ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಿನಲ್ಲಿಂದು ಮಠಾಧೀಶರ ಸತ್ಯಾಗ್ರಹ, ಹಳೇಬೀಡು ಬಂದ್‌

Last Updated 4 ಅಕ್ಟೋಬರ್ 2017, 6:36 IST
ಅಕ್ಷರ ಗಾತ್ರ

ಬೇಲೂರು: ‘ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ 10 ಮಠಾಧೀಶರು ಮತ್ತು ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮತ್ತು ರಸ್ತೆ ತಡೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ಅದಕ್ಕೆ ಸರ್ಕಾರವೇ ಹೊಣೆ’ ಎಂದು ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಎಚ್ಚರಿಸಿದರು.

‘ಪಟ್ಟಣದ ನೆಹರೂ ನಗರ ವೃತ್ತದಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಅ. 4ರಿಂದ ಮಠಾಧೀಶರು, ಸಾರ್ವಜನಿಕರು, ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಹೇಳಿದರು.

ಬೆಳಿಗ್ಗೆ 9ಕ್ಕೆ ಹಳೇಬೀಡು ಪಟ್ಟಣವನ್ನು ಬಂದ್‌ ಮಾಡಲಾಗುವುದು. ನಂತರ ಬೆಳಿಗ್ಗೆ 11.30ಕ್ಕೆ ಬೇಲೂರು ಪಟ್ಟಣಕ್ಕೆ ಬಂದು ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗ ಮುದ್ರೆ ಹಾಕಲಾಗುವುದು. ಬಳಿಕ ನೆಹರೂ ನಗರ ವೃತ್ತದಲ್ಲಿ ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿ ಬೇಲೂರಿನಿಂದ ಹೊರ ಹೋಗುವ ಮತ್ತು ಬರುವ ಎಲ್ಲ ವಾಹನಗಳನ್ನು ತಡೆಗಟ್ಟಲಾಗುವುದು. ಈ ಹೋರಾಟದಲ್ಲಿ ಮೂರು ಹೋಬಳಿಗಳ ಸುಮಾರು 5ರಿಂದ 10 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

‘ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿ ಮಠಾಧೀಶರನ್ನು ಬಂಧಿಸಿದರೆ, ನಾವು ಜೈಲಿಗೆ ಹೋಗಲು ಸಿದ್ಧ. ಬೇಲೂರು ತಾಲ್ಲೂಕಿನಲ್ಲಿ ನೀರಾವರಿಗೆ ಆಗ್ರಹಿಸಿ ಸ್ವಾಮೀಜಿಗಳು ಪ್ರತಿಭಟನೆ ನಡೆಸುತ್ತಿರುವುದು ಇದೇ ಪ್ರಥಮ. ರೈತರಿಗೆ, ಜನರಿಗೆ ಬದುಕಲು ನೀರು ಬೇಕಾಗಿದೆ. ಸದಾ ಬರಗಾಲದಿಂದ ಬಳಲುತ್ತಿರುವ ಈ ಮೂರು ಹೋಬಳಿಗಳಿಗೆ ನೀರು ಹರಿಸುವ ವಿಚಾರದಲ್ಲಿ ಮೂರು ಪಕ್ಷಗಳು ವಿಫಲವಾಗಿವೆ.

ಮೂರು ಪಕ್ಷದ ಮುಖಂಡರು, ಜನಪ್ರತಿನಿಧಿಗಳಿಗೆ ನೀರು ಕೊಡಲು ಸಾಧ್ಯವಾಗದಿದ್ದರೆ, ಜನರಿಗೆ ವಿಷ ಕೊಡಲಿ. ಒಂದು ತಿಂಗಳಿನಿಂದ ನೀರಿನ ವಿಚಾರಕ್ಕೆ ಹೋರಾಟ ಮಾಡುತ್ತಿದ್ದರೂ ಯಾವುದೇ ಜಿಲ್ಲಾಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ, ಸಚಿವರಾಗಲಿ ಬೇಡಿಕೆ ಆಲಿಸಿಲ್ಲ.

ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ನೀರಾವರಿ ಸಚಿವರು ಸ್ಥಳಕ್ಕೆ ಬಂದು ರಣಘಟ್ಟ ನೀರಾವರಿ ಯೋಜನೆ, ಎತ್ತಿನಹೊಳೆ ಯೋಜನೆ ಮತ್ತು ಯಗಚಿ ಜಲಾಶಯ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲು ಭರವಸೆ ಮತ್ತು ಮಂಜೂರಾತಿ ನೀಡುವವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು. ‘ನೀರಿನ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಲಾಗುತ್ತಿದೆ. ಜನರಿಗೆ ನೀರು ದೊರಕಬೇಕೆಂಬುದಷ್ಟೇ ತಮ್ಮ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT