ಶುಕ್ರವಾರ, ಸೆಪ್ಟೆಂಬರ್ 20, 2019
25 °C

’ತಂದೆಯಿಂದಲೇ ಅತ್ಯಾಚಾರ ಕ್ರೂರ ಅಪರಾಧ’

Published:
Updated:
’ತಂದೆಯಿಂದಲೇ ಅತ್ಯಾಚಾರ ಕ್ರೂರ ಅಪರಾಧ’

ನವದೆಹಲಿ: ತಂದೆಯೊಬ್ಬ ಮಗಳನ್ನೇ ಕಾಮತೃಷೆಗೆ ಬಳಸಿಕೊಳ್ಳುವುದಕ್ಕಿಂತಲೂ ಕ್ರೂರವಾದ ಅಪರಾಧ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್‌, ತನ್ನ ಒಂಬತ್ತು ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಹಾಗೂ ವಿಕೃತವಾಗಿ ಆಕೆಯನ್ನು ಲೈಂಗಿಕತೆಗೆ ಬಳಸಿಕೊಂಡಿದ್ದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಈ ಸಂಬಂಧ, ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಯಾವುದಕ್ಕೂ ಹಿಂಜಯರಿಯದೆ ಮಗಳಿಗೆ ರಕ್ಷಣೆ ನೀಡಬೇಕಾದುದು ತಂದೆಯ ಆದ್ಯ ಕರ್ತವ್ಯ, ಅಂತಹುದರಲ್ಲಿ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗುವುದು ಘೋರ ಎಂದು ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್‌ ಮತ್ತು ಮುಕ್ತಾ ಗುಪ್ತಾ ಅವರನ್ನೊಳಗೊಂಡ ಪೀಠ ಹೇಳಿದೆ.

ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ನಿಭಾಯಿಸುವಾಗ ಸೂಕ್ಷ್ಮ ಸಂವೇದನೆ ಇರಬೇಕು, ಏಕೆಂದರೆ ಅಂತಹ ಘಟನೆಗಳು ಜೀವನಪೂರ್ತಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಪೀಠ ಉಲ್ಲೇಖಿಸಿದೆ.

ಕನಿಷ್ಠ 20 ವರ್ಷ ಜೈಲು ಶಿಕ್ಷೆ ಪೂರೈಸುವವರೆಗೂ ಸರ್ಕಾರ ಆತನ ವಿರುದ್ಧ ಮೃದು ಧೋರಣೆ ತಳೆಯಬಾರದು ಎಂದು ವಿಚಾರಣಾ ನ್ಯಾಯಾಲಯ ಸೂಚಿಸಿತ್ತು.

ನೈರುತ್ಯ ದೆಹಲಿಯ ನಜಾಫ್‌ಗಡ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆತನ ಪತ್ನಿ 2012ರ ಸೆಪ್ಟೆಂಬರ್‌ನಲ್ಲಿ ದೂರು ನೀಡಿದ್ದರು. ತನ್ನ ಮೇಲೆ ಅನೇಕ ಸಲ ಅತ್ಯಾಚಾರ ನಡೆಸಿದ್ದ ತಂದೆ, ವಿಷಯವನ್ನು ಬಹಿರಂಗಪಡಿಸದೇ ಇರುವಂತೆ ಬೆದರಿಕೆ ಒಡ್ಡಿದ್ದುದಾಗಿ ಬಾಲಕಿ ಹೇಳಿದ್ದಳು.

Post Comments (+)