ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿಗೆ ಆಗ್ರಹ: ಮಠಾಧೀಶರಿಂದ ಸತ್ಯಾಗ್ರಹ ಆರಂಭ

ತಾಲ್ಲೂಕು ಕಚೇರಿಗೆ ಬೀಗ ಹಾಕಿ, ಕಿಟಕಿ ಗಾಜು ಒಡೆದು ಆಕ್ರೋಶ
Last Updated 5 ಅಕ್ಟೋಬರ್ 2017, 8:24 IST
ಅಕ್ಷರ ಗಾತ್ರ

ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದ ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಷ್ಟ ಮಠಾಧೀಶರು ಬುಧವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೇದಿಗೆಮಠದ ಜಯಚಂದ್ರಶೇಖರ ಸ್ವಾಮೀಜಿ, ವಿರಕ್ತಮಠದ ಪ್ರಭು ಚನ್ನಬಸವಾನಂದ ಸ್ವಾಮೀಜಿ, ಉಂಡಿಗನಾಳು ಮಠದ ಮಹಾಲಿಂಗ ಸ್ವಾಮೀಜಿ, ಕುರುಬರಹಳ್ಳಿ ಮಠದ ಜಯಬಸವಾನಂದ ಸ್ವಾಮೀಜಿ, ಶಿವಪುರ ಮಠದ ಸಿದ್ಧರಾಮ ಸ್ವಾಮೀಜಿ, ನೀರುಗುಂದ ಮಠದ ಶಿವಲಿಂಗ ಸ್ವಾಮೀಜಿ ಮತ್ತು ಮಾಡಾಳು ಮಠದ ಶಿವಲಿಂಗ ಸ್ವಾಮೀಜಿ ಪಟ್ಟಣದ ನೆಹರೂನಗರ ವೃತ್ತದಲ್ಲಿ ಧರಣಿ ಆರಂಭಿಸಿದರು.

ಮೂರು ಹೋಬಳಿಗಳ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಲ್ಲದೆ, ತಹಶೀಲ್ದಾರ್‌ ಕಚೇರಿಗೆ ಬೀಗ ಹಾಕಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಯುವ ಸ್ಥಳಕ್ಕೆ ತೆರಳಿದ ನಂತರ ಬೀಗ ತೆರವುಗೊಳಿಸಿದ ಅಲ್ಲಿಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನು ಕೇಳಿ ವಾಪಸು ಬಂದ ಪ್ರತಿಭಟನಾಕಾರರು ಪುನಃ ಕಚೇರಿಗೆ ಬೀಗ ಹಾಕಿದರು. ಅಲ್ಲದೆ, ಕಿಟಿಕಿಯ ಗಾಜನ್ನು ಕಲ್ಲಿನಿಂದ ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ನೆಹರೂನಗರ ವೃತ್ತದಲ್ಲಿ ರಸ್ತೆ ತಡೆ ನಡೆದಿದ್ದರಿಂದ ಬೇಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್‌ ಆಗಿದ್ದವು. ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಯಿತು. ಚಿಕ್ಕಮಗಳೂರು, ಹಾಸನ, ಮೂಡಿಗೆರೆ, ಸಕಲೇಶಪುರಕ್ಕೆ ತೆರಳುವ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನೆ ಅಂಗವಾಗಿ ಕರೆ ನೀಡಲಾಗಿದ್ದ ಹಳೇಬೀಡು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳ ಬಾಗಿಲು ಹಾಕಿ ಹೋರಾಟಕ್ಕೆ ಕೈಜೋಡಿಸಿದರು. ಬುಧವಾರದ ವಾರದ ಸಂತೆಯನ್ನು ಸಹ ಸ್ಥಗಿತಗೊಳಿಸಲಾಯಿತು.

‘ಯಗಚಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ಕೆರೆಗಳಿಗೆ ನೀರು ತುಂಬಿಸಲಾಗಿದೆ’ ಎಂದು ದ್ವಾರಸಮುದ್ರ ಕೆರೆ ಕೋಡಿ ಬಳಿ ಸರ್ಕಾರದಿಂದ ಹಾಕಲಾಗಿದ್ದ ಫಲಕವನ್ನು ಪ್ರತಿಭಟನಾಕಾರರು ಕಿತ್ತೊಗೆದು ಬೆಂಕಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT