ಅಂಚೆ ಸಂವಹನ

ಗುರುವಾರ , ಜೂನ್ 27, 2019
23 °C

ಅಂಚೆ ಸಂವಹನ

Published:
Updated:
ಅಂಚೆ ಸಂವಹನ

ಜಿಪ್ಟ್‌, ಪರ್ಷಿಯಾಗಳಲ್ಲಿ ಅಂಚೆ ಸೇವೆ ಪ್ರವರ್ಧಮಾನಕ್ಕೆ ಬಂದ ಕಾಲಘಟ್ಟದಲ್ಲೇ ಇತ್ತ ಏಷ್ಯಾದಲ್ಲಿ ಅದರಲ್ಲೂ ಪ್ರಮುಖವಾಗಿ ಭಾರತ ಮತ್ತು ಚೀನಾದಲ್ಲೂ ಟಪಾಲು ವ್ಯವಸ್ಥೆ ಬೇರೂರಲು ಆರಂಭಿಸಿತ್ತು.ಚೀನಾದಲ್ಲಿ ಕ್ಸಿಯಾ ರಾಜವಂಶ (ಕ್ರಿ.ಪೂ 2070 –ಕ್ರಿ.ಪೂ 1600), ಶಾಂಗ್‌ ರಾಜವಂಶ(ಕ್ರಿ.ಪೂ1,600–ಕ್ರಿ.ಪೂ 1,046) ಕಾಲದಲ್ಲೇ ಅಂಚೆ ವ್ಯವಸ್ಥೆ ಇತ್ತು ಎಂದು ಚೀನೀಯರು ವಾದಿಸುತ್ತಾರೆ.

ಆದರೆ, ಇದಕ್ಕೆ ಸಾಕ್ಷ್ಯಗಳು ಇಲ್ಲ. ಕ್ರಿ.ಪೂ 206ರಿಂ‌ದ ಕ್ರಿ.ಶ 220ರವರೆಗೆ ಆಡಳಿತ ನಡೆಸಿದ್ದ ಹನ್‌ ಅರಸು ಮನೆತನ ಸುಧಾರಿತ ಕೊರಿಯರ್‌ ವ್ಯವಸ್ಥೆ ಆರಂಭಿಸಿತ್ತು. ಪ್ರಮುಖ ಮಾರ್ಗಗಳಲ್ಲಿ ಪ್ರತಿ 15 ಕಿ.ಮೀಗೆ ಅಂಚೆ ಕೇಂದ್ರವನ್ನೂ ಅದು ತೆರೆದಿತ್ತು ಎಂದು ಹೇಳುತ್ತದೆ ನಂಬಲರ್ಹ ಚರಿತ್ರೆ. ಟಾಂಗ್‌ ರಾಜವಂಶವು (ಕ್ರಿ.ಶ 618–ಕ್ರಿ.ಶ 907) ಟಪಾಲು ಸೇವೆಗೆ ವ್ಯವಸ್ಥಿತ ರೂಪ ನೀಡಿತ್ತು. ಯುದ್ಧಕ್ಕೆ ಸಂಬಂಧಿಸಿದ ಸಚಿವಾಲಯ ಇದರ ಮೇಲ್ವಿಚಾರಣೆ ನಡೆಸುತ್ತಿತ್ತಂತೆ.

ಇಸ್ಲಾಂ ಜಗತ್ತಿನಲ್ಲೂ ಅಂಚೆ ವ್ಯವಸ್ಥೆ ಜಾರಿಯಲ್ಲಿತ್ತು. ಇದಕ್ಕೆ ಬರಿದ್‌ ಎಂದು ಕರೆಯಲಾಗುತ್ತಿತ್ತು. ಮಧ್ಯಕಾಲೀನ ಯುಗಕ್ಕಿಂತಲೂ ಮೊದಲು ಪತ್ರ ರವಾನಿಸಲು ಪಕ್ಷಿಗಳನ್ನು, ಅದರಲ್ಲೂ ಪಾರಿವಾಳಗಳನ್ನು ಹೆಚ್ಚು ಬಳಸಲಾಗುತ್ತಿತ್ತು.  ಮಧ್ಯಕಾಲೀನ ಅವಧಿಗಿಂತಲೂ ಮೊದಲು ಆಡಳಿತ ದಲ್ಲಿರುವವರು ಮಾತ್ರವಲ್ಲದೇ, ಧಾರ್ಮಿಕ ಕೇಂದ್ರಗಳು, ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮದೇ ಆದ ಖಾಸಗಿ ಅಂಚೆ ವ್ಯವಸ್ಥೆ ಹೊಂದಿದ್ದವು ಎಂದು ಹೇಳುತ್ತಾರೆ ಇತಿಹಾಸಕಾರರು.

16ನೇ ಶತಮಾನದ ನಂತರ ಅಂಚೆ ವ್ಯವಸ್ಥೆಯಲ್ಲಿ ಸುಧಾರಣೆಗಳು ಕಂಡು ಬಂದವು. 1653ರಲ್ಲಿ ಡೆ ವಲಯೆರ್‌ ಎಂಬುವವರು ಪ್ಯಾರಿಸ್‌ನಲ್ಲಿ ಆಧುನಿಕ ಅಂಚೆ ಸೇವೆಯನ್ನು ಆರಂಭಿಸಿದರು. ಇದಕ್ಕಾಗಿ ಅವರು ಅಂಚೆಪೆಟ್ಟಿಗೆಗಳನ್ನು ಅಳವಡಿಸಿದರು. ಅವರಿಂದ ಖರೀದಿಸಿದ್ದ ಕಾಗದದ ಲಕೋಟೆಗಳಲ್ಲಿ ಪತ್ರವನ್ನು ಇಟ್ಟು ಈ ಪೆಟ್ಟಿಗೆಗಳಿಗೆ ಹಾಕಿದರೆ, ಅದರಲ್ಲಿದ್ದ ವಿಳಾಸಕ್ಕೆ ಪತ್ರವನ್ನು ಅವರು ತಲುಪಿಸುತ್ತಿದ್ದರು.

ಎಲ್ಲ ನಾಗರಿಕರೂ ಬಳಸಬಹುದಾದಂತಹ ಸಾರ್ವಜನಿಕ ಅಂಚೆ ಸೇವೆಗೆ 1716ರಲ್ಲಿ ಸ್ಪೇನ್‌ನಲ್ಲಿ ಚಾಲನೆ ಸಿಕ್ಕಿತು. ಜಗತ್ತಿನಲ್ಲೇ ಮೊದಲ ಬಾರಿಗೆ 1756ರಲ್ಲಿ ಪತ್ರಗಳನ್ನು ವಿತರಿಸುವ ಉದ್ದೇಶಕ್ಕಾಗಿ ಸಿಬ್ಬಂದಿಯನ್ನು (ಪೋಸ್ಟ್‌ಮ್ಯಾನ್‌) ನೇಮಿಸಲಾಯಿತು. 1762ರ ನಂತರ ಅಂಚೆಪೆಟ್ಟಿಗೆಯ ಬಳಕೆ ಆರಂಭವಾಯಿತು.

19ನೇ ಶತಮಾನದಲ್ಲಿ ಅಂಚೆ ಸೇವೆಯಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. 1840ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸ್ಟ್ಯಾಂಪ್‌ಗಳನ್ನು ಬಳಸಲಾಯಿತು. ಅದುವರೆಗೂ ಅಂಚೆ ಸೇವೆ ದುಬಾರಿಯಾಗಿತ್ತು. ಪತ್ರ ಕಳುಹಿಸುವವನು ಪತ್ರಗಳ ವಿಲೇವಾರಿಗೆ ದುಡ್ಡು ನೀಡಬೇಕಿರಲಿಲ್ಲ; ಬದಲಿಗೆ ಪತ್ರ ಸ್ವೀಕರಿಸುವವನು ಕೊಡಬೇಕಿತ್ತು. ಪತ್ರ ವಿತರಿಸಬೇಕಾದ ದೂರ ಹಾಗೂ ಪತ್ರದಲ್ಲಿದ್ದ ಹಾಳೆಗಳ ಸಂಖ್ಯೆಯ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತಿತ್ತು.

ಪತ್ರ ಕಳುಹಿಸುವವರೇ ಅಂಚೆ ವೆಚ್ಚ ಭರಿಸುವ ಮತ್ತು ಮೊದಲೇ ದುಡ್ಡು ಪಾವತಿಸುವ ವ್ಯವಸ್ಥೆಯನ್ನು ಸರ್‌ ರೌಲ್ಯಾಂಡ್‌ ಹಿಲ್‌ ಎಂಬುವವರು ಪ್ರಸ್ತಾಪಿಸಿದರು. ಅಧಿಕೃತವಾಗಿ ಮುದ್ರಿಸಿರುವ ಲಕೋಟೆಗಳ ಬಳಕೆ ಮತ್ತು ಅಂಚೆ ಚೀಟಿಗಳ ಪರಿಕಲ್ಪನೆಗಳನ್ನೂ ಅವರೇ ಹರಿಬಿಟ್ಟರು. ಜಗತ್ತಿನಲ್ಲಿ ಮೊದಲ ಬಾರಿಗೆ ಅಂಚೆ ಚೀಟಿಗಳನ್ನು ರೂಪಿಸಿದವರೂ ಅವರೇ. ಈ ಪರಿಕಲ್ಪನೆ ಬ್ರಿಟನ್‌ ಮಾತ್ರ ಅಲ್ಲ ಜಗತ್ತಿನ ಇತರ ಕಡೆಗಳಲ್ಲೂ ಜನಪ್ರಿಯವಾಯಿತು.

ಅಂಚೆ ಸೇವೆ ಆಧುನಿಕತೆಗೆ ಬಹುಬೇಗ ಒಗ್ಗುತ್ತಾ ಹೋಯಿತು. ಹಾಗಾಗಿ ಆಧುನಿಕ ತಂತ್ರಜ್ಞಾನ ಮತ್ತು ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡು ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು. ರೈಲುಗಳ ಮೂಲಕ ದೂರದ ಊರುಗಳಿಗೆ, ವಿಮಾನಗಳ ಮೂಲಕ ಬೇರೆ ದೇಶಗಳಿಗೆ ಅಂಚೆ ಸೇವೆ ಒದಗಿಸುವ ಪರಿಪಾಠ ಬೆಳೆಯಿತು. ಟೆಲಿಗ್ರಾಂ, ದೂರವಾಣಿ, ನಂತರ ಬಂದ ಇಂಟರ್‌ನೆಟ್‌ ಆಧರಿತ ಇ–ಮೇಲ್‌ಗಳು ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರೂ, ಅಂಚೆ ಸೇವೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ. ಆಧುನಿಕ ಸಂವಹನ ವ್ಯವಸ್ಥೆಗೆ ಪೈಪೋಟಿ ನೀಡುತ್ತಲೇ, ತನ್ನ ಅಸ್ಮಿತೆಯನ್ನು ಅಂಚೆ ಇನ್ನೂ ಉಳಿಸಿಕೊಂಡಿದೆ ಎಂಬುದು ಗಮನಾರ್ಹ.

ಸೂರ್ಯ

ಭಾರತದಲ್ಲಿ...

ನಮ್ಮ ದೇಶದಲ್ಲೂ ಅಂಚೆಗೆ ಬಹು ದೊಡ್ಡ ಇತಿಹಾಸ ಇದೆ. ಚೀನಾ ಹಾಗೂ ಭಾರತದಲ್ಲಿ ಸರಿ ಸುಮಾರು ಒಂದೇ ಅವಧಿಯಲ್ಲಿ ಅಂಚೆ ವ್ಯವಸ್ಥೆ ಜಾರಿಗೆ ಬಂದಂತೆ ತೋರುತ್ತದೆ.

ಭಾರತೀಯ ಅಂಚೆ ಸೇವೆಯನ್ನು ಜಾರಿಗೆ ತಂದವರು ಮೌರ್ಯರು (ಕ್ರಿ.ಪೂ 322–ಕ್ರಿ.ಪೂ 185). ಸಾಮಾನ್ಯ ಗಾಡಿಗಳಲ್ಲಿ (ಎತ್ತು, ಕುದುರೆ ಗಾಡಿ) ಇವುಗಳನ್ನು ಸಾಗಿಸಲಾಗುತ್ತಿತ್ತು. ರಾಜರು ಮತ್ತು ಸ್ಥಳೀಯ ಆಡಳಿತಗಾರರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕೊರಿಯರ್‌ ವ್ಯವಸ್ಥೆಯನ್ನು ಅವಲಂಬಿಸಿದ್ದರು. ಗುಪ್ತಚರ ವಿಭಾಗದ ಮುಖ್ಯಸ್ಥರು ಈ ಅಂಚೆ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾಗಿತ್ತು. ಮೈಸೂರಿನ ಒಡೆಯರ್‌ ರಾಜಮನೆತನದಲ್ಲೂ ಅಂಚೆ ವ್ಯವಸ್ಥೆ ಜಾರಿಯಲ್ಲಿತ್ತು.

18ನೇ ಶತಮಾನದ ಹೊತ್ತಿಗೆ ಭಾರತದಲ್ಲಿ ಅಂಚೆ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿತ್ತು. ಬ್ರಿಟಿಷರು ಭಾರತವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಈ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿದರು.

1852ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಅಂಚೆಚೀಟಿಗಳನ್ನು ಬಳಸಲಾಯಿತು.1854ರಲ್ಲಿ ಭಾರತೀಯ ಅಂಚೆ ಇಲಾಖೆಯ ಸ್ಥಾಪನೆ ಆಯಿತು. ಇದರ ಅಡಿಯಲ್ಲಿ ಅಂಚೆ ಸೇವೆಯನ್ನು ಕೇಂದ್ರೀಕೃತಗೊಳಿಸಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry