ಭಾನುವಾರ, ಸೆಪ್ಟೆಂಬರ್ 15, 2019
23 °C
ಕೋಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಸಿಗಲಿಲ್ಲ ಸ್ಪಂದನೆ: ರೈತರ ಅಸಮಾಧಾನ

ತುರ್ಚಘಟ್ಟ ಕೆರೆ ಒಡೆದು ಬರಿದಾಯಿತು ಒಡಲು

Published:
Updated:
ತುರ್ಚಘಟ್ಟ ಕೆರೆ ಒಡೆದು ಬರಿದಾಯಿತು ಒಡಲು

ದಾವಣಗೆರೆ: ವರುಣನ ಆರ್ಭಟಕ್ಕೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕೈಗೆ ಬಂದಿದ್ದ ಬೆಳೆ ನಾಶವಾಗಿದೆ. ಸತತ ಎರಡು ವರ್ಷಗಳ ಬರದಿಂದ ಕಂಗೆಟ್ಟಿದ್ದ ಇಲ್ಲಿನ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 40 ಎಕರೆ ವಿಸ್ತೀರ್ಣದಲ್ಲಿರುವ ಕೆರೆ ಈಚೆಗೆ ಸುರಿದ ಭಾರಿ ಮಳೆಗೆ ತುಂಬಿಕೊಂಡಿತ್ತು. ಅಪರೂಪಕ್ಕೆ ಕೆರೆ ತುಂಬಿದ್ದನ್ನು ಕಂಡು ರೈತರು ಸಂತಸಗೊಂಡಿದ್ದರು. ಈ ಮಧ್ಯೆಯೇ ಮಂಗಳವಾರ ರಾತ್ರಿ ಕೆರೆಯ ಏರಿ ಒಡೆದು ರೈತರ ಭವಿಷ್ಯಕ್ಕೆ ಕಾರ್ಮೋಡ ಕವಿದಂತಾಗಿದೆ.

ಕೋಡಿಯೇ ಇಲ್ಲ: ತುರ್ಚಘಟ್ಟ ಕೆರೆಗೆ ಕೋಡಿಯನ್ನೇ ನಿರ್ಮಾಣ ಮಾಡಿಲ್ಲ. ಪರಿಣಾಮ, ಕೆರೆ ತುಂಬಿದಾಗ ಹೆಚ್ಚುವರಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ಏರಿ ಒಡೆದಿದೆ. ಕೋಡಿ ಕಟ್ಟದಿರುವುದೇ ಈ ಅವಘಡಕ್ಕೆ ಕಾರಣ ಎನ್ನುತ್ತಾರೆ ಇಲ್ಲಿನ ರೈತರು.

‘3 ತಿಂಗಳ ಹಿಂದಷ್ಟೇ ಗ್ರಾಮಸ್ಥರೆಲ್ಲ ಸೇರಿ ಹೂಳು ತೆಗೆದಿದ್ದೆವು. ಈ ಸಂದರ್ಭ ಕೋಡಿ ನಿರ್ಮಾಣ ಮಾಡಿಕೊಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಮಳೆಗಾಲದಲ್ಲಿ ಕೆರೆ ತುಂಬಿ ಏರಿ ಒಡೆಯುವ ಸಾಧ್ಯತೆಯೂ ಇದೆ ಎಂದೂ ಎಚ್ಚರಿಸಿದ್ದೆವು. ಆದರೂ ಅಧಿಕಾರಿಗಳು ಅನುದಾನ ಇಲ್ಲ ಎಂಬ ನೆಪವೊಡ್ಡಿ ನಿರ್ಲಕ್ಷ್ಯ ಮಾಡಿದರು. ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಆರೋಪಿಸುತ್ತಾರೆ ಗ್ರಾಮದ ನರೇಂದ್ರ ಬಾಬು.

ಜನಪ್ರನಿಧಿಗಳಿಗೆ ಮನವಿ ಸಲ್ಲಿಸಿದರೆ ಕೆರೆಗೆ ಅನುದಾನ ನೀಡಲು ಬರುವುದಿಲ್ಲ ಎಂದು ನುಣುಚಿಕೊಂಡರು. ಕೆಲವರು ಭರವಸೆ ನೀಡಿದರೇ ಹೊರತು ಈಡೇರಿಸಲಿಲ್ಲ. ಈಗ ನಡೆಯಬಾರದ್ದು ನಡೆದುಹೋಗಿದೆ. ಈ ದುರಂತಕ್ಕೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ಇಲ್ಲಿನ ರೈತರು.

ತುರ್ಚಘಟ್ಟ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಹಲವು ವರ್ಷಗಳಿಂದ ಬತ್ತಿಹೋಗಿದ್ದ ಈ ಭಾಗದ ಸಾವಿರಾರು ಬೋರ್‌ವೆಲ್‌ಗಳನ್ನು ಮರುಪೂರಣಗೊಳಿಸಿದೆ. ಬೇಸಿಗೆ ಬೆಳೆಗೂ ಕೆರೆಯ ನೀರು ದೊರೆಯುವ ವಿಶ್ವಾಸವಿತ್ತು. ಈಗ ಕೆರೆಯೇ ಬರಿದಾಗಿದ್ದು, ಭವಿಷ್ಯದ ಚಿಂತೆ ಕಾಡುತ್ತದೆ ಎನ್ನುತ್ತಾರೆ ಗ್ರಾಮಸ್ಥ ರವಿಕುಮಾರ್.

ಈಚೆಗೆ ₹ 2 ಲಕ್ಷ ವೆಚ್ಚ ಮಾಡಿ 2 ಎಕರೆಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದೆ. ಉಪ ಬೆಳೆಯಾಗಿ ತೊಗರಿ ಹಾಕಿದ್ದೆ. ಜಮೀನಿಗೆ ನೀರು ನುಗ್ಗಿ, ಅಡಿಕೆ ಸಸಿಗಳು ಕೊಚ್ಚಿ ಹೋಗಿವೆ ಎಂದು ಅಳಲು ತೋಡಿಕೊಂಡರು ರೈತ ರುದ್ರಮುನಿ.

ಸತತ ಬರಗಾಲ ಹಾಗೂ ಭದ್ರಾ ಅಣೆಕಟ್ಟೆಯ ನೀರು ನಾಲೆಗೆ ಹರಿಸದ ಪರಿಣಾಮ ಬೋರ್‌ವೆಲ್‌ಗಳೆಲ್ಲ ವಿಫಲಗೊಂಡಿದ್ದವು. ಕೆರೆ ತುಂಬಿ ಕೊಳವೆಬಾವಿಗಳಲ್ಲಿ ಮತ್ತೆ ನೀರು ಬರಲು ಆರಂಭವಾಗಿತ್ತು. ಈಗ ಕೆರೆಯೇ ಬರಿದಾಗಿದ್ದು, ಮತ್ತೆ ಕೊಳವೆಬಾವಿಗಳು ವಿಫಲವಾಗುವ ಆಂತಕವಿದೆ ಎನ್ನುತ್ತಾರೆ ರೈತರಾದ ರವಿಕುಮಾರ್, ಕರಿಬಸಪ್ಪ ಹಾಗೂ ನರೇಂದ್ರಬಾಬು.

ಕೆರೆಯ ಏರಿಯಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಮತ್ತೊಂದು ಅವಘಡ ನಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಕೋಡಿ ನಿರ್ಮಾಣಕ್ಕೆ ಮುಂದಾಗಬೇಕು. ಏರಿ ಭದ್ರಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.

Post Comments (+)