ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ–ಸಮೂಹ ಸಾರಿಗೆ ಜೋಡಣೆ: 7ರಂದು ಸಭೆ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊವನ್ನು ಸಮೂಹ ಸಾರಿಗೆ ವ್ಯವಸ್ಥೆಯನ್ನು ಜೋಡಿಸುವ ಕುರಿತು ಸಮಾಲೋಚನೆ ನಡೆಸಲು ‘ಸಿಟಿಜನ್‌ ಫಾರ್‌ ಬೆಂಗಳೂರು’ ಸಂಘಟನೆಯು ಇದೇ 7ರಂದು ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ ಎಂದು ಸಂಘಟನೆಯ ಸದಸ್ಯ ಎನ್‌.ಎಸ್‌.ಮುಕುಂದ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು,‘ ಲ್ಯಾವೆಲ್ಲೆ ರಸ್ತೆಯ ರೋಟರಿ ಹೌಸ್‌ ಆಫ್‌ ಫ್ರೆಂಡ್‌ಷಿಪ್‌ ಭವನದಲ್ಲಿ ಸಂಜೆ 4 ರಿಂದ 6 ರವರೆಗೆ ಸಭೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮೆಟ್ರೊ ನಿಲ್ದಾಣಗಳ ನಿರ್ಮಾಣಕ್ಕೆ ಅನೇಕ  ಕಡೆ ಅವೈಜ್ಞಾನಿಕವಾಗಿ ಸ್ಥಳ ಗುರುತಿಸಿದೆ. ಈಗಿರುವ ಹಲವಾರು ಮೆಟ್ರೊ ನಿಲ್ದಾಣಗಳನ್ನು ತಲುಪಲು ಸರಿಯಾದ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲ’ ಎಂದು ಅವರು ದೂರಿದರು.

ಸಂಘಟನೆಯ ಸದಸ್ಯ ರಾಜ್‌ಕುಮಾರ್‌, ‘ಬೃಹತ್‌ ಯೋಜನೆ
ಗಳನ್ನು ಕೈಗೆತ್ತಿಕೊಳ್ಳುವಾಗ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕೆಂದು ಹೈಕೋರ್ಟ್‌ ಸೂಚಿಸಿದೆ. ಆದರೆ, ನಿಗಮವು ಹೊಸ ನಿಲ್ದಾಣಗಳಿಗೆ ಸ್ಥಳ ಗುರುತಿಸುವಾಗ ಕಾಟಾಚಾರಕ್ಕೆ ಜನಾಭಿಪ್ರಾಯ ಸಂಗ್ರಹಿಸಿದೆ. ಕಂಟೊನ್ಮೆಂಟ್‌ ರೈಲು ನಿಲ್ದಾಣದ ಪಕ್ಕದಲ್ಲೇ ನಿರ್ಮಾಣವಾಗಬೇಕಾದ ಮೆಟ್ರೊ ನಿಲ್ದಾಣವನ್ನು 17 ಜನ ಬೇಡಿಕೆ ಸಲ್ಲಿಸಿದ್ದಾರೆ ಎಂಬ ನೆಪವೊಡ್ಡಿ ಬಂಬೂಬಜಾರ್‌ ಮೈದಾನದ ಬಳಿ ನಿರ್ಮಿಸಲು ಮುಂದಾಗಿದೆ. ಈ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

ಸಂಘಟನೆಯ ಸಂಚಾಲಕ ಶ್ರೀನಿವಾಸ ಅಲವಿಲ್ಲಿ, ‘ರಾಜ್ಯದ ಬಜೆಟ್‌ನ ನಾಲ್ಕನೇ ಒಂದು ಭಾಗದಷ್ಟು ಮೊತ್ತವನ್ನು ಮೆಟ್ರೊ ಯೋಜನೆಗಾಗಿ ವಿನಿಯೋಗಿಸುತ್ತಿದ್ದಾರೆ. ಬೈಯಪ್ಪನಹಳ್ಳಿ ಹಾಗೂ ಬನಶಂಕರಿ ಮೆಟ್ರೊ ನಿಲ್ದಾಣಗಳಿಂದ ಸಮೀಪದ ಬಸ್‌ ತಂಗುದಾಣವನ್ನು ಸುಲಭವಾಗಿ ತಲುಪಲು ಸೌಲಭ್ಯ ಕಲ್ಪಿಸಿಲ್ಲ. ನಿಗಮವು ಮೆಟ್ರೊ ಮಾರ್ಗದ ಯೋಜನೆ ರೂಪಿಸುವಾಗ ಬಿಎಂಟಿಸಿ ಮತ್ತು ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಲ್ಲ. ಇದರಿಂದಾಗಿ ಕಂಟೊನ್ಮೆಂಟ್‌ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿಯಾಗಿದೆ’ ಎಂದು ಆರೋಪಿಸಿದರು.

‘ಜನಪ್ರತಿನಿಧಿಗಳು, ಬಿಎಂಆರ್‌ ಸಿಎಲ್‌ ಮತ್ತು ಬಿಎಂಟಿಸಿ ಅಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಿದ್ದೇವೆ. ನಗರ ಸಾರಿಗೆ ಮತ್ತು ನಗರಯೋಜನಾ ತಜ್ಞರೂ ಭಾಗವಹಿಸಲಿದ್ದಾರೆ. ತಜ್ಞರಾದ ಆಶಿಷ್‌ ವರ್ಮಾ, ಪವನ್‌ ಮುಲು ಕುಟ್ಲಾ, ಜಿ.ಎಂ.ಆನಂದ್‌, ಜಾರ್ಜ್‌ ಕುರುವಿಲ್ಲಾ, ಅಶ್ವಿನ್‌ ಮಹೇಶ್‌, ನರೇಶ್‌ ನರಸಿಂಹನ್‌, ವಿ.ರವಿಚಂದರ್‌ ಅವರು ಭಾಗವಹಿಸಲು ಒಪ್ಪಿದ್ದಾರೆ. ಸಾರ್ವಜನಿಕರೂ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಬಹುದು’ ಎಂದು ಸಂಘಟನೆಯ ಸದಸ್ಯೆ ತಾರಾ ಕೃಷ್ಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT