ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾತ್ಸಂದ್ರದಲ್ಲಿ ಕಾಡುತ್ತಿದೆ ಸ್ವಚ್ಛತೆ ಸಮಸ್ಯೆ

Last Updated 4 ಅಕ್ಟೋಬರ್ 2017, 8:46 IST
ಅಕ್ಷರ ಗಾತ್ರ

ತುಮಕೂರು: ಕಳೆದ ಆರೇಳು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಪಾಲಿಕೆಗೆ ಸೇರಿಸಲ್ಪಟ್ಟಿರುವ ಕ್ಯಾತ್ಸಂದ್ರದ ಕೆಲವು ಪ್ರದೇಶಗಳು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ರಾಷ್ಟ್ರೀಯ ಹೆದ್ದಾರಿಯಿಂದ ಪೇಟೆ ಬೀದಿಗೆ  ಸಾಗುವಾಗ ಕೊಳೆತ ತ್ಯಾಜ್ಯಗಳಿಂದ, ರಸ್ತೆ ಗುಂಡಿಗಳಿಂದ ಕೂಡಿರುವ ಮತ್ತು ಕೆಸರುಮಯವಾಗಿರುವ ಪೇಟೆ ಬೀದಿಯ ರಸ್ತೆಯು ಸ್ವಾಗತಿಸುತ್ತದೆ. ಅಲ್ಲಿಂದ ಮುಂದೆ ಸಾಗಿದಂತೆ ರಸ್ತೆಗಳ ಪಕ್ಕದಲ್ಲೇ ದೊಡ್ಡ ದೊಡ್ಡ ಕಸದ ರಾಶಿಗಳು ಎದುರಾಗುತ್ತವೆ.

ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದರೆ, ‘ವಾರ್ಡಿನಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇಡೀ ವಾರ್ಡ್‌ ಸುತ್ತಾಡಿದರೆ ನಿಮಗೆ ಇದೇ ರೀತಿಯ ಹತ್ತಾರು ಕಸದ ರಾಶಿಗಳು ಕಾಣಿಸುತ್ತವೆ. ಸರಿಯಾಗಿ ಒಂದು ಕಸದ ತೊಟ್ಟಿಯು ಸಹ ಈ ವಾರ್ಡಿನಲ್ಲಿ ಇಲ್ಲ’ ಎಂದು ದೂರುತ್ತಾರೆ.

ಗ್ರಾಮ ಪಂಚಾಯಿತಿಯ ಆಡಳಿತದಿಂದ ಪಾಲಿಕೆಯ ಆಡಳಿತಕ್ಕೆ ಒಳಪಟ್ಟಿದ್ದೇವೆ. ಪಾಲಿಕೆಗೆ ಸೇರಿರುವುದರಿಂದ ಅನುದಾನ ಹೆಚ್ಚೇ ಸಿಗುತ್ತದೆ ಹೀಗಾಗಿ ಈ ಪ್ರದೇಶ ಹೆಚ್ಚು ಅಭಿವೃದ್ಧಿಯಾಗಲಿದೆ ಎಂದುಕೊಂಡಿದ್ದೇವು. ಆದರೆ ಹೆಸರಿಗಷ್ಟೇ ಪಾಲಿಕೆ. ಪಂಚಾಯಿತಿ ಆಡಳಿತದಲ್ಲಿ ಆಗುತ್ತಿದ್ದಷ್ಟು ಅಭಿವೃದ್ಧಿಗಳು ಈಗ ಆಗುತ್ತಿಲ್ಲ ಎನ್ನುತ್ತಾರೆ ಅಂಗಡಿ ಮಾಲೀಕ ಎಸ್‌.ರವಿಕುಮಾರ್‌.

33ನೇ ವಾರ್ಡಿನ ಕೆಲವೊಂದು ರಸ್ತೆಗಳು ಅಭಿವೃದ್ಧಿ ಹೊಂದಿವೆ. ಆದರೆ ಅಲ್ಲಿ ಸ್ವಚ್ಛತೆಯ ಕೊರತೆ ಪ್ರತಿನಿತ್ಯದ ಸಮಸ್ಯೆಯಾಗಿದೆ. ನಾಯಿ, ಹಂದಿಗಳಂತೂ ಈ ವಾರ್ಡಿನ ಬೀದಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತವೆ. ಚಂದ್ರಮೌಳೇಶ್ವರ ವೃತ್ತದ ಬಳಿ ಇರುವ ನಲ್ಲಿ ದುರಸ್ತಿಯಲ್ಲಿರದೇ ಇರುವುದು ಸ್ಥಳೀಯ ಜನಪ್ರತಿನಿಧಿಗಳನ್ನು ಅಣುಕಿಸುವಂತೆ ಕಂಡುಬಂದಿತು.

‘33 ಮತ್ತು 34ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿಲ್ಲ. ಎಲ್ಲ ಪ್ರದೇಶಗಳಂತೆಯೇ ಪ್ರತಿ ನಾಲ್ಕು ದಿನಗಳಿಗೆ ಇಲ್ಲಿಯೂ ನೀರು ಬರುತ್ತದೆ’ ಎಂದು ಮಹಿಳೆಯರು ತಿಳಿಸಿದರು.

‘ಈ ಪ್ರದೇಶ ಪಾಲಿಕೆಗೆ ಸೇರಿದಾಗಿನಿಂದ ಇಲ್ಲಿ ಯಾವುದೇ ಹೊಸ ಕೊಳವೆ ಬಾವಿಗಳನ್ನು ಕೊರೆಸಿಲ್ಲ. ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಕೊರೆಸಿದ್ದ ಕೊಳವೆ ಬಾವಿಗಳು ಸಹ ಕೆಲವು ಕೆಟ್ಟು ಹೋಗಿವೆ’ ಎನ್ನುತ್ತಾರೆ ಜಗನ್ನಾಥ್‌.

ಬಹುತೇಕ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಆಗದಿರುವುದರಿಂದ ದುರ್ನಾತ ಮೂಗಿಗೆ ಅಡರುತ್ತಿದೆ. ಬ್ರಾಹ್ಮಣರ ಬೀದಿ, ಗೌಡರ ಬೀದಿಗಳಲ್ಲಿ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಎನ್ನಬಹುದಾದರೂ ಈ ಓಣಿಗಳು ಬಹಳ ಇಕ್ಕಟ್ಟಾಗಿವೆ.

ಕ್ಯಾತ್ಸಂದ್ರ ಪೇಟೆ ಬೀದಿಯ ಚರಂಡಿಯಲ್ಲಿ ಹರಿದು ಹೋಗಬೇಕಾಗಿದ್ದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತದೆ. ನೀರಿನ ಮೇಲೆಯೇ ಜನರು ಓಡಾಡುವ ಪರಿಸ್ಥಿತಿ. ದಶಕಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದವರ ಬದುಕಿನ ಮೇಲೂ ಹೊಡೆತ ಬಿದ್ದಿದೆ.

‘ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಲವು ಕಡೆ ನೀರಿನ ಪೈಪ್‌ಲೈನ್‌ ಅಳವಡಿಸಲಾಗುತ್ತಿದ್ದು, ಕಾಮಗಾರಿ ಮುಗಿದ ನಂತರ ಉಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇಲ್ಲ. ಬೋರ್‌ವೆಲ್‌ಗಳಿಂದ ಸರಿಯಾಗಿ ನೀರನ್ನು ಪೂರೈಸಲಾಗುತ್ತಿದೆ’ ಎನ್ನುತ್ತಾರೆ 33ನೇ ವಾರ್ಡ್‌ನ ಸದಸ್ಯೆ ಧನಲಕ್ಷ್ಮಿ ರವಿ.

‘ಪೇಟೆ ಬೀದಿಗೆ ಹೋಗುವ ರಸ್ತೆಯ ಕಾಮಗಾರಿಯನ್ನಿ ಇನ್ನೇನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ. ಚರಂಡಿ ಕಾಮಗಾರಿ ಈಗಾಗಲೇ ಮುಗಿದಿದ್ದು, ಯುಜಿಡಿ ಆಗುತ್ತಿರುವುದರಿಂದ ರಸ್ತೆ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗಿದೆ’ ಎಂದು 34ನೇ ವಾರ್ಡ್‌ ಸದಸ್ಯೆ ಯಶೋಧಮ್ಮ ಹೇಳಿದರು.
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT