ಶನಿವಾರ, ಸೆಪ್ಟೆಂಬರ್ 21, 2019
25 °C
ದಾಸರಹಳ್ಳಿ, ನಾಗಸಂದ್ರ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲ

ಪಾದಚಾರಿ ಸುರಂಗ ಮಾರ್ಗಕ್ಕೆ ಟೆಂಡರ್‌

Published:
Updated:
ಪಾದಚಾರಿ ಸುರಂಗ ಮಾರ್ಗಕ್ಕೆ ಟೆಂಡರ್‌

ಬೆಂಗಳೂರು: ‘ನಮ್ಮ ಮೆಟ್ರೊ’ ಉತ್ತರ –ದಕ್ಷಿಣ ಕಾರಿಡಾರ್‌ನ ನಾಗಸಂದ್ರ ಹಾಗೂ ದಾಸರಹಳ್ಳಿ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ದಾಟಲು ಅನುಕೂಲ ಕಲ್ಪಿಸಲು ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೊನೆಗೂ ಟೆಂಡರ್‌ ಆಹ್ವಾನಿಸಿದೆ.

ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಮೆಟ್ರೊ ಎತ್ತರಿಸಿದ ಮಾರ್ಗ ಹಾದುಹೋಗಿದೆ. ಪ್ರಯಾಣಿಕರು ಮೆಟ್ರೊ ನಿಲ್ದಾಣವನ್ನು ತಲುಪಲು ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕು. ಹೆದ್ದಾರಿಯಲ್ಲಿ ದಿನವಿಡೀ ವಾಹನ ಸಂಚಾರ ಇರುತ್ತದೆ. ಹಾಗಾಗಿ ಮೆಟ್ರೊ ಪ್ರಯಾಣಿಕರು ರಸ್ತೆ ದಾಟಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ.

ಮೆಟ್ರೊ ಮಾರ್ಗ ನಿರ್ಮಾಣ ಯೋಜನೆಯಲ್ಲೇ ಇಲ್ಲಿ ಪಾದಚಾರಿ ಸುರಂಗ ನಿರ್ಮಿಸುವ ಪ್ರಸ್ತಾವವಿತ್ತು. ನಾಗಸಂದ್ರ– ಪೀಣ್ಯ ಕೈಗಾರಿಕಾ ಪ್ರದೇಶದ ನಡುವಿನ ಮಾರ್ಗದಲ್ಲಿ 2015ರ ಮೇ 1ರಿಂದ ಮೆಟ್ರೊ ಸಂಚಾರ ಆರಂಭವಾಗಿತ್ತು. ಆದರೆ ಪಾದಚಾರಿ ಸುರಂಗ ಮಾತ್ರ ಇದುವರೆಗೂ

ನಿರ್ಮಾಣವಾಗಿಲ್ಲ.

ಅಪಘಾತವೂ ಸಂಭವಿಸಿತ್ತು: ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ 2017ರ ಏಪ್ರಿಲ್‌ 11ರಂದು ಬಾಲಕಿ ಆರ್‌.ಪೂಜಾ (16 ವರ್ಷ) ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ಎರಡು ದಿನಗಳ ಬಳಿಕ ಬಾಲಕಿ ಮೃತಪಟ್ಟಿದ್ದಳು. ಇಲ್ಲಿ ಪಾದಚಾರಿ ಸುರಂಗ ಮಾರ್ಗ ನಿರ್ಮಿಸುವಂತೆ ಮೆಟ್ರೊ ಪ್ರಯಾಣಿಕರು ಒತ್ತಾಯಿಸಿದ್ದರು.

ಹಿಂದೊಮ್ಮೆ ಟೆಂಡರ್‌ ಆಹ್ವಾನಿಸಲಾಗಿತ್ತು: ನಾಗಸಂದ್ರ, ಜಾಲಹಳ್ಳಿ ಹಾಗೂ ದಾಸರಹಳ್ಳಿ ಮೆಟ್ರೊ ನಿಲ್ದಾಣಗಳ ಬಳಿ ₹ 9.61 ಕೋಟಿ ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲು ನಿಗಮವು 2015ರ ಜನವರಿಯಲ್ಲೂ ಟೆಂಡರ್‌ ಆಹ್ವಾನಿಸಿತ್ತು.  ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್‌ಎಐ) ಅನುಮತಿ ಅಗತ್ಯವಿದೆ. ಎನ್ಎಚ್‌ಎಐ ಹಾಗೂ ಬಿಎಂಆರ್‌ಸಿಎಲ್‌ ನಡುವೆ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ನಡೆದಿರಲಿಲ್ಲ.

ಇದೀಗ ಸುರಂಗ ಕಾಮಗಾರಿಗೆ ನಿಗಮವು ಮತ್ತೊಮ್ಮೆ ಟೆಂಡರ್‌ ಕರೆದಿದೆ. ಅರ್ಜಿ ಸಲ್ಲಿಸಲು 2017ರ ಡಿಸೆಂಬರ್‌ 4ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿದಾರರು ₹ 15 ಲಕ್ಷ ಭದ್ರತಾ ಠೇವಣಿ ಇಡಬೇಕಿದೆ.

ಎರಡೂ ನಿಲ್ದಾಣಗಳ ಬಳಿ ರಾಷ್ಟ್ರೀಯ ಹೆದ್ದಾರಿ–4ಕ್ಕೆ ಅಡ್ಡಲಾಗಿ ಸುರಂಗ ನಿರ್ಮಾಣವಾಗಲಿದ್ದು, ಪ್ರಯಾಣಿಕರು ರಸ್ತೆ ದಾಟಲು ಇದರಿಂದ ಅನುಕೂಲ ಆಗಲಿದೆ.

ಅಂಕಿ ಅಂಶ

₹ 11.12 ಕೋಟಿ - ಕಾಮಗಾರಿ ವೆಚ್ಚ

18 ತಿಂಗಳು- ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ಅವಧಿ

Post Comments (+)