ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಮಳೆ; ನಿಷ್ಕ್ರಿಯ ಕೊಳವೆಬಾವಿಗಳಲ್ಲಿ ಉಕ್ಕಿದ ನೀರು

Last Updated 4 ಅಕ್ಟೋಬರ್ 2017, 6:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಚಳ್ಳಕೆರೆ ತಾಲ್ಲೂಕಿನ ದೊಡ್ಡುಳ್ಳಾರ್ತಿ, ಜಡೇಕುಂಟೆ, ಮರಿಕುಂಟೆ ಹಾಗೂ ಯಾದಲಗಟ್ಟೆ ಗ್ರಾಮದಲ್ಲಿನ ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ನಿಷ್ಕ್ರಿಯ ಕೊಳವೆಬಾವಿಗಳಲ್ಲಿ ನೀರು ಉಕ್ಕುತ್ತಿದೆ. ಚೆಕ್‌ ಡ್ಯಾಂ, ಗೋಕಟ್ಟೆಗಳಿಗೂ ನೀರು ಬಂದಿದೆ.

ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಕೆರೆ ಕಟ್ಟೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಚಳ್ಳಕೆರೆ ತಾಲ್ಲೂಕಿನ ಜಡೆಕುಂಟೆ, ನಾಯಕನಹಟ್ಟಿ, ದೊಡ್ಡ ಉಳ್ಳಾರ್ತಿ, ರೆಡ್ಡಿಹಳ್ಳಿ, ಗ್ರಾಮಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಹಿಂಭಾಗದ ಗ್ರಾಮಗಳಾದ ಕೂನಿಕೆರೆ, ಕುರುಬರಹಳ್ಳಿ, ಹುಚ್ಚವ್ವನಹಳ್ಳಿ, ಮಾಯಸಂದ್ರ , ಲಕ್ಕವ್ವನಹಳ್ಳಿ  ಸುತ್ತಲಿನ ಗ್ರಾಮಗಳಲ್ಲಿ ಇದೇ ಮೊದಲ ಬಾರಿಗೆ ಗೋಕಟ್ಟೆ, ಚೆಕ್ ಡ್ಯಾಂಗಳು ತುಂಬಿ ಹಳ್ಳ ಹರಿಯುವಂಥ ಮಳೆಯಾಗಿದೆ.  ಗೌನಹಳ್ಳಿ, ಗೋಗುದ್ದು, ಗುಡಿಹಳ್ಳಿ, ಭೂತಯ್ಯನಹಟ್ಟಿ ವ್ಯಾಪ್ತಿಯಲ್ಲಿ ಮಳೆ ಬಂದಿದ್ದು, ಇದೇ ಪ್ರಥಮಬಾರಿಗೆ ಗೌನಹಳ್ಳಿ ಕೆರೆಗೆ ಒಂದೂವರೆ ಅಡಿ ನೀರು ಹರಿದಿದೆ.

ಧರ್ಮಪುರ, ಹರಿಯಬ್ಬೆ ವ್ಯಾಪ್ತಿಯಲ್ಲೂ ಮಳೆಯಾಗಿ, ಚೆಕ್ ಡ್ಯಾಂಕ್, ಕೃಷಿ ಹೊಂಡಗಳು ತುಂಬಿವೆ. ಹಿರಿಯೂರು, ಚಳ್ಳಕೆರೆ ಭಾಗದಲ್ಲಿ ವೇದಾವತಿ ನದಿ ಹರಿಯುತ್ತಿದೆ. ಚಳ್ಳಕೆರೆ ತಾಲ್ಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಏರಿ ಬಳಿಯ ಬತ್ತಿಹೋದ ಐದಾರು ಕೊಳವೆಬಾವಿಗಳಲ್ಲಿ ನೀರು ಉಕ್ಕುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಉಕ್ಕುತ್ತಿರುವುದನ್ನು ಕಂಡು ಜನರು ಸಂತಸಪಡುತ್ತಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಎಚ್. ಡಿ.ಪುರ, ನಂದನಹೊಸೂರು, ನಾಕಿಕೆರೆ, ತೇಕಲವಟ್ಟಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ, ಸಿರಿಗೆರೆ, ಜಾನಕೊಂಡ ಭಾಗದಲ್ಲಿ ಹದ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಬಾಗೂರು ಸುತ್ತಲಿನ ಹಳ್ಳಿಗಳಲ್ಲಿ ಬಿರುಸಿನ ಮಳೆಯಾದ ವರದಿಯಾಗಿದೆ.  ದೊಡ್ಡಕಿಟ್ಟದಹಳ್ಳಿ, ಸಣ್ಣ ಕಿಟ್ಟದಹಳ್ಳಿ ಸುತ್ತ ಬಿರುಸಿನ ಮಳೆಯಾಗಿದೆ. ದೊಡ್ಡ ಕಿಟ್ಟದಹಳ್ಳಿ ಗ್ರಾಮದ ಬಳಿ ಗುಂಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ. ಈ ನೀರು ಮುಂದೆ ವಾಣಿ ವಿಲಾಸಸಾಗರ ಸೇರುತ್ತದೆ. ಈ ಚೆಕ್ ಡ್ಯಾಂ ನಿರ್ಮಿಸಿ ಎರಡು ವರ್ಷ ಆಗಿತ್ತು. ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಸುಧಾರಿಸುವ ವಿಶ್ವಾಸ ರೈತರದ್ದು.

ಹಿರಿಯೂರಿನಲ್ಲಿ 64.8 ಮಿ,ಮೀ ಮಳೆ : ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆಯ ವಿವರದನ್ವಯ ಹಿರಿಯೂರಿನಲ್ಲಿ ಅತಿಹೆಚ್ಚು ಅಂದರೆ 64.8 ಮಿ.ಮೀ. ಅಧಿಕ ಮಳೆಯಾಗಿದೆ. ಉಳಿದಂತೆ ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 10.2 , ಪರಶುರಾಂಪುರ 8.2, ನಾಯಕನಹಟ್ಟಿ 5.2, ಡಿ.ಮರಿಕುಂಟೆ 61.6, ತಳಕು 9.8, ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ 1 ರಲ್ಲಿ 12, ಚಿತ್ರದುರ್ಗ 2 ರಲ್ಲಿ 15.2, ಹಿರೇಗುಂಟನೂರು 4, ಐನಹಳ್ಳಿ 16.2, ಭರಮಸಾಗರ 52.3, ಸಿರಿಗೆರೆ 21.8, ತುರುವನೂರು 5.6, ಹಿರಿಯೂರು ತಾಲ್ಲೂಕಿನ ಹಿರಿಯೂರು 64.8, ಬಬ್ಬೂರು 42, ಈಶ್ವರಗೆರೆ 16.4, ಇಕ್ಕನೂರು 7, ಸೂಗೂರು 4.2, ಜೆ.ಜಿ.ಹಳ್ಳಿ 5, ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ 8.6, ರಾಮಗಿರಿ 39.2, ಚಿಕ್ಕಜಾಜೂರು 24.8, ಬಿ.ದುರ್ಗ 9.2, ಎಚ್.ಡಿ.ಪುರ 23, ತಾಳ್ಯ 25.4, ಹೊಸದುರ್ಗ 18.4, ಬಾಗೂರು 5, ಮತ್ತೋಡು 18.2, ಶ್ರೀರಾಂಪುರ 4, ಮಾಡದಕೆರೆ 20ಮೊಳಕಾಲ್ಮೂರು 4, ಬಿ.ಜಿ.ಕೆರೆ 24.4, ರಾಯಪುರ 7.9 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT