ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಕುಸಿತ: ಕೃಷಿ, ಮಧ್ಯಮ ವರ್ಗಕ್ಕೆ ಬರೆ’

ಕೇಂದ್ರದ ವಿರುದ್ಧ ಟೀಕೆ ಮುಂದುವರಿಸಿದ ಬಿಜೆಪಿ ಮುಖಂಡ ಯಶವಂತ ಸಿನ್ಹಾ
Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ‍ಪ್ರಗತಿ ಕುಂಠಿತಗೊಂಡಿರುವುದರಿಂದಾಗಿ ಕೃಷಿ, ಅಸಂಘಟಿತ ವಲಯ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವ ಜನರು ಮತ್ತು ಮಧ್ಯಮ ವರ್ಗ ಸಂಕಷ್ಟಕ್ಕೆ ಒಳಗಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಯಶವಂತ ಸಿನ್ಹಾ ಹೇಳಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರೂ ಇತ್ತೀಚೆಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಣಕಾಸು ಸಚಿವರು, ಸಚಿವಾಲಯ, ನೀತಿ ಆಯೋಗ ಮತ್ತು ಪ್ರಧಾನಿ ಕಾರ್ಯಾಲಯ ಆರ್ಥಿಕ ಪ್ರಗತಿ ಕುಸಿತದ ನೇರ ಹೊಣೆ ಹೊತ್ತುಕೊಳ್ಳಬೇಕು. ಯಾಕೆಂದರೆ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲ ಸಚಿವಾಲಯಗಳ ಉಸ್ತುವಾರಿ ಈ ಸಂಸ್ಥೆಗಳದ್ದೇ
ಆಗಿದೆ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸಿನ್ಹಾ ಪ್ರತಿಪಾದಿಸಿದ್ದಾರೆ.

ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ಲೇಖನ ಬರೆದಿದ್ದ ಸಿನ್ಹಾ ಅವರು ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದ್ದರು. ಇದು ಆರ್ಥಿಕ ಪ್ರಗತಿ ಕುಸಿತದ ಬಗ್ಗೆ ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

ವಿಜಯದಶಮಿ ದಿನ ಮಾತನಾಡಿದ್ದ ಭಾಗವತ್‌ ಅವರು ಆರ್ಥಿಕ ಕುಸಿತದಿಂದಾಗಿ ಕೃಷಿ ಮತ್ತು ಅಸಂಘಟಿತ ವಲಯ ಕಷ್ಟ ಅನುಭವಿಸುತ್ತಿದೆ ಎಂದು ಹೇಳಿದ್ದರು. ಜತೆಗೆ ವಿದೇಶಾಂಗ ನೀತಿ ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿನ ಸಾಧನೆಯನ್ನು ಹೊಗಳಿದ್ದರು. ಭಾಗವತ್‌ ಅವರ ಮಾತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೌಲ್ಯಮಾಪನವೇ ಎಂಬ ಪ್ರಶ್ನೆಗೆ, ಭಾಗವತ್‌ ಅವರ ಮಾತು ತಮಗೆ ಆಶ್ಚರ್ಯ ಉಂಟು ಮಾಡಿಲ್ಲ ಎಂದರು.

‘ಅರ್ಥ ವ್ಯವಸ್ಥೆಗೆ ಸಂಬಂಧಿಸಿ ನನ್ನ ವಿಶ್ಲೇಷಣೆಯನ್ನು ಭಾಗವತ್‌ ಅವರು ಒಪ್ಪಿಕೊಂಡಿದ್ದಾರೆ ಎಂಬುದು ಆಶ್ಚರ್ಯವಲ್ಲ. ನಾನು ಹೇಳಿದ್ದು ವಾಸ್ತವ. ಹಾಗಾಗಿ ತಳಮಟ್ಟದ ಸಂಪರ್ಕ ಇರುವ ಯಾವುದೇ ವ್ಯಕ್ತಿ ಅದನ್ನು ಅಲ್ಲಗಳೆಯಲಾಗದು. ವಿಶ್ಲೇಷಣೆಯನ್ನು ಮುಂದುವರಿಸಿ ಹೇಳುವುದಾದರೆ, ಆರ್ಥಿಕ ಕುಸಿತದಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ಕೃಷಿ ಕ್ಷೇತ್ರ. ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳನ್ನು ಹೊಂದಿರುವ ಅಸಂಘಟಿತ ವಲಯ ನಂತರದ ಸ್ಥಾನದಲ್ಲಿದೆ. ಕೆಲಸದ ಹುಡುಕಾಟದ ಲ್ಲಿರುವ ಯುವಕ ಯುವತಿಯರಿಗೆ ಉದ್ಯೋಗ ದೊರೆಯುತ್ತಿಲ್ಲ. ಈ ಎಲ್ಲದರ ಪರಿಣಾಮ ಮಧ್ಯಮ ವರ್ಗದ ಮೇಲೆ ಆಗುತ್ತಿದೆ’ ಎಂದು ಸಿನ್ಹಾ ವಿವರಿಸಿದ್ದಾರೆ.

‘ಬ್ಯಾಂಕುಗಳ ಸಮಸ್ಯೆ, ನೋಟು ರದ್ದತಿ ಮತ್ತು ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನಗಳೇ ಈ ಹಿಂಜರಿತಕ್ಕೆ ಕಾರಣ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮದೇ ಅಭಿಪ್ರಾಯಗಳನ್ನು ಭಾಗವತ್‌ ಅವರೂ ವ್ಯಕ್ತಪಡಿಸಿರುವುದು ಕಾಕತಾಳೀಯ. ತಾವು ಆರ್‌ಎಸ್‌ಎಸ್‌ ಜತೆ ಸಂಪರ್ಕದಲ್ಲಿ ಇಲ್ಲ ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ಭಾಗವತ್‌ ಹೇಳಿಕೆ ಪ್ರಕಟಣೆಗೆ ತಡೆ

ಭಾಗವತ್‌ ಅವರು ಸರ್ಕಾರದ ಆರ್ಥಿಕ ನೀತಿ ಬಗ್ಗೆ ಮಾಡಿದ ಟೀಕೆ ಮಾಧ್ಯಮದಲ್ಲಿ ಸರಿಯಾಗಿ ಪ್ರಕಟವಾಗದಂತೆ ನೋಡಿಕೊಳ್ಳಲಾಗಿದೆ. ಅರ್ಥ ವ್ಯವಸ್ಥೆಯ ನಿರ್ವಹಣೆಯೂ ಸೇರಿ ಎಲ್ಲದರಲ್ಲಿಯೂ ಸರ್ಕಾರ ಯಶಸ್ವಿಯಾಗಿದೆ ಎಂದು ಅವರು ಬೆನ್ನು ತಟ್ಟಿದ್ದಾರೆ ಎಂಬ ಅರ್ಥದ ವರದಿಗಳು ಮಾಧ್ಯಮದಲ್ಲಿ ಪ್ರಕಟವಾದವು ಎಂದು ಸಿನ್ಹಾ ಹೇಳಿದ್ದಾರೆ.

ಜೇಟ್ಲಿಗೆ ಪ್ರತಿಕ್ರಿಯೆ ಇಲ್ಲ:

‘ಸಿನ್ಹಾ ಅವರು 80ನೇ ವಯಸ್ಸಿನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿ ಕುಳಿತಿದ್ದಾರೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಾಡಿದ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ. ‘ಇಂತಹ ತುಚ್ಛ ಮತ್ತು ಅಸಭ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದೂ ನನ್ನ ಘನತೆಗೆ ಕುಂದು ತರಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT