ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥೋದ್ಭವ; ತೀರ್ಥ ವಿತರಣೆಗೆ ಅವಕಾಶ ಬೇಡ: ಒತ್ತಾಯ

ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುವ ಕಾರಣ: ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಹೇಳಿಕೆ
Last Updated 5 ಅಕ್ಟೋಬರ್ 2017, 8:49 IST
ಅಕ್ಷರ ಗಾತ್ರ

ಮಡಿಕೇರಿ: ತಲಕಾವೇರಿಯ ತೀರ್ಥೋದ್ಭವದ ಸಂದರ್ಭದಲ್ಲಿ ವಿವಿಧ ಸಂಘ– ಸಂಸ್ಥೆಗಳು ವಾಹನಗಳಲ್ಲಿ ತೀರ್ಥ ವಿತರಣೆ ಮಾಡುವುದರಿಂದ ತೀರ್ಥದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದರಿಂದ ತೀರ್ಥಯಾತ್ರೆಗೆ ಅವಕಾಶ ನೀಡಬಾರದು ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆಯ ಸದಸ್ಯ ಉಳ್ಳಿಯಡ ಎಂ. ಪೂವಯ್ಯ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೀರ್ಥಯಾತ್ರೆ ಮಾಡುವ ನೆಪದಲ್ಲಿ ಕೆಲವು ಸಂಘ– ಸಂಸ್ಥೆಗಳು ದೊಡ್ಡ ಪ್ರಮಾಣದ ಡ್ರಮ್‌ ಹಾಗೂ ಬಿಂದಿಗೆಗಳಲ್ಲಿ ತಂದು ವಾಹನಗಳಿಗೆ ತುಂಬಿಸಿ ಸಾರ್ವಜನಿಕರಿಗೆ ಕೊಡುವ ಪದ್ಧತಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೊಳಕುಮಯವಾಗಿರುವ ಭಾಗಮಂಡಲ– ತಲಕಾವೇರಿ ಪವಿತ್ರ ಕ್ಷೇತ್ರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಪರಿಪೂರ್ಣ ಶುದ್ಧೀಕರಣಕ್ಕೆ ಒಳಪಡಿಸಿ, ಸಂಪೂರ್ಣ ಸ್ವಚ್ಛಗೊಳಿಸಬೇಕು. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪುಟ್ಟಮಕ್ಕಳಿಂದ ಹಿಡಿದು ಹಿರಿಯ ಭಕ್ತರು ಪವಿತ್ರ ಸ್ನಾನ ಮಾಡುವುದರಿಂದ ನದಿಯ ನೀರಿನ ಮಟ್ಟವನ್ನು 4 ಅಡಿಗೆ ಸೀಮಿತಗೊಳಿಸಬೇಕು. ತಲಕಾವೇರಿಯ ಸ್ನಾನ ಕೊಳದ ನೀರಿನಮಟ್ಟವನ್ನು ಮೂರೂವರೆ ಅಡಿಗಳಿಗೆ ಸೀಮಿತಗೊಳಿಸಿ ಹಳೆಯ ನೀರನ್ನು ಶುದ್ಧೀಕರಿಸಬೇಕು ಎಂದು ಕೋರಿದರು.

ವೇದಿಕೆಯ ಸಂಚಾಲಕ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ, ತ್ರಿವೇಣಿ ಸಂಗಮದ ಬಳಿಯಿರುವ ಸಾರ್ವಜನಿಕ ಶೌಚಾಲಯದಲ್ಲಿ ಸಮರ್ಪಕ ನೀರಿನ ಸೌಲಭ್ಯ ಇಲ್ಲದೇ ತೊಂದರೆ ಆಗುವುದನ್ನು ತಪ್ಪಿಸಬೇಕು. ಭಗಂಡೇಶ್ವರ ದೇವಸ್ಥಾನದ ಟಿಕೆಟ್‌ ವಿತರಿಸುವ ಕೇಂದ್ರದ ಸಮೀಪ ಸಾರ್ವಜನಿಕರಿಗೆ ಅನುಕೂಲವಾಗುವಂತೆ ದೂರು ಪೆಟ್ಟಿಗೆ ವ್ಯವಸ್ಥೆ ಮಾಡಬೇಕು ಎಂದು
ತಿಳಿಸಿದರು.

ತಲಕಾವೇರಿ ತೀರ್ಥೋದ್ಭವದ ಪುಣ್ಯ ಸನ್ನಿವೇಶದಲ್ಲಿ ತೀರ್ಥಕೊಳಕ್ಕೆ ಮಿಂದೇಳಲು ಬರುವ ಭಕ್ತರ ಮೇಲೆ ಪೊಲೀಸರು ದರ್ಪನೀತಿ ಅನುಸರಿಸದೆ, ಎಲ್ಲಾ ರಕ್ಷಣಾ ಸಿಬ್ಬಂದಿ ಭಕ್ತರ ಜತೆಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆಯ ಪ್ರಮುಖರಾದ ಕಿರಿಯಮಾಡ ರತನ್ ತಮ್ಮಯ್ಯ, ಪುಡಿಯಂಡ ಕೆ.
ಮುತ್ತಣ್ಣ, ಕೊಡವ ಮಕ್ಕಡಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಉಳ್ಳಿಯಡ ಡಾಟಿ ಪೂವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT