ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗೆ ತಿರುವು ಕೊಡಲು ಕಿಡ್ನ್ಯಾಪ್

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕನ್ನಡದ ಜನಪ್ರಿಯ ಧಾರಾವಾಹಿಗಳ ಪಟ್ಟಿ ನೆನಪಿಸಿಕೊಳ್ಳಿ. ಬಹುತೇಕ ಧಾರಾವಾಹಿಗಳ ಸಾಮಾನ್ಯ ಅಂಶಗಳೇನು?

ಧಾರಾವಾಹಿಗಳ ಪಟ್ಟಿಯ ಜೊತೆಜೊತೆಗೆ ನೆನಪಾಗುವುದು ಗೋಳಿನ ಕಥೆ ಮತ್ತು ಅಪಹರಣದ ವ್ಯಥೆ ಅಲ್ಲವೆ?

‘ರಾಧಾ-ರಮಣ’, ‘ಪುಟ್ಟಗೌರಿ ಮದುವೆ’, ‘ಅಗ್ನಿಸಾಕ್ಷಿ’, ‘ಅಕ್ಕ’ ‘ಗಂಗಾ’ ಸೇರಿದಂತೆ ಬಹುತೇಕ ಧಾರಾವಾಹಿಗಳಲ್ಲಿ ಅಪಹರಣ ತೀರಾ ಸಹಜ- ಸಾಮಾನ್ಯ ಎಂಬಂತೆ ಆಗಿದೆ. ‘ಗಂಗಾ’ ಧಾರಾವಾಹಿಯಲ್ಲಿ ಗಂಗಾ, ‘ಪುಟ್ಟಗೌರಿ’ಯಲ್ಲಿ ಪುಟ್ಟಗೌರಿಯ ತಂದೆ, ‘ರಾಧಾ-ರಮಣ’ದಲ್ಲಿ ರಾಧಾ ಹೀಗೆ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ.

‘ಅಗ್ನಿಸಾಕ್ಷಿ’ಯಲ್ಲಂತೂ ಅಪಹರಣಕ್ಕೊಳದಾವರಿಗೆ ವರ್ಷಗಟ್ಟಲೆ ಬಿಡುಗಡೆಯ ಭಾಗ್ಯವೇ ಸಿಗುವುದಿಲ್ಲ. ಈ ಹಿಂದೆ ಗೌತಮ್ (ಶಶಾಂಕ್), ಈಗ ಕಿಶೋರ್ (ಅನೂಪ್). ಮುಂದೆ ಯಾರೋ? ನಿರ್ದೇಶಕರೇ ಉತ್ತರ ಹೇಳಬೇಕು.

ಅಪಹರಣ ದೃಶ್ಯಗಳ ಮೇಲೆ ಧಾರಾವಾಹಿ ನಿರ್ದೇಶಕರಿಗೆ ಪ್ರೀತಿ ಏಕೆ ಎಂದು ಹುಡುಕುತ್ತಾ ಹೊರಟರೆ ಹಲವು ಉತ್ತರಗಳು ದೊರಕುತ್ತವೆ.

ಕೆಲ ಧಾರಾವಾಹಿಗಳಲ್ಲಿಯಂತೂ ಅಪಹರಣದ ದೃಶ್ಯಗಳನ್ನು ಅನವಶ್ಯಕವಾಗಿ ಎಳೆಯುತ್ತಾ ಪ್ರೇಕ್ಷಕರಿಗೇ ಅಪಹರಣಕ್ಕೊಳಗಾಗಿರುವ ಭಾವ ಮೂಡುವಂತೆ ಮಾಡುತ್ತಾರೆ. ‘ಪುಟ್ಟಗೌರಿ ಮದುವೆ’ಯಲ್ಲಿ ನಾಯಕಿಯ ಅಪ್ಪನ ಪಾತ್ರ ಅಪಹರಣಕ್ಕೊಳಗಾಗಿರುತ್ತದೆ. ಆತನ ಎರಡೂ ಕೈಯನ್ನು ಎತ್ತಿ ಶಿಲುಬೆಗೇರಿಸಿದ ಮಾದರಿಯಲ್ಲಿ ಕಟ್ಟಿಹಾಕಲಾಗಿರುತ್ತದೆ. ಅದೂ ಕೂಡ ತಿಂಗಳಾನುಗಟ್ಟಲೆ. ಅವರು ಹೇಗೆ ಶೌಚಕಾರ್ಯ ಮುಗಿಸಿಕೊಳ್ಳುತ್ತಿದ್ದರೋ ಏನೋ?

‘ಅಗ್ನಿಸಾಕ್ಷಿ’ ಸ್ವಲ್ಪ ಭಿನ್ನ, ಈ ಧಾರಾವಾಹಿಯಲ್ಲಿ ಕಥಾ ನಾಯಕನೇ ಅಪಹರಣ ಮಾಡಿದ್ದಾನೆ. ಅದು ಆತ ಅಪಹರಣ ಮಾಡಿ ಎಷ್ಟೋ ಕಾಲವಾಗಿದೆ. 20X30 ಅಡಿಗಳಷ್ಟು ವಿಸ್ತೀರ್ಣದ ಕೋಣೆಯಲ್ಲೇ ಅಪಹರಣಕ್ಕೊಳಗಾದವನಿಗೆ ವಯಸ್ಸಾಗುತ್ತಿದೆ. ಅವನ ಕಾವಲಿಗೆ ಕೂತವನಿಗೂ ಅಷ್ಟೆ. ಆದರೆ ಧಾರಾವಾಹಿಯ ನಾಯಕ- ನಾಯಕಿಯರದು ಮಾತ್ರ ಎಂದೂ ಮಾಸದ ಚಿರಯೌವನ.

ಇನ್ನೂ ಕೆಲ ಜಾಣ ನಿರ್ದೇಶಕರಿದ್ದಾರೆ. ಧಾರಾವಾಹಿಯ ಪಾತ್ರಧಾರಿಗಳು ದೀರ್ಘ ರಜೆಗೆ ಹೋದಾಗ, ತಂಡದಿಂದ ಬೇರ್ಪಟ್ಟಾಗ ಆ ಪಾತ್ರಕ್ಕೇ ಗುಡ್‌ಬೈ ಹೇಳಲು ಅಪಹರಣದ ಸೂತ್ರ ಬಳಸಿಬಿಡುತ್ತಾರೆ. ಅವರು ವಾಪಸ್ ಬರುವ ನಿರೀಕ್ಷೆ ಇದ್ದರೆ ಫಾರಿನ್ ಟೂರ್ ತಂತ್ರ ಬಳಕೆಯಾಗುತ್ತದೆ.

‘ಪ್ರಸ್ತುತ ‘ರಾಧಾ-ರಮಣ’ ಧಾರಾವಾಹಿಯ ನಾಯಕಿ ರಾಧಾ ಅಪಹರಣಕ್ಕೊಳಗಾಗಿದ್ದಾಳೆ. ರಾಧಾ-ರಮಣ ಇಬ್ಬರೂ ವಿಷಮ ಸ್ಥಿತಿಯಲ್ಲಿ ಜೊತೆಯಾದವರು. ಮೊದಲಿಗೆ ಇಬ್ಬರೂ ಪರಸ್ಪರ ದ್ವೇಷಿಗಳಾಗಿದ್ದರು. ಈಗ ನಿಧಾನವಾಗಿ ಇಬ್ಬರ ನಡುವೆ ಅನುರಾಗ ಉಂಟಾಗುತ್ತಿದೆ. ಆಮೆವೇಗದಲ್ಲಿರುವ ಪ್ರೀತಿಗೆ ವೇಗ ದೊರಕಿಸಿಕೊಡಲು ಈ ಅಪಹರಣ ದೃಶ್ಯ ಸಂಯೋಜಿಸಲಾಗಿದೆ’ ಎನ್ನುತ್ತಾರೆ ‘ರಾಧಾ-ರಮಣ’ ಧಾರಾವಾಹಿಯ ನಿರ್ದೇಶಕ ಶಿವ ಪೂಜೇನ ಅಗ್ರಹಾರ.

‘ರಾಧಾ ದೂರಾದಾಗ ರಮಣ ಹೇಗೆ ವರ್ತಿಸುತ್ತಾನೆ? ರಾಧಾಳ ಮೇಲೆ ರಮಣ ಹೊಂದಿರುವ ಪ್ರೀತಿಯನ್ನು ಪ್ರೇಕ್ಷಕರಿಗೆ ತಲುಪಿಸಲು ಅಪಹರಣ ದೃಶ್ಯವನ್ನು ಬಳಸಲಾಗುತ್ತಿದೆ. ಇದೇ ಸನ್ನಿವೇಶದಲ್ಲಿ ರಾಧಾಳ ಬಗ್ಗೆ ಉಳಿದ ಪಾತ್ರಗಳು ಹೊಂದಿರುವ ಅಭಿಪ್ರಾಯಗಳು ಬಯಲಾಗಲಿವೆ’ ಎಂದು ರಾಧಾಳ ಅಪಹರಣದ ಕಾರಣವನ್ನು ಅವರು ಹಂಚಿಕೊಳ್ಳುತ್ತಾರೆ.⇒v

ಅಪಹರಣದ ದೃಶ್ಯಗಳ ಬಳಕೆ ಏಕೆ?

* ಕೌಟುಂಬಿಕ ಕಲಹಕ್ಕೆ ನಿಗೂಢತೆಯ, ಆ್ಯಕ್ಷನ್ ಆಯಾಮ ನೀಡಲು

* ಅಪಹರಣಕ್ಕೆ ಒಳಗಾದವರು ಕತೆಯ ಮುಖ್ಯಭಾಗವೂ ಆಗಿರುತ್ತಾರೆ

* ಕತೆಯ ಹಾದಿಯನ್ನು ಸಂಪೂರ್ಣ ಹೊರಳಿಸಿಬಿಡುವ ಗುಟ್ಟೊಂದು ಇರುತ್ತದೆ

* ನಾಯಕಿಯ ಬುದ್ಧಿವಂತಿಕೆ ಅಥವಾ ಶೌರ್ಯದ ಅನಾವರಣಕ್ಕೆ

* ಖಳನ ದುಷ್ಟತನವನ್ನು ಪ್ರೇಕ್ಷಕರಿಗೆ ಮನದಟ್ಟುಗೊಳಿಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT