ಸೋಮವಾರ, ಸೆಪ್ಟೆಂಬರ್ 16, 2019
22 °C
‘ನಮ್ಮ ನಡೆ ಹಳ್ಳಿ ಕಡೆ’ ಸಭೆಯಲ್ಲಿ ಗ್ರಾಮಸ್ಥರ ಅಹವಾಲು

ಮನೆ ನಿರ್ಮಾಣಕ್ಕೆ ಸಿಗದ ಮರಳು: ದೂರು

Published:
Updated:

ಕೂಡ್ಲಿಗಿ: ‘ಮನೆ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಹಸು ಖರೀದಿಸಲು ಬ್ಯಾಂಕ್‌ ಸಾಲ ನೀಡುತ್ತಿಲ್ಲ. ವಸತಿ ರಹಿತರಿಗೆ ಮನೆ, ನಿವೇಶನ ಸೌಕರ್ಯ ದೊರಕಿಲ್ಲ....’

ತಾಲ್ಲೂಕಿನ ಹಾರಕಭಾವಿ ಗ್ರಾಮದಲ್ಲಿ ಮಂಗಳವಾರ ‘ನಮ್ಮ ನಡೆ ಹಳ್ಳಿ ಕಡೆ’ ಸಭೆ ನಡೆಸಿದ ಶಾಸಕ ಬಿ.ನಾಗೇಂದ್ರ ಅವರಿಗೆ ಗ್ರಾಮಸ್ಥರು ಸಲ್ಲಿಸಿದ ದೂರಗಳಿವು.

‘ಮನೆ ನಿರ್ಮಾಣ ಮಾಡಲು ಮರಳು ಸಿಗುತ್ತಿಲ್ಲ. ಅರಣ್ಯದಲ್ಲಿ ಮರಗಳನ್ನು ಕಡಿದುಕೊಂಡು ಹೋದರೂ ಕೇಳದ ಅಧಿಕಾರಿಗಳು ಮನೆ ಕಟ್ಟಲು ಮರಳು ತರುವ ಜನಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ’ ಎಂದು ಗ್ರಾಮದ ಕರೆಗೌಡ ದೂರಿದರು.

‘ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯ ಅಡಿ ಹಸು ಸಾಕಣೆಯ ತರಬೇತಿ ಪಡೆದಿದ್ದು, ಹಸು ಖರೀದಿಸಲು ಬ್ಯಾಂಕ್ ಆಧಿಕಾರಿಗಳು ಸಾಲ ನೀಡುತ್ತಿಲ್ಲ ಎಂದು ಗ್ರಾಮದ 19ರೈತರು ಗಮನ ಸೆಳೆದರು.

ಕೂಡಲೇ ಬಣವಿಕಲ್ಲು ಪ್ರಗತಿ ಕೃಷ್ಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ‘ರೈತರಿಗೆ3 ಹಸು ಖರೀದಿಸಲು ಸಾಲ ಸೌಲಭ್ಯ ನೀಡಬೇಕು’ ಎಂದು ಸೂಚಿಸಿದರು.

‘ಗ್ರಾಮದ ಬಳಿ ಶೀಘ್ರ ನಾಲ್ಕು ಎಕರೆ ಜಮೀನು ಖರೀದಿಸಿ ವಸತಿ ರಹಿತರಿಗೆ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದ ಶಾಸಕರು, ‘ಮನೆ ಕಟ್ಟುವ ಉದ್ದೇಶಕ್ಕೆ ಮರಳು ಸಾಗಣೆ ಮಾಡಲು ಅಡ್ಡಿಪಡಿಸಬಾರದು ಎಂದು ಆರಣ್ಯ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವೆ’ ಎಂದು ಭರವಸೆ ನೀಡಿದರು.

‘ಮನೆ ಕಟ್ಟುವ ನೆಪದಲ್ಲಿ ಮರಳು ಅಕ್ರಮ ಸಾಗಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆಯನ್ನೂ ನೀಡಿದರು.

ಚಿತ್ರನಟ ಬಂಗಾರು ಹನುಮಂತು, ತಹಶೀಲ್ದಾರ್‌ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ಸದಸ್ಯೆ ರತ್ಮಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ರೇವಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಭೋವಿ, ಉಪಾಧ್ಯಕ್ಷೆ ಡಿ.ಬಿ. ಕವಿತಾ, ಜಿ. ಉಮೇಶ್, ಎಚ್. ಶೇಖರಪ್ಪ, ರಾಜು, ಸೂರ್ಯಪಾಪಣ್ಣ ಉಪಸ್ಥಿತರಿದ್ದರು.

Post Comments (+)