ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೇ ಕುಸಿದ ಕಾಂಪೌಂಡ್

Last Updated 5 ಅಕ್ಟೋಬರ್ 2017, 7:21 IST
ಅಕ್ಷರ ಗಾತ್ರ

ಹರಿಹರ: ನಗರದ ಕೈಲಾಸ ನಗರದ ಹಿಂಭಾಗದಲ್ಲಿರುವ ಹಿಂದೂ ರುದ್ರಭೂಮಿಯ ಸುಮಾರು 100 ಅಡಿಯಷ್ಟು ಕಾಂಪೌಂಡ್ ಗೋಡೆ ಕಾಮಗಾರಿ ಮುಗಿದು ವರ್ಷ ಪೂರೈಸುವ ಮುನ್ನವೇ ಕುಸಿದು ಬಿದ್ದಿದೆ.

ನಗರಸಭೆಯಿಂದ 2015-16ನೇ ಸಾಲಿನ 14ನೇ ಹಣಕಾಸು ಯೋಜನೆಯ ₹ 5 ಲಕ್ಷ ಅನುದಾನದಲ್ಲಿ ರುದ್ರಭೂಮಿಯ ಹಿಂಭಾಗದ ಗೋಡೆ ಕಾಮಗಾರಿ 2016ರ ನವೆಂಬರ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ವರ್ಷ ಕಳೆಯುವ ಮುನ್ನವೇ ಈ ಗೋಡೆ ಕುಸಿದು ಬಿದ್ದಿರುವುದಕ್ಕೆ ಅವೈಜ್ಞಾನಿಕ ಮಾದರಿ ಹಾಗೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸಿಮೆಂಟ್ ಬಳಸಿರುವುದೇ ಕಾರಣ ಎಂಬುದು ಮೆಲ್ನೋಟಕ್ಕೆ ಸಾಬೀತಾಗಿದೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭಾನುಸಾಲಿ ಸೇಟ್ ದೂರಿದರು.

ಸಮಿತಿಯ ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ ಮಾತನಾಡಿ, ಕಾಂಪೌಂಡ್ ನಿರ್ಮಾಣದಲ್ಲಿರುವ ಪಿಲ್ಲರ್‌ಗಳನ್ನು ನೆಲದಲ್ಲಿ ಗುಂಡಿತೋಡಿ ನಿಲ್ಲಿಸದೇ ತಳಪಾಯದ ಮೇಲೆ ನಿಲ್ಲಿಸಲಾಗಿದೆ ಎಂದರು.

ರುದ್ರಭೂಮಿ ನಿರ್ವಹಣೆಗೆ ಗ್ರೂಪ್-ಡಿ ಸಿಬ್ಬಂದಿಯನ್ನು ಶಾಶ್ವತವಾಗಿ ನೇಮಕ ಮಾಡಬೇಕು. ರುದ್ರಭೂಮಿಯಲ್ಲಿ ಸುವ್ಯವಸ್ಥಿತ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತೆ ಎಸ್.ಲಕ್ಷ್ಮೀ ಸ್ಥಳ ಪರಿಶೀಲನೆ ನಡೆಸಿದರು. ಇದೇವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೌಂಪೌಂಡ್ ಗೋಡೆಯ ಅಂದಾಜು ಪಟ್ಟಿಯಲ್ಲಿ ಪಿಲ್ಲರ್ ನಿರ್ಮಾಣ ಹಾಗೂ ಅದಕ್ಕೆ ಬಳಸಬೇಕಾದ ಸ್ಟೀಲ್‌ನ ಅಳತೆಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತೇನೆ. ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯೂ ಗೋಡೆ ಕುಸಿಯಲು ಕಾರಣವಾಗಿರಬಹುದು. ಗುತ್ತಿಗೆದಾರರಿಂದ ತಪ್ಪು ನಡೆದಿದ್ದರೆ, ಕಾಂಪೌಂಡ್ ಗೋಡೆಯ ಪುನರ್ ನಿರ್ಮಾಣಕ್ಕೆ ಅವರಿಗೆ ಆದೇಶಿಸುತ್ತೇನೆ’ ಎಂದರು.

‘ಕಾಂಪೌಂಡ್ ಗೋಡೆಗಳ ಪಕ್ಕದ ನೀರು ಹರಿದು ಹೋಗಲು ಪ್ರತ್ಯೇಕ ಬಸಿನೀರು ಕಾಲುವೆ ನಿರ್ಮಿಸಬೇಕಾಗುತ್ತದೆ. ಪ್ರಸ್ತುತ ಕಾಮಗಾರಿಯಲ್ಲಿ ಬಸಿನೀರು ಕಾಲುವೆ ನಿರ್ಮಾಣ ಮಾಡದಿರುವುದು ಗೋಡೆ ಕುಸಿತಕ್ಕೆ ಕಾರಣವಾಗಿರಬಹುದು. ಈ ಗೋಡೆಯನ್ನು ದುರಸ್ತಿಪಡಿಸುವ ಜತೆಗೆ ಬಸಿನೀರು ಕಾಲುವೆ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಶೇಖರಗೌಡ, ವಿಜಯಕುಮಾರ, ರಾಕೇಶ್, ನಗರಸಭೆ ಎಇಇ ಬಿ.ಎಸ್. ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT