ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕರನ್‌ ಬಣದ 18 ಶಾಸಕರ ಅನರ್ಹತೆ ಅರ್ಜಿ ಸೋಮವಾರ ಇತ್ಯರ್ಥ?

ವಿಶ್ವಾಸಮತ ಯಾಚಿಸದಂತೆ ತಮಿಳುನಾಡು ಸರ್ಕಾರಕ್ಕೆ ತಾಕೀತು
Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್‌ ಬಣದ 18 ಶಾಸಕರ ಅನರ್ಹತೆ ಅರ್ಜಿ ಇತ್ಯರ್ಥಗೊಳ್ಳುವವರೆಗೂ ವಿಶ್ವಾಸಮತ ಯಾಚಿಸದಂತೆ ಮದ್ರಾಸ್ ಹೈಕೋರ್ಟ್‌ ಬುಧವಾರ ತಮಿಳುನಾಡು ಸರ್ಕಾರಕ್ಕೆ ತಾಕೀತು ಮಾಡಿದೆ.

ಅನರ್ಹ ಶಾಸಕ ಅರ್ಜಿಗೆ ಸಂಬಂಧಿಸಿದಂತೆ ದಿನವಿಡೀ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ. ರವಿಚಂದ್ರ ಬಾಬು, ವಿಚಾರಣೆಯನ್ನು ಸೋಮವಾರಕ್ಕೆ (ಅಕ್ಟೋಬರ್‌ 9) ಮುಂದೂಡಿದರು. ಅಂದು ಪ್ರಕರಣದ ಸಂಬಂಧ ಯಾರೂ ಹೆಚ್ಚಿನ ಸಮಯಾವಕಾಶ ಕೇಳುವಂತಿಲ್ಲ ಎಂದು ತಾಕೀತು ಮಾಡಿದರು.

ಸೋಮವಾರದವರೆಗೆ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವಂತಿಲ್ಲ ಮತ್ತು ಈ ಶಾಸಕರು ಪ್ರತಿನಿಧಿಸುವ 18 ಕ್ಷೇತ್ರಗಳಲ್ಲಿ ಚುನಾವಣೆ ನಡೆಸುವಂತಿಲ್ಲ ಎಂದು ಸೂಚಿಸಿದರು.

‘ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ದಿನಕರನ್‌ ಬಣದ 18 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌ ಪಿ.ಧನಪಾಲ್‌ ನಿರ್ಧಾರ ಸಂವಿಧಾನವಿರೋಧಿ’ ಎಂದು ಶಾಸಕರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು.

‘ಶಾಸಕರು, ಪಳನಿಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದಾರೆಯೇ ಹೊರತು ಬೇರೆ ಪಕ್ಷ ಸೇರಿಲ್ಲ. ಹೀಗಾಗಿ ಅವರ ವಿರುದ್ಧ ಪಕ್ಷಾಂತರ ಕಾಯಿದೆ ಅನ್ವಯವಾಗುವುದಿಲ್ಲ’ ಎಂದರು.

ಸ್ಪೀಕರ್‌ ತಮ್ಮ ಅಧಿಕಾರ ಉಪಯೋಗಿಸಿ ಕಾನೂನು ಪ್ರಕಾರ ಶಾಸಕರನ್ನು ಅನರ್ಹಗೊಳಿಸಿದ್ದಾರೆ ಎಂದು ಸ್ಪೀಕರ್‌ ಧನಪಾಲ್‌ ಪರ ವಕೀಲ ಮುಕುಲ್‌ ರೋಹಟಗಿ ಹೇಳಿದರು.

18 ಶಾಸಕರು ಬೆಂಬಲ ಹಿಂದಕ್ಕೆ ಪಡೆದ ನಂತರ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ವಿಶ್ವಾಸಮತ ಯಾಚಿಸಲು ನಿರ್ದೇಶನ ನೀಡುವಂತೆ ಕೋರಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೊದಲು ಮುಗಿಸುವಂತೆ ಅವರು ಮನವಿ ಮಾಡಿದರು.

ಆದರೆ, ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಮೂರ್ತಿಗಳು, ಶಾಸಕರ ಅನರ್ಹತೆಗೆ ಸಂಬಂಧಿಸಿದ ಅರ್ಜಿ ಇತ್ಯರ್ಥಗೊಂಡ ನಂತರ ವಿಶ್ವಾಸಮತ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT