ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ಮಾತನಾಡುವ ನೈತಿಕ ಹಕ್ಕು ಮಧು ಬಂಗಾರಪ್ಪಗೆ ಇಲ್ಲ: ಶಾಸಕ ಬಿ.ವೈ. ರಾಘವೇಂದ್ರ

Last Updated 4 ಅಕ್ಟೋಬರ್ 2017, 8:44 IST
ಅಕ್ಷರ ಗಾತ್ರ

ಶಿಕಾರಿಪುರ: ‘ಸಂಸದ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮಾತನಾಡುವ ನೈತಿಕ ಹಕ್ಕು ಶಾಸಕ ಮಧು ಬಂಗಾರಪ್ಪಗೆ ಇಲ್ಲ’ ಎಂದು ಶಾಸಕ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಸುಣ್ಣದಕೊಪ್ಪ ಹಾಗೂ ಚಿಕ್ಕಜಂಬೂರು ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಸಂಸದ ಯಡಿಯೂರಪ್ಪ ಬಗ್ಗೆ ಶಾಸಕ ಮಧು ಬಂಗಾರಪ್ಪ ಕೀಳಾಗಿ ಮಾತನಾಡಿದ್ದಾರೆ. ಆದರೆ ಸಂಸದ ಯಡಿಯೂರಪ್ಪ ರೀತಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯವನ್ನು,ಮಧು ಬಂಗಾರಪ್ಪ ತಂದೆ ಬಂಗಾರಪ್ಪ ಮುಖ್ಯಮಂತ್ರಿಯಾದರೂ ಮಾಡಲಿಲ್ಲ’ ಎಂದು ಆರೋಪಿಸಿದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಜಿಲ್ಲೆಯ ಜನತೆ ಹೆಚ್ಚಿನ ಮತಗಳ ಅಂತರದಿಂದ ಯಡಿಯೂರಪ್ಪ ಅವರನ್ನು ಸಂಸತ್ತು ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಹಣ ಹಂಚಿ ಗೆಲುವು ಸಾಧಿಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳುವ ಮೂಲಕ ಜಿಲ್ಲೆಯ ಹಾಗೂ ತಾಲ್ಲೂಕಿನ ಮತದಾರರಿಗೆ ಅವಮಾನ ಮಾಡಿದ್ದು,ಮತದಾರರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸೊರಬ ಕ್ಷೇತ್ರದಲ್ಲಿ ದಂಡಾವತಿ ನೀರಾವರಿ ಯೋಜನೆ ಪೂರ್ಣಗೊಂಡರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪಗೆ ಒಳ್ಳೆ ಹೆಸರು ಬರುತ್ತದೆ ಎಂಬ ಉದ್ದೇಶದಿಂದ ಈ ಯೋಜನೆ ನಿರ್ಮಾಣಕ್ಕೆ ಕಲ್ಲು ಹಾಕಿದ್ದಾರೆ. ಚುನಾವಣೆ ಉದ್ದೇಶದ ಹಿನ್ನೆಲೆ ಸೊರಬ ಹಾಗೂ ಶಿಕಾರಿಪುರ ತಾಲ್ಲೂಕಿನ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆ ಆಯೋಜಿಸುತ್ತಿದ್ದಾರೆ ಎಂದು ಟೀಕಿಸಿದರು.

ಪಾದಯಾತ್ರೆ ನಡೆಸಲು ಮಧುಬಂಗಾರಪ್ಪಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಅವರ ತಂದೆ ಬಂಗಾರಪ್ಪ 4ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲು ಶಿಕಾರಿಪುರ ತಾಲ್ಲೂಕಿನ ಜನತೆ ಹೆಚ್ಚು ಮತ ಹಾಕಿದ್ದಾರೆ. ಆದರೆ ಬಂಗಾರಪ್ಪ ಮುಖ್ಯಮಂತ್ರಿಯಾದರೂ ಏಕೆ ಶಿಕಾರಿಪುರ ತಾಲ್ಲೂಕಿನ ಜನರಿಗಾಗಿ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಸಂಸದ ಯಡಿಯೂರಪ್ಪ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಕೆ.ಎಸ್‌. ಗುರುಮೂರ್ತಿ, ಟಿ.ಎಸ್‌. ಮೋಹನ್‌, ಎಸ್‌.ಪಿ. ನಾಗರಾಜಗೌಡ್ರು, ಕಬಾಡಿ ರಾಜಪ್ಪ, ಎಂ.ಬಿ. ಚನ್ನವೀರಪ್ಪ, ಚಾರಗಲ್ಲಿ ಪರಶುರಾಮ್‌, ಬೆಣ್ಣೆ ದೇವೇಂದ್ರಪ್ಪ, ಮಲ್ಲೇಶ್‌, ಜಯಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT