ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನೋಟಿಸ್‌ ಖಂಡಿಸಿ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ
Last Updated 5 ಅಕ್ಟೋಬರ್ 2017, 6:16 IST
ಅಕ್ಷರ ಗಾತ್ರ

ಚಾಮರಾಜನಗರ: ಸಾಲ ಮರು ಪಾವತಿಸುವಂತೆ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ನ್ಯಾಯಾಲಯದ ಮೂಲಕ ನೋಟಿಸ್‌ ನೀಡಿರುವುದನ್ನು ಖಂಡಿಸಿ ಬುಧವಾರ ನಗರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಚಾಮರಾಜನಗರದ ವಿಜಯ ಬ್ಯಾಂಕ್‌ ನ್ಯಾಯಾಲಯದ ಮೂಲಕ ನೋಟಿಸ್ ನೀಡಿರುವುದು ಖಂಡನೀಯ. ಕೂಡಲೇ ನೋಟಿಸ್‌ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮೂರು ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರಿಗೆ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡುವಂತೆ ಪೀಡಿಸುತ್ತಿವೆ. ಇದಕ್ಕೆ ಹೆದರಿಕೊಂಡು ಅನೇಕ ರೈತರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಲು ಮೀನಾ–ಮೇಷ ಎಣಿಸುತ್ತಿದೆ ಎಂದು ದೂರಿದರು.

ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಕೆಸರೆರಚಾಟ ಮಾಡದೆ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸುವ ಎಲ್ಲ ಅನಾಹುತಗಳಿಗೆ ಸರ್ಕಾರಗಳು ನೇರ ಹೊಣೆಯಾಗುತ್ತವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮೂಡ್ಲಪುರ ಪಟೇಲ್‌ ಶಿವಮೂರ್ತಿ, ಹೊನ್ನೂರು ಬಸವಣ್ಣ, ಮೂಕಳ್ಳಿ ಮಹದೇವಸ್ವಾಮಿ, ಕುಂತೂರು ಪ್ರಭುಸ್ವಾಮಿ, ವಿಜಿ, ಸಿದ್ದರಾಜು, ಚಂಗಡಿ ಕರಿಯಪ್ಪ, ಹೆಗ್ಗೂಡಿಪುರ ಮಹದೇವಸ್ವಾಮಿ, ಬಡಗಲಪುರ ವೆಂಕಟಪ್ಪ, ವಡ್ಗಲ್‌ಪುರ ನಂಜುಂಡಸ್ವಾಮಿ, ಯಡಪುರ ಪರಶಿವಪ್ಪ, ಗೋವಿಂದಶೆಟ್ಟಿ, ಮಂಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT