ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಸೆಲ್ಫಿ ಹುಚ್ಚಿಗೆ ಜೀವಗಳ ಬಲಿ ಆತಂಕಕಾರಿ: ಜಾಗೃತಿ ಮೂಡಿಸಿ

Published:
Updated:
ಸೆಲ್ಫಿ ಹುಚ್ಚಿಗೆ ಜೀವಗಳ ಬಲಿ ಆತಂಕಕಾರಿ: ಜಾಗೃತಿ ಮೂಡಿಸಿ

ಆಧುನಿಕ ತಂತ್ರಜ್ಞಾನ ನಮ್ಮ ಜನಜೀವನವನ್ನು ಎಷ್ಟೇ ಸುಲಭವಾಗಿಸಿದರೂ ಅದರ ಮೇಲೆ ನಿಯಂತ್ರಣ ಇಲ್ಲವಾದಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ನಿಸ್ಸಂಶಯ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ದುರಂತಗಳು ಇದಕ್ಕೆ ಸ್ಪಷ್ಟಸಾಕ್ಷಿ. ಹುಟ್ಟುಹಬ್ಬವನ್ನು ಆಚರಿಸಲೆಂದು ಮನರಂಜನಾ ತಾಣಕ್ಕೆ ಹೊರಟ ಮೂವರು ತರುಣರು ರೈಲ್ವೆ ಹಳಿಯಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಧಾವಿಸಿಬಂದ ರೈಲು ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಹಿಂದೆ ಬರುತ್ತಿದ್ದ ರೈಲಿನ ಆಗಮನದ ಮೇಲೆ ಗಮನವಿಟ್ಟಿದ್ದ ಈ ತರುಣರು ಎದುರುಬದಿಯ ಹಳಿಯಿಂದ ಬಂದ ರೈಲನ್ನು ಗಮನಿಸಲಾಗದಷ್ಟು ಸೆಲ್ಫಿ ಮೋಹದಲ್ಲಿ ಮುಳುಗಿಹೋಗಿದ್ದರು. ಇನ್ನೂ ಬಾಳಿ ಬದುಕಬೇಕಿದ್ದ, ಜೀವನೋತ್ಸಾಹ ತುಂಬಿ ತುಳುಕುತ್ತಿದ್ದ ತರುಣರು ಹೀಗೆ ಸೆಲ್ಫಿ ಮೋಹದಲ್ಲಿ ಮೈಮರೆತು ಪ್ರಾಣ ಕಳೆದುಕೊಂಡದ್ದು ಅವರ ಹೆತ್ತವರಲ್ಲಿ ಮಾತ್ರವಲ್ಲ, ಇಡೀ ಸಮಾಜದಲ್ಲೇ ಒಂದು ವಿಷಣ್ಣಭಾವವನ್ನು ಮೂಡಿಸಿದೆ. ವಾರದ ಹಿಂದೆ, ಬೆಂಗಳೂರು ಹೊರವಲಯದ ಬೆಟ್ಟವೊಂದಕ್ಕೆ ಪ್ರವಾಸ ಹೋದ ಯುವಕರ ಗುಂಪು ಕೂಡಾ ಈ ರೀತಿಯ ದುರಂತವೊಂದಕ್ಕೆ ಸಾಕ್ಷಿಯಾಗಿತ್ತು. ಬೆಟ್ಟದ ಮೇಲಿದ್ದ ಕಲ್ಲು ಕ್ವಾರಿಯ ಕೊಳವೊಂದರಲ್ಲಿ ಎಲ್ಲರೂ ಗುಂಪುಗೂಡಿ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿದ್ದರು. ಅವರ ಜತೆಗೇ ಬಂದಿದ್ದ ಸ್ನೇಹಿತನೊಬ್ಬ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡದ್ದು ಅವರ ಗಮನಕ್ಕೇ ಬರಲಿಲ್ಲ. ಮನುಷ್ಯನಲ್ಲಿ ಹೆಚ್ಚುತ್ತಿರುವ ಸ್ವಮೋಹ ಮತ್ತು ಪ್ರದರ್ಶನಪ್ರಿಯತೆ ಪ್ರಾಣಕ್ಕೇ ಕುತ್ತು ತರುತ್ತಿರುವುದು ನಿಜಕ್ಕೂ ಆತಂಕಕಾರಿ ವಿದ್ಯಮಾನ.

ಬಹುತೇಕ ಮೊಬೈಲ್‌ಗಳಲ್ಲಿ ಈಗ ಫೋಟೋ ತೆಗೆಯುವ ಸೌಲಭ್ಯಗಳಿವೆ. ಆಧುನಿಕ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಕ್ಕಿಂತ ಹೆಚ್ಚು ಗುಣಮಟ್ಟದ ಫೋಟೋಗಳನ್ನು ಕ್ಲಿಕ್ಕಿಸುತ್ತವೆ. ಮೊಬೈಲ್‌ಗಳಲ್ಲಿ ಸ್ವಂತ ಫೋಟೋಗಳನ್ನು ಕ್ಲಿಕ್ಕಿಸುವುದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯ ಗೆಳತಿಯರ ಜತೆಗೆ ಹಂಚಿಕೊಳ್ಳುವುದು ಇತ್ತೀಚೆಗೆ ಬಹುದೊಡ್ಡ ಹುಚ್ಚಿನ ರೂಪದಲ್ಲಿ ಬೆಳೆಯುತ್ತಿದೆ. ಸೆಲ್ಫಿ ಹುಚ್ಚು ಯಾವ ಪರಾಕಾಷ್ಠೆಗೆ ತಲುಪುತ್ತಿದೆಯೆಂದರೆ, ನಾವು ನಮ್ಮ ಸಾರ್ವಜನಿಕ ಬದುಕಿನ ನೀತಿ ನಿಯಮಗಳನ್ನು ಕೂಡಾ ಇದಕ್ಕಾಗಿ ಮರೆಯುತ್ತಿದ್ದೇವೆ. ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಿ ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಹೇಗೆ ಬಳಸಬೇಕು ಎನ್ನುವ ಔಚಿತ್ಯಪ್ರಜ್ಞೆಯೂ ನಮ್ಮ ಯುವಜನರಲ್ಲಿ ಇತ್ತೀಚೆಗೆ ಇಲ್ಲವಾಗುತ್ತಿದೆ. ಮೊಬೈಲ್‌ಗಳ ಅತಿಯಾದ ಬಳಕೆ ನಮ್ಮ ಎಳೆಯ ಮಕ್ಕಳಲ್ಲೂ ದೈಹಿಕ ಮತ್ತು ಮಾನಸಿಕ ನ್ಯೂನತೆಗಳಿಗೆ ಕಾರಣವಾಗುತ್ತಿದೆ. ಮೊಬೈಲ್ ಎನ್ನುವುದು ಅತ್ಯುತ್ತಮ ಸಂಪರ್ಕ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ತಂತ್ರಜ್ಞಾನ, ಅದು ಪಡೆಯುತ್ತಿರುವ ಸಾಮಾಜಿಕ ಆಯಾಮ ಎಲ್ಲವೂ ನಮ್ಮ ಬದುಕಿನ ಗುಣಮಟ್ಟವನ್ನು ಹೆಚ್ಚಿಸಿದೆ ಎನ್ನುವುದೂ ನಿಜ. ಆದರೆ ತಂತ್ರಜ್ಞಾನವೇ ದೊಡ್ಡ ಗೀಳಾಗಿ ಬೆಳೆದು ಯುವಜನರು ಜೀವ ಕಳೆದುಕೊಳ್ಳುತ್ತಿರುವುದು ಮನುಷ್ಯಚೇತನಕ್ಕೆ ವಿರುದ್ಧವಾದ ಸಂಗತಿ. ತಂತ್ರಜ್ಞಾನ ಮನುಷ್ಯನ ವ್ಯಕ್ತಿತ್ವವನ್ನು ಕುಬ್ಜವಾಗಿಸುತ್ತಿರುವುದು ಅನಾರೋಗ್ಯಕರ ಸಮಾಜದ ಲಕ್ಷಣ. ಶಾಲೆ, ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ಗಳನ್ನು ನಿಷೇಧಿಸುವುದು ಕಷ್ಟಸಾಧ್ಯ. ಹೀಗಿದ್ದೂ ಮುಂಬೈನಲ್ಲಿ ಇತ್ತೀಚೆಗೆ 16 ಸ್ಥಳಗಳಲ್ಲಿ ಸೆಲ್ಫಿ ನಿಷೇಧ ಹೇರಲಾಗಿದೆ. ಮನೆಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡುವುದು ಅಗತ್ಯ. ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗದಂತೆ ಬಾಲ್ಯದಿಂದಲೇ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಪೋಷಕರದ್ದು. ಈ ನಿಟ್ಟಿನಲ್ಲಿ ಸಾಮಾಜಿಕ ಎಚ್ಚರವನ್ನು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ಗೀಳಿನಿಂದ ನಮ್ಮ ಯುವಜನರು ಮತ್ತು ಮಕ್ಕಳನ್ನು ಹೊರತರಲು ದೊಡ್ಡ ಮಟ್ಟದ ಜನಜಾಗೃತಿಯ ಅಗತ್ಯವಿದೆ. ಈ ಜನಜಾಗೃತಿ ಸಾಮಾಜಿಕ ಆಂದೋಲನದ ರೀತಿಯಲ್ಲಿ ಬೆಳೆಯಬೇಕಿದೆ.

Post Comments (+)