ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನೀರಿನ ಅನಧಿಕೃತ ಬಳಕೆಗೆ ನಿರ್ಬಂಧ

Last Updated 4 ಅಕ್ಟೋಬರ್ 2017, 7:13 IST
ಅಕ್ಷರ ಗಾತ್ರ

ಕೋಲಾರ: ‘ಕೆರೆ, ಕುಂಟೆ, ಪುಷ್ಕರಣಿ ಮತ್ತು ಚೆಕ್‌ಡ್ಯಾಂಗಳಲ್ಲಿ ಶೇಖರಣೆಯಾಗಿರುವ ನೀರನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಸಾಕಷ್ಟು ಕೆರೆಗಳು ಕೋಡಿ ಹರಿದಿವೆ. ಬಹುಪಾಲು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ಈ ನೀರನ್ನು ಕೃಷಿ ಉದ್ದೇಶಕ್ಕೆ ಬಳಕೆ ಮಾಡದಂತೆ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.

‘ರೈತರು ಅಕ್ರಮವಾಗಿ ಮೋಟರ್‌  ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಕೆರೆ ನೀರು ಉಪಯೋಗಿಸುವುದನ್ನು ನಿರ್ಬಂಧಿಸಲಾಗಿದೆ. ಅಧಿಕಾರಿಗಳ ಕಣ್ತಪ್ಪಿಸಿ ಕೆರೆ ನೀರು ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಬರ ಪರಿಸ್ಥಿತಿ ಇದ್ದ ಕಾರಣ ಜನರಿಗೆ ಜೀವನ ನಡೆಸಲು ಸಂಕಷ್ಟ ಎದುರಾಗಿತ್ತು. ನೀರಿನ ಅಭಾವದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಜನ ಇದನ್ನು ಮನಗಂಡು ನೀರನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದರು.

ನಿರೀಕ್ಷೆ ಇದೆ: ‘ಕೆರೆ ತೂಬು ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೆರೆ ಕಟ್ಟೆಗಳ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಿ ಕೊಡುವಂತೆ ಅಧಿಕಾರಿಗಳು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭತ್ತದ ಬೆಳೆ: ‘ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕಿನ ಕೆಲವೆಡೆ ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ಭತ್ತ ಬೆಳೆಯದಂತೆ ಅವರಿಗೆ ಕೃಷಿ ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕು. ಅಲ್ಪ ಸ್ವಲ್ಪ ಮಳೆ ಬಂದು ಕಾಲುವೆಯಲ್ಲಿ ನೀರು ಹರಿಯುತ್ತಿದ್ದಂತೆ ರೈತರು ಭತ್ತ ಬೆಳೆಯುತ್ತಾರೆ. ಈ ಬೆಳೆಗೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ಕೆಲ ದಿನಗಳ ಕಾಲ ಭತ್ತ ಬೆಳೆಯುವುದನ್ನು ಸ್ಥಗಿತಗೊಳಿಸುವುದು ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

ಮೀಟರ್‌ ಅಳವಡಿಕೆ: ‘ಪ್ರತಿ ತಾಲ್ಲೂಕಿನಲ್ಲಿ ತಲಾ ಎರಡು ಗ್ರಾಮ ಪಂಚಾಯಿತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಮನೆಗಳಲ್ಲಿ ನೀರಿನ ಬಳಕೆಗೆ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಸಾಕಷ್ಟು ಗ್ರಾಮಗಳಲ್ಲಿ ನೀರು ಪೋಲಾಗುತ್ತಿದೆ. ಅಲ್ಲದೇ, ಜನರಿಗೆ ನೀರಿನ ಮಿತ ಬಳಕೆ ಬಗ್ಗೆ ಅರಿವಿಲ್ಲ. ಹೀಗಾಗಿ ಅರಿವು ಮೂಡಿಸಲು ಮೀಟರ್ ಅಳವಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿಗಳನ್ನು ಗುರುತಿಸಲು ಸರ್ವೆ ಮಾಡಲಾಗುತ್ತಿದೆ. ನೀರನ್ನು ವ್ಯರ್ಥ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ಪಂಚಾಯಿತಿಗಳಿಂದ ರೂಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT