ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಹೆಚ್ಚಿದ ಲದ್ದಿ ಹುಳು ಬಾಧೆ; ಕೃಷಿ ಅಧಿಕಾರಿಗಳು ಭೇಟಿ

Published:
Updated:
ಹೆಚ್ಚಿದ ಲದ್ದಿ ಹುಳು ಬಾಧೆ; ಕೃಷಿ ಅಧಿಕಾರಿಗಳು ಭೇಟಿ

ರಾಣೆಬೆನ್ನೂರು: ತಾಲ್ಲೂಕಿನ ಮಣಕೂರ, ಇಟಿಗಿ, ಹಲಗೇರಿ, ಚಳಗೇರಿ ಕಮದೋಡ ಗ್ರಾಮಗಳಲ್ಲಿ ಲದ್ದಿ ಹುಳ ಬಾಧೆಯಿಂದ ಹಾನಿಗೊಂಡ ಮೆಕ್ಕೆಜೋಳದ ಹೊಲಗಳಿಗೆ ಮಂಗಳವಾರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎಫ್‌.ಎ.ಭಗವಾನ್‌ ತಂಡವು ಭೇಟಿ ನೀಡಿ ಪರಿಶೀಲಿಸಿತು.

ಈ ಗ್ರಾಮಗಳ ಪ್ರಭು ಚಲವಾದಿ, ಭರಮಪ್ಪ ಚಲುವಾದಿ, ಲೊಕೇಶ ದೇವೆಂದ್ರಪ್ಪ ಮಡಿವಾಳರ, ಚಂದ್ರಪ್ಪ ದಡ್ಡಿಮನಿ, ಹನುಮಂತಪ್ಪ ಕಬ್ಬಾರ ಅವರ ಜಮೀನಿನಲ್ಲಿ ಲದ್ದಿ ಹುಳ ಬಾಧೆಯ ಬಗ್ಗೆ ಅ.2ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ‘ದಾವಣಗೆರೆ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಹುಳು ಕಂಡು ಬಂದಿದೆ’ ಎಂದು ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.

‘ತಾಲ್ಲೂಕಿನಲ್ಲಿ 24,343 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಬೆಳೆಯು ತೆನೆ ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಈಚೆಗೆ ಕುಪ್ಪೇಲೂರು, ಮೆಡ್ಲೇರಿ ಮತ್ತು ರಾಣೆಬೆನ್ನೂರು ಹೋಬಳಿಗಳಲ್ಲಿ ಲದ್ದಿ ಹುಳುವಿನ ಬಾಧೆ ಕಂಡುಬಂದಿದೆ’ ಎಂದರು.

ಹತೋಟಿ ಕ್ರಮಗಳು: ಬೆಲ್ಲವನ್ನು ನೀರಿನಲ್ಲಿ ಕರಗಿಸಿ, ಮೋನೋಕ್ರೋಟೋಪಾಸ್ ಔಷಧಿ ಮತ್ತು ಬತ್ತದ ತೌಡನ್ನು ಬೆರೆಸಿ ಮಿಶ್ರಣವನ್ನು ಗಾಳಿಯಾಡದಂತೆ ಮುಚ್ಚಿ, ಒಂದು ರಾತ್ರಿಯಿಡೀ ಕೊಳೆಯಲು ಬಿಡಬೇಕು. ಸಂಜೆ ವೇಳೆ ಕೈಗವಸು ಧರಿಸಿಕೊಂಡು ಬೆಳೆಗಳಿಗೆ ಎರಚಬೇಕು. ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಹುಳುಗಳನ್ನು ಆಕರ್ಷಿಸಬಹುದು.

ಪ್ರತಿ ಹೆಕ್ಟೇರ್‌ಗೆ ಬತ್ತದ ತೌಡು- 50 ಕೆ.ಜಿ, ಬೆಲ್ಲ- 5 ಕೆ.ಜಿ, ಮೋನೋಕ್ರೋಟಪಾಸ್ 625 ಮಿ.ಲೀ, ನೀರು 10 ಲೀ. ಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಫ್‌.ಎ. ಭಾಗವಾನ್‌ ತಿಳಿಸಿದ್ದಾರೆ. ಇದೇ 4 ರಂದು ಧಾರವಾಡ ಕೃಷಿ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ನೀಡಲಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಗುತ್ತಲ ವರದಿ: ಗೋವಿನ ಜೋಳಕ್ಕೆ ಲದ್ದಿ ಹುಳ ಬಾಧಿಸಿದ್ದು, ಬೆಳೆ ನಷ್ಟದ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಮುಂಗಾರು ಆರಂಭದಲ್ಲಿ ತೀವ್ರ ಬರದ ಪರಿಣಾಮ ಬೆಳೆ ನಷ್ಟವಾಗಿತ್ತು. ಆದರೆ, ವಿಳಂಬವಾಗಿ ಮಳೆ ಸುರಿಯಿತು. ಹೀಗಾಗಿ ರೈತರು ತಡವಾಗಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಬಳಿಕ ನಿರಂತರ ಮಳೆ ಸುರಿದು ಹುಳದ ಬಾಧೆ ಕಾಡುತ್ತಿದೆ.

‘ಲದ್ದಿ ಹುಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು. ಬೆಳೆಯನ್ನು ಸಂಪೂರ್ಣ ನಾಶ ಮಾಡುತ್ತಿದೆ. ಹಲವು ರೈತರು ಬೆಳೆಯನ್ನು ಹರಗಿ ಸ್ವಚ್ಛಗೊಳಿಸಿದ್ದಾರೆ. ಲದ್ದಿ ಹುಳು ಹತೋಟಿಗೆ ಬಾರದಿದ್ದರೆ, ಗೋವಿನ ಜೋಳದ ಬೆಳೆಯನ್ನು ಸಂಪೂರ್ಣ ನಾಶ ಮಾಡಬೇಕಾದ ಸ್ಥಿತಿ ಇದೆ’ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Post Comments (+)