ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಾವು, ಎಂಟು ಮಂದಿಗೆ ಗಾಯ

Last Updated 4 ಅಕ್ಟೋಬರ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ದುಬಾಸಿಪಾಳ್ಯ ಜಂಕ್ಷನ್‌ನಲ್ಲಿ ಬುಧವಾರ ಬೆಳಿಗ್ಗೆ ಶಾಲಾ ವಾಹನ ಅಡ್ಡಾದಿಡ್ಡಿಯಾಗಿ ಸಾಗಿದ್ದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಕೂಲಿ ಕಾರ್ಮಿಕ ದಿಲ್ದಾರ್ ಅಲಂ (22) ಎಂಬುವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಸಾಯಿಕುಮಾರ್ (28), ವಿಸ್ಮಯ್ (19), ವಿದ್ಯಾರ್ಥಿಗಳಾದ ಬೇಬಿ ಗ್ರೀಷ್ಮಾ (13), ಯೋಗೇಶ್ (9), ಸಮಿತ್ (9), ಸಾಯಿ ಈಶ (9), ಓಂ ಗಂಭೀರ್ (6) ಹಾಗೂ ಶಾಲಾ ವಾಹನ ಸಹಾಯಕಿ ನಾಗರತ್ನಮ್ಮ (38) ಅವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ‍ಡೆದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಂಗೇರಿಯ 'ಆರ್ಕಿಡ್ ದಿ ಇಂಟರ್ ನ್ಯಾಷನಲ್' ಶಾಲಾ ವಾಹನದ ಚಾಲಕ ಶಿವು, ಬೆಳಿಗ್ಗೆ 8.30ರ ಸುಮಾರಿಗೆ ಮಕ್ಕಳನ್ನು ಕರೆದುಕೊಂಡು ಆರ್‌.ವಿ.ಕಾಲೇಜು ಕಡೆಯಿಂದ ಶಾಲೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಶಾಲಾ ಬಸ್‌ನಲ್ಲಿ 15 ಮಕ್ಕಳು ಹಾಗೂ ನಾಗರತ್ನಮ್ಮ ಇದ್ದರು. ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿರುವ ಶಿವು, ದುಬಾಸಿಪಾಳ್ಯ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆಯಲು ಮುಂದಾಗಿದ್ದಾರೆ. ವೇಗ ತಗ್ಗಿಸದೆ ತಿರುವು ತೆಗೆದುಕೊಳ್ಳಲು ಯತ್ನಿಸಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಬಸ್, ಮೆಟ್ರೋ ಕಾಮಗಾರಿಗೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳಿಗೆ ಗುದ್ದಿದೆ. ನಂತರ ಬಲಬದಿಯ ರಸ್ತೆಗೆ ನುಗ್ಗಿ, ಸಾಯಿಕುಮಾರ್ ಹಾಗೂ ವಿಸ್ಮಯ್ ಅವರು ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ನಂತರ ಪಾದಚಾರಿ ಮಾರ್ಗವನ್ನೇರಿದ ವಾಹನ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕ ದಿಲ್ದಾರ್ ಅಲಂ ಅವರಿಗೆ ಗುದ್ದಿದೆ. ಫುಟ್‌ಪಾತ್‌ನಿಂದ ಕೆಳಗಿಳಿದ ಬಳಿಕ ಎದುರುಗಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಒರಗಿ ನಿಂತುಕೊಂಡಿದೆ. ತೀವ್ರ ರಕ್ತಸ್ರಾವವಾಗಿ ಅಲಂ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್, ಶಾಲಾ ವಾಹನ ಹಾಗೂ ಬಿಎಂಟಿಸಿ ಬಸ್ ಜಖಂಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ.

ರಕ್ಷಣೆಗೆ ಧಾವಿಸಿದ ಸ್ಥಳೀಯರು, ಶಾಲಾ ವಾಹನದಲ್ಲಿದ್ದ ಮಕ್ಕಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಬೇಬಿ ಗ್ರೀಷ್ಮಾ, ವಿಸ್ಮಯ್ ‌ಹಾಗೂ ಯೋಗೇಶ್‌ಗೆ ಹೆಚ್ಚಿನ ಗಾಯಗಳಾಗಿವೆ. ಉಳಿದ ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಹಾಗೂ ಅಜಾಗರೂಕ ಚಾಲನೆ (ಐಪಿಸಿ 279) ಆರೋಪದಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT