ್ಲಿ ರೈಲ್ವೆ ಹಳಿಯ ಬೇಲಿ ನಿರ್ಮಿಸಿ ಕಾಡಾನೆ ದಾಳಿ ತಡೆಯಲು ಸಾಧ್ಯವಾಗುವುದಿಲ್ಲ. ಇಲ್ಲಿ ಅರಣ್ಯ ಭೂಮಿಯು ಕಂದಾಯ ಭೂಮಿಯೊಂದಿಗೆ ಸೇರಿ ಹೋಗಿದ್ದು, ಛಿದ್ರ ಛಿದ್ರವಾಗಿದೆ. ಇದರಿಂದ ಬೇಲಿ ನಿರ್ಮಾಣ ಅಸಾಧ್ಯವಾಗಿದ್ದು, ಸೋಲಾರ್‌ ಬೇಲಿ ಅಳವಡಿಸಲು ಬೆಳೆಗಾರರಿಗೆ ಶೇ 50 ರಿಯಾಯಿತಿ ನೀಡಲಾಗುವುದು ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಒತ್ತುವರಿ ಕಾಫಿ ತೋಟಗಳನ್ನು ಕೇರಳ ಮಾದರಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೀಡುವಂತೆ ಬೆಳೆಗಾರರು ಒತ್ತಾಯಿಸಿದ್ದು, ಕೇರಳ ಮಾದರಿಯ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುವುದು. ಫಾರಂ 53 ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚಿಸಿದ್ದು, ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ, ನೋಂದಾಯಿಸಿಕೊಂಡು ಆರ್‌ಟಿಸಿ ನೀಡಲು ಯಾವುದೇ ಅಡ್ಡಿಯಿಲ್ಲ. ಇದಕ್ಕಾಗಿ ಎಲ್ಲ ತಹಶೀಲ್ದಾರ್‌ಗಳಿಗೂ ಸೂಚನೆ ನೀಡಿದ್ದು, ಎಲ್ಲ ಇತ್ಯಾರ್ಥ ಪ್ರಕರಣಗಳಿಗೂ ಆರ್‌ಟಿಸಿ ನಮೂದಿಸು ವಂತೆ ತಿಳಿಸಲಾಗಿದೆ’ ಎಂದರು.

ಕಂದಾಯ ಕಾಯ್ದೆ 192ರಲ್ಲಿ ಕಾಫಿ ತೋಟಗಳನ್ನು ಕೈ ಬಿಡುವಂತೆ ಮಾಡಿರುವ ಮನವಿಗೆ ಸಂಪೂರ್ಣ ಸಹಕಾರವಿದ್ದು, ಇದಕ್ಕೆ ಬೆಳೆಗಾರರ ದೃಷ್ಟಿಯಿಂದ ಜನಪ್ರತಿನಿಧಿಗಳೆಲ್ಲರೂ ಸೇರಿ ಕೇಂದ್ರದ ಮೇಲೆ ಒತ್ತಾಯ ತಂದು, ಕಾನೂನು ತಿದ್ದುಪಡಿ ಮಾಡ ಬೇಕಿದೆ. ಕಾಫಿ ತೋಟಗಳಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೂ ಸೂರು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ಸಮಸ್ಯೆ ಯನ್ನು ಶೀಘ್ರವಾಗಿ ಬಗೆಹರಿಸಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮಾತನಾಡಿ, ‘ಬಗರಹುಕುಂ ಪ್ರಕರಣ ಗಳಲ್ಲಿ ಇತ್ಯಾರ್ಥ ಗೊಂಡ ಭೂಮಿಗೆ ಆರ್‌ಟಿಸಿ ನೀಡುತ್ತಿಲ್ಲ. ಅಲ್ಲದೆ, ತಾಲ್ಲೂಕು ಕಚೇರಿಯಲ್ಲಿ ಕಡತ ಗಳೇ ನಾಪತ್ತೆ ಯಾಗುವ ಪ್ರಕರಣಗಳು ನಡೆಯುತ್ತಿದ್ದು, ಅಧಿಕಾರಿಗಳ ಈ ಕೃತ್ಯದಿಂದ ಬೇಸತ್ತುವಂತಾಗಿದೆ’ ಎಂದರು.

ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಪ್ರಸ್ತಾವಿಕವಾಗಿ ಮಾತನಾಡಿ, ‘ಕಾಫಿ ಬೆಳೆಗಾರರಿಗೆ ಒತ್ತುವರಿ ಸಮಸ್ಯೆ ತೂಗುಗತ್ತಿಯಾಗಿದ್ದು, ಕೇರಳ ಮಾದರಿಯಲ್ಲಿ ಗುತ್ತಿಗೆ ಪದ್ಧತಿ ಜಾರಿಯಾಗಬೇಕು. ಮಸಗಲಿ ಗ್ರಾಮವನ್ನು ರಕ್ಷಿಸಬೇಕು, ಕಳಸ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ ಎಂ.ಕೆ. ಪ್ರಾಣೇಶ್‌, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌, ಕೇಂದ್ರ ಮಾಜಿ ಸಚಿವೆ ಡಿ.ಕೆ. ತಾರಾದೇವಿ, ಮಾಜಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಎಚ್‌.ಎಂ. ವಿಶ್ವನಾಥ್‌, ಕೊಮಾರ್ಕ್‌ ಅಧ್ಯಕ್ಷ ಅರೆಕೂಡಿಗೆ ಶಿವಣ್ಣ, ತಾಲ್ಲೂಕು ಬೆಳಗಾರರ ಸಂಘದ ಅಧ್ಯಕ್ಷ ಬಸವ ರಾಜ್‌, ಪದಾಧಿಕಾರಿಗಳಾದ ಬಿ.ಎಲ್‌. ರಾಮದಾಸ್‌, ಬಾಲಕೃಷ್ಣ, ಡಿ.ಬಿ. ಸುಬ್ಬೇಗೌಡ, ಅತ್ತೀಕಟ್ಟೆ ಜಗನ್ನಾಥ್‌, ಹಳಸೆ ಶಿವಣ್ಣ, ಟಿ.ಡಿ. ರಾಜೇಗೌಡ, ಜಿಲ್ಲಾಧಿಕಾರಿ ಜಿ. ಸತ್ಯವತಿ, ಹೆಚ್ಚು ವರಿ ಜಿಲ್ಲಾಧಿಕಾರಿ ವೈಶಾಲಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ. ಡಿ.ಎಲ್‌. ವಿಜಯಕುಮಾರ್, ಎಪಿಎಂಸಿ ಅಧ್ಯಕ್ಷ ಎಂ.ಸಿ. ನಾಗೇಶ್‌, ತೀರ್ಥಮಲ್ಲೇಶ್‌, ಎಂ.ಎನ್‌. ಕಲ್ಲೇಶ್‌, ಸತೀಶ್‌, ಸಚ್ಚಿನ್‌ಮಿಗಾ, ಜಯಪಾಲ್‌, ಡಿ.ಎಲ್‌. ಅಶೋಕ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT