ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಮುಕ್ತ ಜಿಲ್ಲೆ ಘೋಷಣೆ ಬರೀ ಸುಳ್ಳು!

ಗೌರಿಪುರ, ಗರುಡನಉಕ್ಕಡ ಹಾಗೂ ಚಿಕ್ಕಪಾಳ್ಯ ಜನರ ಹೇಳಿಕೆಯೇ ಸಾಕ್ಷಿ
Last Updated 5 ಅಕ್ಟೋಬರ್ 2017, 9:38 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಿರುವುದು ಹಾಸ್ಯಾಸ್ಪದವಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ಸಾಕಷ್ಟು ಮನೆಗಳಲ್ಲಿ ಶೌಚಾಲಯಗಳೇ ಎಂಬುದು ಅಂಗೈನ ಗೆರೆಗಳಷ್ಟೇ ಸತ್ಯ. ನಿರ್ಮಲ ಭಾರತ್‌ ಅಭಿಯಾನ ಯೋಜನೆಯಡಿ ನಿರ್ಮಿಸಲು ಆರಂಭಿಸಿದ ಕೆಲವು ಶೌಚಾಲಯಗಳು ಅರ್ಧಕ್ಕೆ ನಿಂತಿದ್ದರೆ ಮತ್ತೆ ಕೆಲವೆಡೆ ಹಣ ಬಿಡುಗಡೆಯಾಗಿಲ್ಲ. ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡನ ಉಕ್ಕಡ ಗ್ರಾಮದ ಚಿಕ್ಕತಾಯಮ್ಮ ರಂಗಸ್ವಾಮಿ ಅವರ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ 4 ಮಂದಿ ವಾಸವಾಗಿದ್ದಾರೆ.

ಚಿಕ್ಕತಾಯಮ್ಮ ಅವರ ಮಗಳು ಪಿಯುಸಿ ವಿದ್ಯಾರ್ಥಿನಿ. ಆದರೂ ಈ ಮನೆಯಲ್ಲಿ ಶೌಚಾಲಯವಿಲ್ಲ. ದೇಹಬಾಧೆ ತೀರಿಸಿಕೊಳ್ಳಲು ಕಳೆದ 15 ವರ್ಷಗಳಿಂದ ಈ ಕುಟುಂಬ ಬಯಲನ್ನೇ ಆಶ್ರಯಿಸಿದೆ.

ಇದೇ ಗ್ರಾಮದ ನಿಂಗಮ್ಮ ಭಂಗಿ ಸಿದ್ದಯ್ಯ ಕುಟುಂಬದಲ್ಲಿ ಕೂಡ ನಾಲ್ವರು ನೆಲೆಸಿದ್ದು, ಈ ಮನೆಯಲ್ಲೂ ಶೌಚಾಲಯವಿಲ್ಲ. ಭಂಗಿ ಸಿದ್ದಯ್ಯ ಅವರ ಮಗಳು ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆ ಸೇರಿದಂತೆ ಮನೆ ಮಂದಿಯೆಲ್ಲ ಬೆಳಗಾಯಿತೆಂದರೆ ಬಯಲಿಗೇ ಹೋಗಬೇಕು. ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯಾಸ್ತದ ನಂತರ ಮನೆ ಪಕ್ಕದ ಬಯಲಿನಲ್ಲಿ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಈ ಕುಟುಂಬದ್ದು.

ಇದೇ ಊರಿನ ಬಿಳಿಗಿರಿ ಅವರ ಮಗ ರಂಗಸ್ವಾಮಿ ಎಂಬವರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ. ‘ನಮ್ಮ ಮನೇಲಿ 5 ಜನ ವಾಸ ಮಾಡ್ತಾ ಇದ್ದೀವಿ. ನಮಗೆ ಶೌಚಾಲಯ ಬೇಕು ಎಂದು ಹಲವು ಬಾರಿ ಗ್ರಾಮ ಪಂಚಾಯ್ತಿಗೆ ಅರ್ಜಿ ಕೊಟ್ಟಿದ್ದೇನೆ. ಅನುದಾನ ಕೊಡ್ತಾ ಇಲ್ಲ. ನನ್ನ ಹೆಂಡ್ತಿ ಮಕ್ಕಳೆಲ್ಲಾ ಹೊಲದ ಬಯಲು, ಹಳ್ಳ–ಕೊಳ್ಳದ ಕಡೆ ಹೋಗ್ಬೇಕು’ ಎಂದು ಸಮಸ್ಯೆ ಬಿಚ್ಚಿಡುತ್ತಾರೆ.

ತಾಲ್ಲೂಕಿನ ಗೌರಿಪುರ ದ ಲೇಟ್‌ ಸುಬ್ಬೇಗೌಡರ ಪತ್ನಿ ಸುಧಾಮಣಿ ಅವರ ಮನೆಯಲ್ಲಿ ಕೂಡ ಶೌಚಾಲಯವಿಲ್ಲ. ‘15 ವರ್ಷಗಳ ಹಿಂದೆ ಮನೆ ಖರೀದಿ ಮಾಡಿದ್ದೀನಿ. ಈ ಮನೆ ಕೊಂಡಾಗ ಶೌಚಾಲಯ ಇರಲಿಲ್ಲ. ಈಗಲೂ ಇಲ್ಲ. ಶೌಚಾಲಯ ಇದೆಯಾ ಎಂದ ಯಾರೂ ಕೇಳಿಲ್ಲ. ನಮ್ಮತ್ರ ಹಣವೂ ಇಲ್ಲ’ ಹೆಂಗ್‌ ಕಟ್ಟಿಕೊಳ್ಳಾದು’ ಎನ್ನುವುದು ಸುಧಾಮಣಿ ಅವರ ಮಾತು.

ಮುಂಡುಗದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಳ್ಯ ಗ್ರಾಮದ ಏಳೆಂಟು ಮನೆಗಳಲ್ಲಿ ಶೌಚಾಲಯವಿಲ್ಲ. ‘ಗ್ರಾಮದ ಸಿ.ಡಿ. ಶಿವಲಿಂಗಯ್ಯ, ತಿಮ್ಮಯ್ಯ, ನಾರಾಯಣ, ನಟೇಶ, ಕುಮಾರ, ಬಾಲಕೃಷ್ಣ ಇತರರ ಮನೆಗಳಲ್ಲಿ ಶೌಚಾಲಯಗಳಿಲ್ಲ. ಸಿ.ಡಿ. ಶಿವಲಿಂಗಯ್ಯ ಅವರು ಶೌಚಾಲಯ ನಿರ್ಮಿಸಲು ಆರಂಭಿಸಿ ಹಣ ಕೊಡದ ಕಾರಣ ಅರ್ಧಕ್ಕೆ ನಿಲ್ಲಿಸಿದ್ದಾರೆ’ ಎಂಬುದು ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ ಅವರ ದೂರು. ‘ಕುಮಾರ್‌ ಅವರಿಗೆ ಶೌಚಾಲಯ ಕಟ್ಟಿಕೊಳ್ಳುವಂತೆ ಹೇಳಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಯಾಪೈಸೆಯನ್ನೂ ಕೊಟ್ಟಿಲ್ಲ. ಮರಳು, ಇಟ್ಟಿಗೆ, ರಿಂಗ್‌, ಸೀಟುಗಳನ್ನು ಮನೆ ಮುಂದೆ ಗುಡ್ಡೆ ಹಾಕಿಕೊಂಡು ಕಾಯುತ್ತಿದ್ದಾರೆ’ ಎಂದು ಊರಿನ ಮುಖಂಡ ಡಿ.ಎಂ. ರವಿ ಹೇಳುತ್ತಾರೆ.

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀಡುವ ಅಂಕಿ– ಅಂಶಗಳ ಪ್ರಕಾರ 2017ರ ಸಾಲಿನಲ್ಲಿ 47 ಶೌಚಾಲಯಗಳು ಬಾಕಿ ಉಳಿದಿವೆ. ಅರಕೆರೆ ಗ್ರಾಮದಲ್ಲಿ 15, ತಡಗವಾಡಿಯಲ್ಲಿ 32 ಮನೆಗಳಲ್ಲಿ ಈಗಲೂ ಶೌಚಾಲಯಗಳಿಲ್ಲ. ‘2012ರ ಬೇಸ್‌ಲೈನ್‌ ಸರ್ವೆ ಪ್ರಕಾರ ತಾಲ್ಲೂಕಿನ ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆ. ಸರ್ವ ಕುಟುಂಬ ಸಮೀಕ್ಷೆಗೆೆ ಸೇರದ ಮನೆಗಳಲ್ಲಿ ನವೆಂಬರ್‌ ಒಳಗೆ ಶೌಚಾಲಯ ನಿರ್ಮಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT