ಕೊಣಾಜೆ– ಮಣಿಪಾಲ ಸಂಪರ್ಕ ಪಥ ಅಗತ್ಯ

ಮಂಗಳವಾರ, ಜೂನ್ 18, 2019
23 °C

ಕೊಣಾಜೆ– ಮಣಿಪಾಲ ಸಂಪರ್ಕ ಪಥ ಅಗತ್ಯ

Published:
Updated:

ಮಂಗಳೂರು: ನಗರದ ಹೊರವಲಯದ ಕೊಣಾಜೆಯಿಂದ ಉಡುಪಿ ಜಿಲ್ಲೆಯ ಮಣಿಪಾಲದವರೆಗಿನ ಸಂಚಾರ ಪಥವನ್ನು ಅಭಿವೃದ್ಧಿಪಡಿಸಿ, ಮಾನೋ ರೈಲಿನಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತು ಈಗಲೇ ಸ್ಪಷ್ಟವಾಗಿ ನಿರ್ಧಾರಕ್ಕೆ ಬರುವ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್‌.ಲೋಬೊ ಹೇಳಿದರು.

ನವ ಕರ್ನಾಟಕ ಯೋಜನೆಯ ಅಂಗವಾಗಿ ದಕ್ಷಿಣ ಕನ್ನಡ ವಿಷನ್‌– 2025 ಮುನ್ನೋಟ ದಾಖಲೆ ಸಿದ್ಧಪಡಿಸುವ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ಮತ್ತು ಉಡುಪಿ ನಗರ ಪ್ರದೇಶಗಳು ಅಂಟಿಕೊಂಡೇ ಬೆಳೆಯುತ್ತಿವೆ. ಭವಿಷ್ಯದ ದಿನಗಳಲ್ಲಿ ಎರಡೂ ನಗರಗಳ ನಡುವೆ ಹೆಚ್ಚು ಅಂತರ ಉಳಿಯುವುದಿಲ್ಲ. ಕೊಣಾಜೆಯಿಂದ ಮಣಿಪಾಲದವರೆಗೆ ಒಂದು ಸಂಚಾರ ಪಥ ನಿರ್ಮಾಣ ಅನಿವಾರ್ಯವಾಗಿದೆ. ಈಗ ಈ ಕಾರಿಡಾರ್‌ನಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಅವಕಾಶವಿದೆ. ಜಮೀನಿನ ಲಭ್ಯತೆ ಇರುವಾಗಲೇ ಕಾರಿಡಾರ್ ನಿರ್ಮಿಸಿ, ಮಾನೋ ರೈಲು ಸಂಚಾರದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದರು.

ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಬಂದರು ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಜಿಲ್ಲೆ ಹೆಚ್ಚು ಬಲಿಷ್ಠವಾಗಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಿದೆ. ಬಂದರುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಬಜ್ಪೆ ವಿಮಾನ ನಿಲ್ದಾಣದಿಂದ ಕೊಣಾಜೆ ಐ.ಟಿ ಪಾರ್ಕ್‌ವರೆಗೆ ಚತುಷ್ಪಥ ರಸ್ತೆ ಮತ್ತು ಮಂಗಳೂರು ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮುಂದುವರಿದ ಜಿಲ್ಲೆ ಎಂಬ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆಗಿದೆ. ಭವಿಷ್ಯದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮುನ್ನೋಟ ದಾಖಲೆ ಸಿದ್ಧಪಡಿಸಲಾಗುತ್ತಿದೆ’ ಎಂದರು.

ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ವಲಯದ ಪ್ರಮುಖರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಸಾಮಾನ್ಯ ಜನರ ಅಭಿ‍ಪ್ರಾಯಗಳಿಗೆ ಇಲ್ಲಿ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಜನರ ಧ್ವನಿಗೂ ಇಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್‌, ‘ಮುಂದಿನ ಏಳು ವರ್ಷಗಳಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಎಂಬುದರ ಕುರಿತು ಎಲ್ಲ ಸ್ತರದ ಜನರ ಅಭಿಪ್ರಾಯಗಳನ್ನು ಆಧರಿಸಿ ಮುನ್ನೋಟ ದಾಖಲೆ ಸಿದ್ಧಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದರು.

ಡಿಸೆಂಬರ್‌ 31ಕ್ಕೆ ವಿಷನ್‌–2025 ಮುನ್ನೋಟ ದಾಖಲೆ ಸಿದ್ಧವಾಗಲಿದೆ. ಇದಕ್ಕಾಗಿಯೇ ಸಿದ್ಧಪಡಿಸಿರುವ ಫೇಸ್‌ಬುಕ್‌ ಪುಟ, ಟ್ವಿಟರ್‌ ಖಾತೆಯ ಮೂಲಕವೂ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯಗಳ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್‌, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್ ರೆಡ್ಡಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್‌, ಯೋಜನೆಯ ಜ್ಞಾನ ಪಾಲುದಾರರಾಗಿರುವ ಕೆಪಿಎಂಜಿ ಸಂಸ್ಥೆಯ ನಿರ್ದೇಶಕ ಪ್ರಸಾದ್ ಉನ್ನಿಕೃಷ್ಣನ್‌ ವೇದಿಕೆಯಲ್ಲಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry