ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕಾಶ್ಮೀರ ವಿವಾದ ಕೆದಕಿದ ಪಾಕ್‌: ಭಾರತದ ಪ್ರತ್ಯುತ್ತರ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಮತ್ತೆ ಕೆದಕಿದೆ. ಕಾಶ್ಮೀರ ಕಣಿವೆಯಲ್ಲಿ ಭಾರತವು ಭಯೋತ್ಪಾದನೆ ನಡೆಸುತ್ತಿದೆ ಎಂದು  ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ಆರೋಪಿಸಿದ್ದಾರೆ.

ಮಹಾಧಿವೇಶನದ ಚರ್ಚೆಯಲ್ಲಿ ಮಲೀಹಾ ಅವರು ಆಡಿದ ಮಾತಿಗೆ ಭಾರತ ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ಇದು ಪಾಕಿಸ್ತಾನದ ಏಕಾಂಗಿ ಧ್ವನಿ. ಇದಕ್ಕೆ ಯಾರ ಬೆಂಬಲವಾಗಲೀ ಯಾವುದೇ ಆಧಾರವಾಗಲಿ ಇಲ್ಲ ಎಂದು ಭಾರತದ ಕಾಯಂ ನಿಯೋಗದ ಅಧಿಕಾರಿ ಈನಂ ಗಂಭೀರ್‌ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಹೋಗಿ ‘ನಿರ್ದಿಷ್ಟ ದಾಳಿ’ ನಡೆಸಿದ್ದಾಗಿ ಭಾರತ ಸುಳ್ಳು ಹೇಳಿಕೊಂಡು ಬರುತ್ತಿದೆ. ಪಾಕಿಸ್ತಾನದ ಜತೆಗಿನ ಸಂಘರ್ಷವನ್ನು ಇನ್ನಷ್ಟು ಪ್ರಚೋದಿಸುವುದಕ್ಕಾಗಿ ಹೀಗೆ ಸುಳ್ಳು ಹೇಳಲಾಗುತ್ತಿದೆ. ಭಾರತ ನಡೆಸುವ ಯಾವುದೇ ಅತಿಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಮಲೀಹಾ ಎಚ್ಚರಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯಾಚೆಗೆ ಇನ್ನಷ್ಟು ನಿರ್ದಿಷ್ಟ ದಾಳಿಗಳನ್ನು ನಡೆಸುವುದಾಗಿ ಭಾರತ ಬೆದರಿಕೆ ಒಡ್ಡುತ್ತಿದೆ. ಬೇರೊಂದು ದೇಶದ ಮೇಲೆ ಬಲ ಪ್ರಯೋಗ ನಡೆಸಬಾರದು ಎಂಬ ವಿಶ್ವಸಂಸ್ಥೆಯ ನಿಯಮವನ್ನು ಭಾರತ ಉಲ್ಲಂಘಿಸಿದೆ. ಭಾರತದ ಈ ಬಹಿರಂಗ ಬೆದರಿಕೆಯನ್ನು ವಿಶ್ವಸಂಸ್ಥೆ ನಿರ್ಲಕ್ಷಿಸಬಾರದು ಎಂದು ಅವರು ಕೋರಿದ್ದಾರೆ.

ಪಾಕಿಸ್ತಾನದ ವಿರುದ್ಧ ಪ್ರಚೋದನಾಕಾರಿಯಾಗಿ ವರ್ತಿಸುತ್ತಿರುವ ಭಾರತದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಶ್ಮೀರದ ಜನರ ಮೇಲೆ ಎಸಗುತ್ತಿರುವ ಅಪರಾಧವನ್ನು ಮುಚ್ಚಿಡುವುದಕ್ಕಾಗಿ ಎಲ್‌ಒಸಿಯಲ್ಲಿ ಭಾರತ ನಿತ್ಯವೂ ಕದನ ವಿರಾಮ ಉಲ್ಲಂಘನೆ ನಡೆಸುತ್ತಿದೆ ಎಂದು ಮಲೀಹಾ ಆರೋಪಿಸಿದ್ದಾರೆ. ನಿರ್ದಿಷ್ಟ ದಾಳಿ ನಡೆಸಲಾಗಿದೆ ಎಂಬ ಭಾರತದ ಹೇಳಿಕೆಯೇ ಆ ದೇಶ ಅತಿಕ್ರಮಣ ನಡೆಸುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ. ಇದರ ಆಧಾರದಲ್ಲಿ ಸ್ವ ರಕ್ಷಣೆಗೆ ಪಾಕಿಸ್ತಾನವು ಪ್ರತಿ ದಾಳಿ ನಡೆಸುವುದಕ್ಕೂ ಅವಕಾಶ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತದ ತಿರುಗೇಟು

ದಶಕಗಳಿಂದ ವಿಶ್ವಸಂಸ್ಥೆಯಲ್ಲಿ ಚರ್ಚೆಯೇ ಆಗದ ವಿಷಯವನ್ನು ಕೇಂದ್ರೀಕರಿಸಿ ಪಾಕಿಸ್ತಾನ ಮಾತನಾಡುತ್ತಿದೆ. ಜಗತ್ತು ಈ ವಿಚಾರವನ್ನು ಬಿಟ್ಟು ಮುಂದೆ ಸಾಗಿದೆ. ಆದರೆ ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಆಗಾಗ ಎತ್ತುವ ಮೂಲಕ ವಿವಾದವನ್ನು ಜೀವಂತವಾಗಿ ಇರಿಸುವ ತಂತ್ರವನ್ನು ಆ ದೇಶ ಅನುಸರಿಸುತ್ತಿದೆ. ನಮ್ಮನ್ನು ಯಾವುದು ಹಿಂದಕ್ಕೆ ಸೆಳೆಯುತ್ತಿದೆ ಎಂಬುದಕ್ಕೆ ಈ ಓಬಿರಾಯನ ಕಾಲದ ಮನಸ್ಥಿತಿಯನ್ನು ಹೊಂದಿರುವುದೇ ಸಂಕೇತವಾಗಿದೆ ಎಂದು ಈನಂ ಗಂಭೀರ್‌ ಅವರು ಮಲೀಹಾ ಅವರಿಗೆ ತಿರುಗೇಟು ನೀಡಿದ್ದಾರೆ.

ಇಂತಹ ನಗಣ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಈ ಪವಿತ್ರ ಸಭೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಭಾರತ ಬಯಸುವುದಿಲ್ಲ ಎಂದೂ ಈನಂ ಹೇಳಿದ್ದಾರೆ.

ಜಗತ್ತಿನ ಗಮನ ಸೆಳೆಯುವ ವ್ಯರ್ಥ ಪ್ರಯತ್ನ

ವಿಶ್ವಸಂಸ್ಥೆಯಲ್ಲಿ ಕಳೆದ ತಿಂಗಳು ನಡೆದ ಮಹಾಧಿವೇಶನದಲ್ಲಿ ನೂರಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಿದ್ದರು. ಈ ನಾಯಕರಲ್ಲಿ ಒಬ್ಬರೂ ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನದ ವಾದಕ್ಕೆ ಬೆಂಬಲ ನೀಡಿರಲಿಲ್ಲ. ಹಾಗಿದ್ದರೂ, ಕಾಶ್ಮೀರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಜಾರಿಗೆ ತಂದಿಲ್ಲ ಎಂದು ಮಲೀಹಾ ಅವರು ಪುನರುಚ್ಚರಿಸಿದ್ದರು.

ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಕಾಖನ್‌ ಅಬ್ಬಾಸಿ ಅವರೂ ಭದ್ರತಾ ಮಂಡಳಿಯ ನಿರ್ಣಯವನ್ನು ಕಳೆದ ತಿಂಗಳು ಪ್ರಸ್ತಾಪಿಸಿದ್ದರು. ಇದಕ್ಕೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಉತ್ತರ ನೀಡಿದ್ದರು.

‘ಅಬ್ಬಾಸಿ ಅವರು ಹಳೆಯ ನಿರ್ಣಯವೊಂದರ ಬಗ್ಗೆ ಮಾತನಾಡಿದ್ದಾರೆ. ಆದರೆ ನಂತರದ ಬೆಳವಣಿಗೆಗಳಿಂದಾಗಿ ಈ ನಿರ್ಣಯವೇ ಅಪ್ರಸ್ತುತವಾಗಿಬಿಟ್ಟಿದೆ ಎಂಬುದರ ಬಗ್ಗೆ ಅವರು ಜಾಣ ಮರೆವು ತೋರಿದ್ದಾರೆ. ಕಾಶ್ಮೀರ ವಿಚಾರವನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಲು ಶಿಮ್ಲಾ ಮತ್ತು ಲಾಹೋರ್‌ ಒಪ್ಪಂದಗಳ ಮೂಲಕ ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿಕೊಂಡಿವೆ. ಹಾಗಾಗಿ ವಿಶ್ವಸಂಸ್ಥೆಯ ನಿರ್ಣಯಕ್ಕೆ ಈಗ ಮೌಲ್ಯ ಇಲ್ಲ’ ಎಂದು ಸುಷ್ಮಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT