ಹೂಡಿಕೆ ಇಳಿಮುಖದಿಂದ ಜಿಡಿಪಿ ಕುಸಿತ: ರಂಗರಾಜನ್

ಶುಕ್ರವಾರ, ಮೇ 24, 2019
24 °C

ಹೂಡಿಕೆ ಇಳಿಮುಖದಿಂದ ಜಿಡಿಪಿ ಕುಸಿತ: ರಂಗರಾಜನ್

Published:
Updated:
ಹೂಡಿಕೆ ಇಳಿಮುಖದಿಂದ ಜಿಡಿಪಿ ಕುಸಿತ: ರಂಗರಾಜನ್

ಬೆಂಗಳೂರು: ಬಂಡವಾಳ ಹೂಡಿಕೆ ದರ ಇಳಿಕೆಯಾಗಿದ್ದರಿಂದಾಗಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತ ಕಂಡಿದೆ ಎಂದು ಆರ್‌ಬಿಐ ನಿವೃತ್ತ ಗವರ್ನರ್‌ ಹಾಗೂ ಮದ್ರಾಸ್‌ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಅಧ್ಯಕ್ಷ ಸಿ. ರಂಗರಾಜನ್‌ ಅಭಿಪ್ರಾಯಪಟ್ಟರು.

ಬುಧವಾರ ಇಲ್ಲಿ ನಡೆದ ‘ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್ ಇಕನಾಮಿಕ್ಸ್‌’ನ ಶೈಕ್ಷಣಿಕ ಪ್ರಾರಂಭೋತ್ಸವ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣೆಗೆ ವೇದಿಕೆಯಲ್ಲಿ  ಮಾತು ಆರಂಭಿಸಿದ ಅವರು,  2007–08ರಲ್ಲಿ ಜಿಡಿಪಿ ಶೇ 9ರಷ್ಟಿದ್ದಾಗ ಬಂಡವಾಳ ಹೂಡಿಕೆ ಪಾಲು ಶೇ 38ರಷ್ಟಿತ್ತು. ಈ ಪ್ರಮಾಣ ಈಗ ಶೇ 27ಕ್ಕೆ ಇಳಿಕೆಯಾಗಿದೆ. ಬಂಡವಾಳ ಹೂಡಿಕೆ ದರ ಹೆಚ್ಚಿದ್ದರೆ ಉತ್ಪಾದಕತೆಯ ಮಟ್ಟವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ವಿಶ್ಲೇಷಿಸಿದರು.

ದೇಶದ ‘ಬಂಡವಾಳ ಏರಿಕೆಯ ಮೌಲ್ಯದ ಅನುಪಾತ’ವು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ.ಆರ್ಥಿಕ ಹಿಂಜರಿತದಿಂದ ಹೊರಬೇಕಾದರೆ ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರಾರಂಭಿಸಲು ಉತ್ತೇಜನ ನೀಡಬೇಕು. ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡುವುದನ್ನು ಸರಳೀಕರಣಗೊಳಿಸುವ ಜತೆಗೆ, ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

ಐದಾರು ವರ್ಷ ಜಿಡಿಪಿ ಬೆಳವಣಿಗೆ ಶೇ 8ರಿಂದ ಶೇ 9ರ ಆಸುಪಾಸಿನಲ್ಲಿದ್ದು, ಆರ್ಥಿಕತೆ ಸುಸ್ಥಿರವಾಗಿರಲು ಮನಮೋಹನಸಿಂಗ್ ಅವರಂತಹ ಆರ್ಥಿಕ ತಜ್ಞರು ದೇಶದ ನಾಯಕತ್ವ ವಹಿಸಿದ್ದೇ ಕಾರಣ ಎಂದು ಹೇಳಲು ರಂಗರಾಜನ್ ಮರೆಯಲಿಲ್ಲ.

ಪರೀಕ್ಷಾ ಪದ್ಧತಿ ಬದಲಾಗಬೇಕು:

ನೆನಪಿನ ಶಕ್ತಿ ಆಧರಿಸಿ ಮಕ್ಕಳ ಜ್ಞಾನ ಅಳೆಯುವ ಪರೀಕ್ಷಾ ಪದ್ಧತಿ ಬದಲಾಗಬೇಕು ಹಾಗೂ ಪಠ್ಯಕ್ರಮ, ಪದವಿ, ಡಿಪ್ಲೊಮಾಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ರಂಗರಾಜನ್‌ ಹೇಳಿದರು.

ಉನ್ನತ ಶಿಕ್ಷಣ ಕವಲುದಾರಿಯಲ್ಲಿದೆ. ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಬೇಕಾದರೆ, ಲಭ್ಯತೆ, ಸಮಾನತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ. ಎಲ್ಲರಿಗೂ ಉನ್ನತ ಶಿಕ್ಷಣ ಸಿಗಬೇಕಾದರೆ ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು. ಸಮಾನ ಶಿಕ್ಷಣ ದೊರೆಯಬೇಕಾದರೆ ಈ ಕ್ಷೇತ್ರದಲ್ಲಿ ಕೆಲವೇ ಜನರ ಏಕಸ್ವಾಮ್ಯ ಹೋಗಿ, ಅತ್ಯಂತ ತಳ ಸಮುದಾಯದವರಿಗೆ, ವಂಚಿತರಿಗೆ ಉನ್ನತ ಶಿಕ್ಷಣದ ಸೌಲಭ್ಯ ಸಿಗಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವಂತಹ ಉತ್ತಮ ಶಿಕ್ಷಕರು ಲಭ್ಯವಾಗಿ, ಸುಧಾರಿತ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

50–60 ವರ್ಷಗಳ ಹಿಂದೆ ಇಕನಾಮಿಕ್ಸ್ ಎಂದರೆ ಮೈಕ್ರೊ, ಮ್ಯಾಕ್ರೊ, ಸಾರ್ವಜನಿಕ ಆಡಳಿತ ಮತ್ತು ಹಣಕಾಸು ಅರ್ಥಶಾಸ್ತ್ರಕ್ಕೆ ಸೀಮಿತವಾಗಿತ್ತು. ಇಂದು ಪರಿಸರ ಅರ್ಥಶಾಸ್ತ್ರ, ವರ್ತನಾತ್ಮಕ ಅರ್ಥಶಾಸ್ತ್ರ, ಅನ್ವಯಿಕ ಅರ್ಥಶಾಸ್ತ್ರ ಹೀಗೆ ವಿವಿಧ ಜ್ಞಾನಶಿಸ್ತುಗಳಾಗಿ ಬೆಳೆಯುತ್ತಲೇ ಇದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು.

ಅಸಮಾನತೆ ಹೆಚ್ಚಳ: ಸಿಂಗ್‌

ಯೋಜನಾ ಆಯೋಗ ಇರುವಷ್ಟು ದಿನ ಸಮಾಜದಲ್ಲಿನ ಅಸಮಾನತೆ ನಿಯಂತ್ರಣದಲ್ಲಿತ್ತು. ಅದನ್ನು ರದ್ದು ಮಾಡಿದ ಬಳಿಕ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್‌ ಹೇಳಿದರು.

ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯದ  ಆರ್ಥಿಕ ಪರಿಸ್ಥಿತಿಯಲ್ಲಿ ನವೀನ ಚಿಂತನೆ ಹಾಗೂ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಅದರಿಂದ ಮಾತ್ರ ಆರ್ಥಿಕ ಬೆಳವಣಿಗೆ ದರ ಹೆಚ್ಚಾಗಲು ಸಾಧ್ಯ ಎಂದೂ ಅವರು ಅಭಿಪ್ರಾಯಪಟ್ಟರು.

ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿ, ಅಸಮಾನತೆ ತೊಲಗಿಸಿ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಆಗಬೇಕಿದೆ ಎಂದರು.

ಅಂಬೇಡ್ಕರ್ ಸ್ಕೂಲ್ ಆಫ್ ಇಕಾನಮಿಕ್ಸ್ ನಲ್ಲಿ ಕಲಿತ ಪದವೀಧರರು ಒಳ್ಳೆಯ ಆರ್ಥಿಕ ತಜ್ಞರಾಗಿ ದೇಶ ಹಾಗೂ ನಾಡಿನ ಬೆಳವಣಿಗೆಗೆ ಸಹಕರಿಸಲಿ. ಈ ಸಂಸ್ಥೆ ಕೇವಲ ವ್ಯಕ್ತಿಗತ ಬೆಳವಣಿಗೆಗೆ ಸೀಮಿತವಾಗದೇ, ದೇಶದ ಪ್ರಗತಿಗೆ ಪೂರಕವಾಗುವ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು.

ರಾಜ್ಯ ಸರ್ಕಾರದ ಬಗ್ಗೆ ಸಿಂಗ್ ಮೆಚ್ಚುಗೆ

ವಿತ್ತೀಯ ಕೊರತೆಯಿಲ್ಲದಂತೆ ಬಜೆಟ್‌ ಮಂಡಿಸುತ್ತಿರುವ ಸಿದ್ದರಾಮಯ್ಯ, ಆರ್ಥಿಕ ಶಿಸ್ತು ಪಾಲಿಸುತ್ತಿರುವ ಅತ್ಯುತ್ತಮ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸಿದ್ದಾರೆ ಎಂದು ಮನಮೋಹನಸಿಂಗ್ ಬಣ್ಣಿಸಿದರು.

12 ಯಶಸ್ವಿ ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯ, ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಯುಪಿಎ ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ಅನುಷ್ಠಾನ ಮಾಡಲಾಗಿದ್ದು, ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು ಶ್ಲಾಘನೀಯ. ರೈತರ ಸಾಲಮನ್ನಾಕ್ಕೆ ₹8,160 ಕೋಟಿ ಕೊಟ್ಟಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕವು ಇಡೀ ದೇಶದ ಅತ್ಯುತ್ತಮ ಶೈಕ್ಷಣಿಕ ತಾಣವಾಗಿದೆ. ಭಾರತದಲ್ಲಿ 45,000 ವಿದೇಶಿ ವಿದ್ಯಾರ್ಥಿಗಳು ಓದುತ್ತಿದ್ದು, ಈ ಪೈಕಿ 13,600 ಮಂದಿ  ಇಲ್ಲೇ ಓದುತ್ತಿರುವುದು ಕರ್ನಾಟಕದ ಹೆಮ್ಮೆಗೆ ಸಾಕ್ಷಿ ಎಂದರು.

ಸನ್ಮಾನ ನಿರಾಕರಿಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌ ನಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದರು.

ಡಾ. ಸಿಂಗ್‌, ರಂಗರಾಜನ್‌ ಅವರನ್ನು ಸಿದ್ದರಾಮಯ್ಯ ಸನ್ಮಾನಿಸಿದರು. ಬಳಿಕ, ಕಾರ್ಯಕ್ರಮ ನಿರೂಪಕಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಎಂದು ಘೋಷಿಸಿದರು. ‘ನನಗ್ಯಾಕೆ ಸನ್ಮಾನ, ಬೇಡ ಬೇಡ’ ಎಂದು ಹೇಳಿದ ಸಿದ್ದರಾಮಯ್ಯ, ತಂದಿದ್ದ ಹಾರ, ಶಾಲುಗಳನ್ನು ವಾಪಸ್ ಕಳುಹಿಸಿದರು.

ಪ್ರೇಕ್ಷಕರ ಸಾಲಿನಲ್ಲಿ ಸಚಿವ ರೇವಣ್ಣ

ಸಮಾರಂಭ ಆರಂಭವಾದ ಬಳಿಕ ಸಭಾಂಗಣಕ್ಕೆ ಆಗಮಿಸಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದರು. ಮನಮೋಹನ ಸಿಂಗ್‌ ಪತ್ನಿ ಗುರುಶರಣ್‌ ಕೌರ್‌ ಪ್ರೇಕ್ಷಕರ ಮೊದಲ ಸಾಲಿನಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry