ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಜ್ಞಾನದ ಮರೆವಿನಿಂದ ಕೃಷಿಯ ಸೋಲು

ಹೆಗ್ಗೋಡು: ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ ಅಭಿಮತ
Last Updated 5 ಅಕ್ಟೋಬರ್ 2017, 9:58 IST
ಅಕ್ಷರ ಗಾತ್ರ

ಸಾಗರ: ‘ಕೃಷಿಯು ಹತ್ತು ತಲೆಮಾರಿನ ಜ್ಞಾನವನ್ನು ಒಳಗೊಂಡಿದೆ. ಆದರೆ ಇಂದಿನ ತಲೆಮಾರಿಗೆ ಹಿಂದಿನ ಒಂಬತ್ತು ತಲೆಮಾರುಗಳ ಜ್ಞಾನದ ಪರಿಚಯ ಇಲ್ಲವಾಗಿದೆ. ನಮ್ಮ ನೆಲದ, ಮಣ್ಣಿನ ಜ್ಞಾನ ಮರೆತಿರುವುದು ಕೃಷಿಯ ಸೋಲಿಗೆ ಕಾರಣವಾಗುತ್ತಿದೆ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ನಡೆದ ‘ತಲೆಮಾರುಗಳ ನಡುವೆ ರೈತಾಪಿ ಅನುಭವ’ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೃಷಿಯಲ್ಲಿ ಗೆಲ್ಲುವ, ಸೋಲುವ ಆಟಗಳು ನಡೆಯುತ್ತಲೇ ಇರುತ್ತವೆ. ಕೃಷಿ ಗೆಲ್ಲುವುದು ಕೇವಲ ತಾಂತ್ರಿಕತೆಯಿಂದಲ್ಲ; ಕೃಷಿಯಲ್ಲಿರುವ ಕೌಶಲಗಳಿಂದ. ಕೃಷಿಯ ಯಶಸ್ಸಿನ ಮಾದರಿಗಳಿಗಾಗಿ ದೂರದ ಪ್ರದೇಶಕ್ಕೆ ಹುಡುಕಿಕೊಂಡು ಹೋಗುವ ಬದಲು ಹತ್ತಿರದ ಮಾದರಿಗಳನ್ನೇ ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ನೇತ್ಯಾತ್ಮಕ ಅಂಶಗಳು ಕಾಣುತ್ತಿದ್ದರೂ ಕರ್ನಾಟಕದ ಉದ್ದಗಲದಲ್ಲಿ ಯಶಸ್ವಿ ಪ್ರಯೋಗಗಳಲ್ಲಿ ತೊಡಗಿರುವವರ ದೊಡ್ಡ ಗುಂಪು ಇದೆ. ಆದಾಗ್ಯೂ ಹಳ್ಳಿಗಳು ಖಾಲಿಯಾಗುತ್ತಿರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ತುಮಕೂರಿನ ರೈತ ಮಹಿಳೆ ನಯನ ಮಾತನಾಡಿ, ‘ಇಡೀ ಕುಟುಂಬ ಕೃಷಿಯಲ್ಲಿ ಭಾಗಿಯಾದರೆ ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶ್ರಮ, ಬಂಡವಾಳ, ನೀರು ಇವುಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವತ್ತ ಗಮನಹರಿಸಬೇಕು’ ಎಂದು ಹೇಳಿದರು.

ಕೃಷಿಯಲ್ಲಿ ಆರಂಭಿಕ ಸೋಲುಗಳಿಂದ ಧೃತಿಗೆಡಬಾರದು. ಪ್ರಯೋಗಶೀಲ ಗುಣ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಮಾರ್ಪಾಡು ಹೊಂದುವುದು ಕಷ್ಟ ಎನ್ನುವ ಭಾವನೆ ವ್ಯಾಪಕವಾಗಿದೆ. ಹೀಗೆ ಮಾರ್ಪಾಡು ಮಾಡುವ ಹೊತ್ತಿಗೆ ಒಮ್ಮೆಲೆ ಪರಿವರ್ತನೆಗೆ ಮುಂದಾಗುವ ಬದಲು ಹಂತ ಹಂತವಾಗಿ ಬದಲಾವಣಿಗೆ ತೆರಳುವುದು ಸೂಕ್ತ. ಹೀಗೆ ಬದಲಾವಣೆ ಮಾಡಿರುವ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಅನುಭವಗಳನ್ನು ಪಡೆದು ಮುಂದಾಗುವುದು ಉತ್ತಮ ಎಂದು ಸಲಹೆ ನೀಡಿದರು.

ಕೃಷಿಕ ಅಜ್ಜಪ್ಪ ಕುರಗೋಡು ಮಾತನಾಡಿ, ‘ಕೃಷಿಯಲ್ಲಿ ತೊಡಗಿರುವವರು ಮೊದಲು ತಮ್ಮ ಅಗತ್ಯಕ್ಕೆ ಬೇಕಾದ ಬೆಳೆಗಳನ್ನು ಬೆಳೆಯುವತ್ತ ಆದ್ಯತೆ ನೀಡಬೇಕು. ನಾವು ಬೆಳೆದಿದ್ದನ್ನು ನಾವು ಬಳಸಿ ನಂತರ ಮಾರಾಟಕ್ಕೆ ಮುಂದಾಗುವ ಪ್ರವೃತ್ತಿ ಸೂಕ್ತ’ ಎಂದರು.

ಯಾವ ಪ್ರದೇಶದಲ್ಲಿ ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವ ಅರಿವು ಕೃಷಿಕರಿಗೆ ಅಗತ್ಯ. ಉತ್ತಮ ಬೆಲೆ ಸಿಗುತ್ತದೆ ಎಂದು ಹೊಸ ಬೆಳೆಗಳನ್ನು ಬೆಳೆದು ನಂತರ ಬೆಲೆ ಕುಸಿದು ತೊಂದರೆಗೆ ಸಿಲುಕುವ ಅಪಾಯದ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದರು.

ಕೃಷಿಕ ಅನಿಲ್ ಬಳಂಜ ಮಾತನಾಡಿ, ‘ಕೃಷಿಕರ ಜಮೀನಿನಿಂದ ಕೊಂಡೊಯ್ದ ಬೀಜಗಳನ್ನು ವಿಜ್ಞಾನಿಗಳು ತಾವೇ ಶೋಧಿಸಿದ ತಳಿ ಎಂದು ಘೋಷಿಸಿ ಲಾಭ ಪಡೆದುಕೊಳ್ಳುವ ಪ್ರವೃತ್ತಿಗೆ ಅವಕಾಶ ಮಾಡಿಕೊಡಬಾರದು. ತಮ್ಮಲ್ಲಿರುವ ಬೀಜಗಳ ದಾಖಲೀಕರಣಕ್ಕೆ ಕೃಷಿಕರು ಮುಂದಾಗಬೇಕು’ ಎಂದರು.

ಫೇಸ್‌ಬುಕ್, ವ್ಯಾಟ್ಸ್ ಆ್ಯಪ್, ಅಂತರ್ಜಾಲ ಇವುಗಳನ್ನು ಕೃಷಿ ಸಂಬಂಧಿತ ಮಾಹಿತಿ ಪಡೆಯಲು, ವಿಚಾರ ವಿನಿಮಯ ನಡೆಸಲು ಬಳಸಿಕೊಳ್ಳಬಹುದು ಎಂದರು. ನಂತರ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT