ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಅಭಿವೃದ್ಧಿ ಶುಲ್ಕ ಹಿಂದಿರುಗಿಸಲು ಆದೇಶ

ಗಣಿ ಕಂಪೆನಿಗಳ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್‌
Last Updated 4 ಅಕ್ಟೋಬರ್ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳಿಂದ ಅರಣ್ಯ ಅಭಿವೃದ್ಧಿ ಶುಲ್ಕ (ಎಫ್‌ಡಿಎಫ್‌) ಸಂಗ್ರಹಿಸುವುದು ಸಂವಿಧಾನ ಬಾಹಿರ’ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್‌, 2008ರಿಂದ ಈತನಕ ವಸೂಲು ಮಾಡಿರುವ ಅಭಿವೃದ್ಧಿ ಶುಲ್ಕವನ್ನು ಹಿಂತಿರುಗಿಸುವಂತೆ ಆದೇಶಿಸಿದೆ.

ಈ ಕುರಿತಂತೆ 40ಕ್ಕೂ ಹೆಚ್ಚು ಖಾಸಗಿ ಗಣಿ ಕಂಪೆನಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಮಾನ್ಯ ಮಾಡಿದ್ದು, ‘ರಾಜ್ಯ ಸರ್ಕಾರಕ್ಕೆ ಇಂತಹ ಶುಲ್ಕವನ್ನು ಹೇರುವ ಅಧಿಕಾರ ಇಲ್ಲ’ ಎಂದು ಹೇಳಿದೆ.

ಈ ಆದೇಶದಿಂದಾಗಿ ರಾಜ್ಯ ಸರ್ಕಾರ ₹ 3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಗಣಿ ಕಂಪೆನಿಗಳಿಗೆ ಹಿಂದಿರುಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಕರಣವೇನು:

ಕರ್ನಾಟಕ ಅರಣ್ಯ ಕಾಯ್ದೆ–1963ರ ಕಲಂ 98–’ಎ’ಗೆ 2016ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ಮೂಲಕ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲು ಹಾಗೂ ಅದಿರು ಗಣಿಗಾರಿಕೆ ಗುತ್ತಿಗೆ ಪಡೆದಿರುವ ಕಂಪೆನಿಗಳು ವಾರ್ಷಿಕ ಶೇ 12ರಷ್ಟು (ಎಫ್‌ಡಿಎಫ್‌) ಶುಲ್ಕ ನೀಡುವಂತೆ ಕಾನೂನು ರೂಪಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ತೆರಿಗೆ ಅಸಿಂಧು:

ಈ ಮೊದಲು ಅರಣ್ಯ ಕಾಯ್ದೆಯ ಕಲಂ 98–‘ಎ’ಗೆ ತಿದ್ದುಪಡಿ ತರುವ ಮೂಲಕ ಶೇ 12ರಷ್ಟು ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ)  ಪಾವತಿಸಬೇಕು ಎಂದು ರಾಜ್ಯ ಸರ್ಕಾರವು 2008ರ ಆಗಸ್ಟ್‌ 16ರಂದು ಅಧಿಸೂಚನೆ ಹೊರಡಿಸಿತ್ತು.

ಅರಣ್ಯ ಪ್ರದೇಶಗಳಲ್ಲಿ ಕಲ್ಲು ಹಾಗೂ ಅದಿರು ಗಣಿಗಾರಿಕೆ ನಡೆಸುತ್ತಿರುವ ಖಾಸಗಿ ಕಂಪೆನಿಗಳು ಈ ಎಫ್‌ಡಿಟಿ ಪಾವತಿಸಬೇಕು ಎಂದೂ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಹಲವು ಕಂಪೆನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿಗಳನ್ನು ಅಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ನ್ಯಾಯಪೀಠವು 2015ರ ಡಿಸೆಂಬರ್‌ 3ರಂದು ಅಸಿಂಧು ಎಂದು ಹೇಳಿತ್ತು.

ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಇನ್ನೂ ವಿಚಾರಣೆಗೆ ಬಾಕಿ ಇದೆ. ಏತನ್ಮಧ್ಯೆ ರಾಜ್ಯ ಸರ್ಕಾರ ‘ಅರಣ್ಯ ಅಭಿವೃದ್ಧಿ ತೆರಿಗೆ’ ಬದಲಿಗೆ ‘ಅರಣ್ಯ ಅಭಿವೃದ್ಧಿ ಶುಲ್ಕ’ ಎಂದು ಪರಿವರ್ತಿಸಿ 2016ರ ಜುಲೈ 27ರಂದು ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT