ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಆಲೋಚನೆ ಒಪ್ಪಿದರೆ ಸಂಘರ್ಷವಿಲ್ಲ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಗರ: ‘ರಾಜಕಾರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಾವತ್ತೂ ಸತ್ಯ ಎನ್ನುವುದಕ್ಕೆ ಹಲವು ಮುಖಗಳು ಇರುತ್ತವೆ. ಹೀಗೆ ಇರುವ ಸತ್ಯದ ಹಲವು ಮುಖಗಳಿಗೆ ಮುಖಾಮುಖಿಯಾಗಲು ನಾವೆಲ್ಲರೂ ಸಿದ್ಧರಿದ್ದರೆ ಮಾತ್ರ ಆರೋಗ್ಯಕರ ಸಂವಾದ ನಡೆಸಲು ಸಾಧ್ಯ’ ಎಂದು ನವದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗೋಪಾಲ್‌ ಗುರು ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ನಡೆದ ‘ತಲೆಮಾರುಗಳ ರಾಜಕಾರಣ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ನನಗಿಂತ ಭಿನ್ನವಾಗಿ ಯೋಚಿಸುವವರು ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದೆ ಇದ್ದರೆ ಸಂವಾದದ ಸ್ಥಾನದಲ್ಲಿ ಸಂಘರ್ಷ ಹುಟ್ಟುತ್ತದೆ. ಅಲ್ಲದೇ, ಅದು ಪರಸ್ಪರ ಕೊಲ್ಲುವ ಹಿಂಸೆಗೂ ದಾರಿ ಮಾಡಿಕೊಡುತ್ತದೆ’ ಎಂದರು.

ಹಿಂಸೆಯ ಸ್ವರೂಪದ ರಾಜಕಾರಣ ಎಲ್ಲಿರುತ್ತದೆಯೋ ಅಲ್ಲಿ ಸತ್ಯದ ವಿವಿಧ ಆಯಾಮಗಳ ಪರಿಶೀಲನೆ ನಡೆಸಲು ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಹೆಣ್ಣು ಗಂಡಿಗಿಂತ ಶ್ರೇಷ್ಠವಾಗಲು, ಕೆಳ ಜಾತಿಯವರು ಮೇಲ್ಜಾತಿಯವರಿಗಿಂತ ಒಳ್ಳೆಯವರಾಗಲು ಸಾಧ್ಯವೇ ಇಲ್ಲ ಎನ್ನುವ ಪೂರ್ವಗ್ರಹದ ಚಿತ್ರಣಗಳಿವೆ. ಇಂತಹ ಚಿತ್ರಣಗಳನ್ನು ದಾಟಿ ಸಂವಾದ ನಡೆಸುವ ಸಾಧ್ಯತೆಗಳನ್ನು ಯುವ ತಲೆಮಾರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವ ತಲೆಮಾರಿಗೆ ಅರ್ಥಪೂರ್ಣ ಸಂವಾದ ನಡೆಸಲು ಬೇಕಾಗಿರುವುದು ನಾನು ಎನ್ನುವುದನ್ನು ಕಳಚಿಕೊಂಡ ವಿನಯವಂತಿಕೆ. ಗಾಂಧೀಜಿ ಸಂಪೂರ್ಣವಾಗಿ ಸ್ವಪ್ರೇಮದಿಂದ ದೂರವಿದ್ದ ಕಾರಣ ಯಾವುದೇ ವರ್ಗದವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗಿತ್ತು. ಆದರೆ, ಇಂದು ಯುವ ತಲೆಮಾರು ‘ಸೆಲ್ಫಿ’ ಎಂಬ ಸ್ವಪ್ರೇಮದ ಬಲೆಯೊಳಗೆ ಬಂಧಿಯಾಗಿ ಅದರ ಹಂಗಿಗೆ ಸಿಲುಕಿರುವುದು ನಿಜವಾದ ಸಂವಾದಕ್ಕೆ ತೊಡಕಾಗಿದೆ ಎಂದು ಹೇಳಿದರು.

ಹೈದರಾಬಾದ್‌ ವಿಶ್ವವಿದ್ಯಾಲಯಲದ ಪ್ರಾಧ್ಯಾಪಕ ಡಿಕನ್ಸ್ ಲಿಯೊನಾರ್ಡ್‌ ಗೋಷ್ಠಿ ನಿರ್ವಹಿಸಿದರು. ಕೆ.ವಿ.ಅಕ್ಷರ, ಟಿ.ಪಿ.ಅಶೋಕ್‌, ಅತುಲ್‌ ತಿವಾರಿ, ಸಮೀಕ್‌ ಬಂದೋಪಾಧ್ಯಾಯ, ಜಯಂತ್‌ ಕಾಯ್ಕಿಣಿ, ವಿವೇಕ ಶಾನಭಾಗ, ವಸುಧೇಂದ್ರ, ಜಸ್ವಂತ್‌ ಜಾಧವ್‌, ಮಾಧವ ಚಿಪ್ಪಳಿ ಹಾಜರಿದ್ದರು.

ಮಧ್ಯಾಹ್ನದ ಗೋಷ್ಠಿಯಲ್ಲಿ ಮಹಾದೇವ ಹಡಪದ ಮತ್ತು ತಂಡದವರು ‘ಮತ್ತೊಬ್ಬ ಮಾಯಿ’ ಎಂಬ ಕಿರು ನಾಟಕ ಪ್ರದರ್ಶಿಸಿದರು. ಸಂಜೆ ಬೆಂಗಳೂರಿನ ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ‘ಸದಾರಮೆ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT