ಸೋಮವಾರ, ಸೆಪ್ಟೆಂಬರ್ 16, 2019
29 °C

ತೀರ್ಪು ಮತ್ತು ನ್ಯಾಯ!

Published:
Updated:

ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾಗಿದ್ದು, ಇದೀಗ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ.ಎಸ್‌. ಚೌಹಾಣ್‌ ಅವರು ವಕೀಲರಿಗೆ ನೀಡಬೇಕಾದ ದೊಡ್ಡ ಮೊತ್ತದ ಶುಲ್ಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಸೆ.24). ಶ್ರೀಮಂತರು ವಕೀಲರ ಎತ್ತರಕ್ಕೆ ಹಣ ಸುರಿದು ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಮಂಡಿಸಿ, ಅಗತ್ಯವಾದರೆ ಶೀಘ್ರವಾಗಿ, ಬೇಡವಾದರೆ ನಿಧಾನವಾಗಿ ತೀರ್ಪು ಬರುವಂತೆ ವಾದಿಸಿ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡುತ್ತಾರೆ. ಶುಲ್ಕ ಭರಿಸಲಾರದವರು ನ್ಯಾಯಕ್ಕಾಗಿ ಹೋರಾಟ ಮಾಡಲಾರದ ಸ್ಥಿತಿಯಲ್ಲಿದ್ದಾರೆ ಎಂಬುದು ಆತಂಕದ ವಿಷಯ.

ಎಪ್ಪತ್ತರ ದಶಕದಲ್ಲಿ ನಾನು ತಾಲ್ಲೂಕು ಕೇಂದ್ರವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುತ್ತಲಿನ ಆಸ್ಪತ್ರೆಗಳ ವೈದ್ಯರು ನನ್ನಲ್ಲಿಗೆ ಬಂದು ತುಸು ಸಮಯ ಕಳೆದು ಹೋಗುತ್ತಿದ್ದರು. ಅವರಲ್ಲೊಬ್ಬರು ರೋಗಿಯಿಂದ ಮೂರು ರೂಪಾಯಿ ಲಂಚ ಪಡೆದ ಆರೋಪದಡಿ ಅಮಾನತುಗೊಂಡಿದ್ದರೆಂದು ತಿಳಿಯಿತು. ನಾನು ಸಂಕೋಚದಿಂದಲೇ ಈ ವಿಷಯವನ್ನು ಪ್ರಸ್ತಾಪಿಸಿದೆ. ಅವರು ಯಾವುದೇ ಭಯವಿಲ್ಲದೆ ‘ಹೌದು ಸಾರ್‌, ಇನ್ನು ಒಂದೆರಡು ಹಿಯರಿಂಗ್‌ನಲ್ಲಿ ತೀರ್ಪು ಬರಲಿದೆ. ನನ್ನ ಪರವಾಗಿಯೇ ತೀರ್ಪು ಬರುತ್ತದೆ ಎಂಬುದು ವಕೀಲರ ಅಭಿಪ್ರಾಯ’ ಎಂದರು.

ಅವರು ಹೇಳಿದಂತೆಯೇ ಆಯಿತು. ಅಮಾನತಿನಲ್ಲಿದ್ದ ಅವಧಿಯ ಸಂಬಳ, ಸವಲತ್ತುಗಳೆಲ್ಲಾ ಪಡೆದ ವೈದ್ಯರು ಮತ್ತೆ ಕೆಲಸಕ್ಕೆ ಹಾಜರಾದರು.

ಎಂಬತ್ತರ ದಶಕದ ಪ್ರಕರಣವೊಂದರಲ್ಲಿ ಕೇವಲ ಎರಡು ರೂಪಾಯಿ ಲಂಚ ಪಡೆದ ಆರೋಪದಡಿ ವೈದ್ಯರೊಬ್ಬರು ದೂರದ ಊರಿಗೆ ವರ್ಗಾವಣೆಗೊಂಡಿದ್ದರು. ಸಂಬಳ ಎಂದಿನಂತೆ ಬರುತ್ತಿದ್ದರೂ ಸಹ, ತಾವೊಂದು ಕಡೆ, ಕುಟುಂಬವೊಂದು ಕಡೆ ಹಾಗೂ ಹಾಜರಾಗಬೇಕಾದ ನ್ಯಾಯಾಲಯವೊಂದು ಕಡೆ. ಕೊನೆಗೆ ವಕೀಲರ ಖರ್ಚನ್ನು ಸಹ ಭರಿಸಲಾಗದೆ ತಮಗೆ ಶಿಕ್ಷೆಯಾಗಬಹುದೆಂಬ ಆತಂಕದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯ ಕಟ್ಟಡದಲ್ಲಿಯೇ ಆತ್ಮಹತ್ಯೆಗೆ ಶರಣಾದರು. ಅವರ ಶವವನ್ನು ವೈದ್ಯಮಿತ್ರರು ನೀಡಿದ ವಂತಿಗೆಯಿಂದಲೇ ಸ್ವಂತ ಊರಿಗೆ ರವಾನಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಉಚಿತ ಕಾನೂನು ಸಹಾಯ ಕೇಂದ್ರಗಳು ಆಸ್ತಿತ್ವದಲ್ಲಿವೆ. ಇವುಗಳ ಅನುಕೂಲ ಎಷ್ಟರಮಟ್ಟಿಗೆ ಆಗುತ್ತದೆ, ಯಾರು ಇವುಗಳ ಸಹಾಯ ಪಡೆಯುತ್ತಾರೆ ಎಂಬುದು ನನಗಂತೂ ತಿಳಿಯದು.

ನ್ಯಾಯಾಲಯಗಳಲ್ಲಿ ತೀರ್ಪಿಗೆ (Judgement) ಅವಕಾಶವಿದೆ. ಆದರೆ ನ್ಯಾಯ (Justice) ಪಡೆಯಲು ತುಂಬ ಕಷ್ಟಪಡಬೇಕಾಗುತ್ತದೆ ಎಂಬುದು ಜನಸಾಮಾನ್ಯರ ಅನುಭವ ಕೂಡ ಆಗಿದೆ. ಇದನ್ನೇ ಕಾನೂನು ಆಯೋಗದ ಅಧ್ಯಕ್ಷರು ಇನ್ನಷ್ಟು ಸ್ಪಷ್ಟವಾಗಿ ಹೇಳಿದ್ದಾರೆ. ಇದು ವ್ಯವಸ್ಥೆಯ ದುರಂತವೇ ಸರಿ!

–ಡಾ. ಕೆ.ಕೆ. ಜಯಚಂದ್ರಗುಪ್ತ, ಹಾಸನ

Post Comments (+)