ಕಳವು ಪ್ರಕರಣದಲ್ಲಿ ಒಡಿಶಾ ಪ್ರೇಮಿಗಳ ಸೆರೆ: ಚಿನ್ನ ಜಫ್ತಿ

ಸೋಮವಾರ, ಜೂನ್ 17, 2019
27 °C

ಕಳವು ಪ್ರಕರಣದಲ್ಲಿ ಒಡಿಶಾ ಪ್ರೇಮಿಗಳ ಸೆರೆ: ಚಿನ್ನ ಜಫ್ತಿ

Published:
Updated:

ಬೆಂಗಳೂರು: ಕೆಲಸ ಮಾಡುತ್ತಿದ್ದ ಫ್ಲ್ಯಾಟ್‌ನಲ್ಲೇ ಹಣ, ಒಡವೆ ದೋಚಿದ್ದ ಪ್ರೇಮಿಗಳು ಹಾಗೂ ಅವರ ಇಬ್ಬರು ಸಹಚರರು ಕಾಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಒಡಿಶಾದ ಗಜಪತಿ ಜಿಲ್ಲೆಯ ಸಬೋತಿ ಲೀಮಾ (22), ಆಕೆಯ ಪ್ರಿಯಕರ ಶಿವ ಲೀಮಾ (27), ಮಿಥುನ್ (22) ಹಾಗೂ ಸುಜಿತ್ (25) ಎಂಬುವರನ್ನು ಬಂಧಿಸಿ, ₹ 6 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

'ಸಬೋತಿ ಹಾಗೂ ಆಕೆಯ ಸ್ನೇಹಿತರು 2011 ರಿಂದ 2017ರ ಅವಧಿಯಲ್ಲಿ ನಮ್ಮ ಫ್ಲ್ಯಾಟ್‌ನಲ್ಲಿ ₹ 20 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಐಟಿಪಿಎಲ್ ರಸ್ತೆಯ ‘ಪ್ರೆಸ್ಟೀಜ್ ಶಾಂತಿನಿಕೇತನ’ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಧರ್ಮವೀರ್ ಸಿಂಗ್ ಎಂಬುವರು ಸೆ.20ರಂದು ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದರು.

ಒಡಿಶಾದಿಂದ 2011ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ದಿಣ್ಣೂರು ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಬೋತಿ ಹಾಗೂ ಶಿವ ಅದೇ ವರ್ಷ ಧರ್ಮವೀರ್ ಸಿಂಗ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಫಿರ್ಯಾದಿಯ ಕುಟುಂಬ ಮುಂಬೈನಲ್ಲಿರುವ ಸಂಬಂಧಿಕರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿತ್ತು. ಈ ಅವಧಿಯಲ್ಲಿ ಪ್ರೇಮಿಗಳು ಹಂತ ಹಂತವಾಗಿ ಹಣ ಹಾಗೂ ಒಡವೆ ಕಳವು ಮಾಡಿ, ಸಹಚರರಿಗೆ ಕೊಡುತ್ತಿದ್ದರು. ಅವರು ಅದನ್ನು ಮಾರಾಟ ಮಾಡಿ ಹಣ ತರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

2 ಕೆ.ಜಿ.ಯಷ್ಟು ಆಭರಣಗಳನ್ನು ಮನೆಯಲ್ಲಿಟ್ಟಿದ್ದ ಧರ್ಮಸಿಂಗ್ ಕುಟುಂಬಕ್ಕೆ ಗ್ರಾಂಗಳ ಲೆಕ್ಕದಲ್ಲಿ ಚಿನ್ನ ಕಳವಾಗುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ, ಇತ್ತೀಚೆಗೆ ವಿದೇಶಿ ನೋಟುಗಳು ಕಳವಾಗಿದ್ದವು. ಈ ಬಗ್ಗೆ ಕೆಲಸದವರನ್ನು ವಿಚಾರಣೆ ನಡೆಸಿದ್ದಾಗ ತಪ್ಪೊಪ್ಪಿಕೊಂಡಿದ್ದ ಅವರು, ನೋಟುಗಳನ್ನು ಮರಳಿಸಿದ್ದರು. ಆ ನಂತರ ಅನುಮಾನಗೊಂಡ ಕುಟುಂಬ ಸದಸ್ಯರು, ಒಡವೆಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿತ್ತು. ಬಳಿಕ ಅವರು ಠಾಣೆಯ ಮೆಟ್ಟಿಲೇರಿದ್ದರು.

‘ಧರ್ಮಸಿಂಗ್ ದೂರು ಕೊಟ್ಟಿರುವ ವಿಚಾರ ಆರೋಪಿಗಳಿಗೆ ಗೊತ್ತಿರಲಿಲ್ಲ. ಏಕಾಏಕಿ ಅವರ ಮನೆ ಮೇಲೆ ದಾಳಿ ನಡೆಸಿದಾಗ, ದೂರುದಾರರ ಕುಟುಂಬಕ್ಕೆ ಸೇರಿದ ಕೆಲ ಒಡವೆಗಳು ಮನೆಯಲ್ಲಿ ಪತ್ತೆಯಾದವು. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry