ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ ಅನುಷ್ಠಾನದಲ್ಲಿ ವಿಫಲ: ಆರೋಪ

Last Updated 5 ಅಕ್ಟೋಬರ್ 2017, 8:57 IST
ಅಕ್ಷರ ಗಾತ್ರ

ನಂಗಲಿ: ಕಾಲಮಿತಿಯೊಳಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗ್ರಾಮದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

‘ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಎರಡು ದಶಕದಿಂದ ಹೋರಾಟ ನಡೆಯುತ್ತಿದೆ. ಆದರೆ, ಇಂದಿಗೂ ಸಮಸ್ಯೆ ಜೀವಂತವಾಗಿದೆ. ಜನರಿಗೆ ಕುಡಿಯುವ ನೀರು ಕೊಡಬೇಕೆಂಬ ಕಾಳಜಿ ರಾಜಕಾರಣಿಗಳಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಬಯಲುಸೀಮೆ ಜಿಲ್ಲೆಗಳ ನೀರಿನ ಬೇಡಿಕೆಗೆ ಸ್ಪಂದಿಸಿಲ್ಲ. ಪಕ್ಷಗಳಿಗೆ ನೀರಿನ ಸಮಸ್ಯೆಯು ರಾಜಕೀಯದ ವಸ್ತುವಾಗಿದೆ. ರಾಜಕೀಯ ಮುಖಂಡರಿಗೆ ಚುನಾವಣೆ ಬಂದಾಗ ಮಾತ್ರ ನೀರಾವರಿ ಯೋಜನೆಗಳು ನೆನಪಾಗುತ್ತವೆ. ಅವರ ಭರವಸೆಗಳೆಲ್ಲಾ ವೇದಿಕೆಯ ಭಾಷಣಕ್ಕಷ್ಟೇ ಸೀಮಿತವಾಗಿವೆ’ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಸರ್ಕಾರ ರೂಪಿಸಿರುವ ನೀರಾವರಿ ಯೋಜನೆಗಳಿಂದ ಜಿಲ್ಲೆಗೆ ನೀರು ಬರುವುದೇ ಅನುಮಾನ. ಯರಗೋಳ್ ಯೋಜನೆಗೆ ₹ 240 ಕೋಟಿ, ಕೆ.ಸಿ ವ್ಯಾಲಿ ಯೋಜನೆಗೆ ₹ 1,350 ಕೋಟಿ ಹಾಗೂ ಎತ್ತಿನಹೊಳೆ ಯೋಜನೆಗೆ ₹ 13,500 ಕೋಟಿ ಮೀಸಲಿಟ್ಟಿರುವುದು ನಿಷ್ಪ್ರಯೋಜಕ. ಈ ಹಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲೆಗೆ ಹರಿಸಬೇಕು: ‘ಆಂಧ್ರಪ್ರದೇಶದ ಕುಪ್ಪಂ ಕೃಷ್ಣಾ ನದಿಯಿಂದ 550 ಕಿ.ಮೀ ದೂರವಿದ್ದರೂ ನದಿಯ ನೀರು ಅಲ್ಲಿಗೆ ಸರಾಗವಾಗಿ ಹರಿದು ಹೋಗುತ್ತಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿ ಕುಪ್ಪಂಗೆ ಹರಿಯುತ್ತಿರುವ ನೀರನ್ನು ಜಿಲ್ಲೆಗೆ ಹರಿಸಬೇಕು. ನೀರಾವರಿ ಯೋಜನೆಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ನಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯ ನಾಗೇಶ್, ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ್‌ಸಾಗರ್, ಸದಸ್ಯರಾದ ದೇವರಾಜು, ಭರತ್, ಸುರೇಶ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT