ಹೊಸರೂಪ ಪಡೆದ ಕುವೆಂಪು ವಿವಿ ಕ್ಯಾಂಪಸ್

ಗುರುವಾರ , ಜೂನ್ 20, 2019
26 °C
ಸೌಂದರ್ಯ ಹೆಚ್ಚಿಸಿದ ಬಗೆಬಗೆಯ ಕಲಾಕೃತಿಗಳು, ವಿದ್ಯಾರ್ಥಿಗಳ ನೆಚ್ಚಿನ ತಾಣ ಕೋಣನಕುಂಟೆ ಕೆರೆ

ಹೊಸರೂಪ ಪಡೆದ ಕುವೆಂಪು ವಿವಿ ಕ್ಯಾಂಪಸ್

Published:
Updated:
ಹೊಸರೂಪ ಪಡೆದ ಕುವೆಂಪು ವಿವಿ ಕ್ಯಾಂಪಸ್

ಶಿವಮೊಗ್ಗ: ಹಸಿರು ಕಾನನದ ನಡುವೆ ಎರಡೂವರೆ ದಶಕಗಳ ಹಿಂದೆ ತಲೆ ಎತ್ತಿದ್ದ ಕುವೆಂಪು ವಿಶ್ವ ವಿದ್ಯಾಲಯ ಈಗ ಹೊಸ ರೂಪ ಪಡೆದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣವಾಗುತ್ತಿದೆ.

ಒಂದೆಡೆ ಭದ್ರಾ ನದಿಯ ತೀರ, ಮತ್ತೊಂದೆಡೆ ಬಾನೆತ್ತರಕ್ಕೆ ಬೆಳೆದು ನಿಂತ ಮರಗಳು, ಹಕ್ಕಿಗಳ ಕಲರವ, ಪ್ರಾಣಿಗಳ ಚೀತ್ಕಾರ, ಜುಳುಜುಳು ಸದ್ದು ಮಾಡುತ್ತಾ ಹರಿಯುವ ಝರಿಗಳು. ಅಲ್ಲಲ್ಲಿ ಕಾಣುವ ತೊರೆಯ ಜಾಡು ಇಂತಹ ನಯನ ಮನೋಹರ ಪ್ರದೇಶದ ನಡುವೆ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸುತ್ತಿರುವ ಕುವೆಂಪು ವಿಶ್ವವಿದ್ಯಾನಿಲಯ ಜ್ಞಾನ ಸಹ್ಯಾದ್ರಿ ಆವರಣ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಈ ಮೊದಲು ಇಲ್ಲಿನ ಪರಿಸರಕ್ಕೆ ಮಾರುಹೋದ ವಿದ್ಯಾರ್ಥಿಗಳು ಕೇವಲ ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯ, ದೇಶಗಳಿಂದಲೂ ಬಂದು ವಿದ್ಯಾಭ್ಯಾಸ ಪಡೆಯುತ್ತಿದ್ದರು.

ಕಾಲಕ್ರಮೇಣ ಇಳಿಕೆಯಾದ ಮಳೆಯ ಪ್ರಮಾಣ, ಮರಗಳಿಗೆ ಕೊಡಲಿ ಏಟು ಕಾರಣಕ್ಕೆ ವಿಶ್ವವಿದ್ಯಾನಿಲಯ ತನ್ನ ಮೊದಲಿನ ಸೌಂದರ್ಯ ಕಳೆದುಕೊಂಡಿತ್ತು. ಇದೀಗ ಸೌಂದರ್ಯ ಮರುಕಳಿಸುವಂತೆ ಮಾಡಲು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು, ಪೋಷಕರು, ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ.

ಸೌಂದರ್ಯ ಹೆಚ್ಚಿಸಿದ ಕಲಾಕೃತಿಗಳು:

ಕ್ಯಾಂಪಸ್‌ನ ಅಂದ ಹೆಚ್ಚಿಸಲು ಅಲ್ಲಲ್ಲಿ ಆಭರಣ ಧರಿಸಿಕೊಂಡಿರುವ ಮಹಿಳೆ. ನವಿಲಿನ ಚಿತ್ರಗಳು, ಕಲ್ಲಿನ ರಥ, ಕಲ್ಲಿನಲ್ಲಿ ತನ್ನನ್ನು ತಾನೇ ಕೆತ್ತಿಕೊಳ್ಳುತ್ತಿರುವ ಶಿಲ್ಪಿ, ಆ ಕಾಲದಲ್ಲಿ ಬಳಸುತ್ತಿದ್ದ ಮಡಕೆಗಳ ಚಿತ್ರ, ಶಿಲಾ ತಪಸ್ವಿ, ಡೈನೋಸರ್‌ಗಳು, ನಾಣ್ಯದ ಚಿತ್ರಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಈ ಮೊದಲು ಕುವೆಂಪು ಪ್ರತಿಮೆ ಬಳಿ ಮಾತ್ರ ಕೇಳಿ ಬರುತ್ತಿದ್ದ ಮಧುರ ಗೀತೆಗಳು ಇದೀಗ ಜೆಎಂಸಿ ವಿಭಾಗದ ಬಳಿಯಿರುವ ದೊಡ್ಡ ಆಲದ ಮರ ಬಳಿ ನಿರ್ಮಿಸಿರುವ ಎಲ್ಇಡಿ ಪರದೆಯಲ್ಲೂ ಮೂಡುತ್ತಿವೆ. ಸಸ್ಯಶಾಸ್ತ್ರ ವಿಭಾಗದ ಪಕ್ಕದಲ್ಲಿ ನಿರ್ಮಿಸಿರುವ ಸಸ್ಯೋದ್ಯಾನ (ಬಟಾನಿಕಲ್ ಗಾರ್ಡನ್) ಕ್ಯಾಂಪಸ್‌ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆರೆ ಅಭಿವೃದ್ಧಿ: ಕ್ಯಾಂಪಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಗ್ರಂಥಾಲದ ಮುಂಭಾಗದಲ್ಲಿ ನಿರ್ಮಿಸಿರುವ ಕೋಣನಕುಂಟೆ ಕೆರೆಯೂ ಒಂದು. ಕೆರೆಯ ಮಧ್ಯಭಾಗದಲ್ಲಿ ನಿರ್ಮಿಸಿರುವ ವಿಶ್ರಾಂತಿ ಸ್ಥಳಕ್ಕೆ ಮಾರುಹೋಗದ ವಿದ್ಯಾರ್ಥಿಗಳೇ ಇಲ್ಲ. ಇದೀಗ ಈ ಕೆರೆಗೆ ಮತ್ತಷ್ಟು ರೂಪ ನೀಡಲಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೊಳಚೆ ನೀರು ಬಾರದಂತೆ ತಡೆಯಲಾಗಿದೆ. ಅಲ್ಲದೇ ಕೋಣನಕುಂಟೆ ಮಧ್ಯಭಾಗದಲ್ಲಿ ನಿರ್ಮಿಸಿರುವ ನವಿಲು ಆಕರ್ಷಣೀಯವಾಗಿದೆ.

ಮ್ಯೂಸಿಯಂ: ಇತಿಹಾಸ ವಿಭಾಗದಲ್ಲಿ ಜಾನಪದ ಹಾಗೂ ಇತಿಹಾಸ ಮ್ಯೂಸಿಯಂ ನಿರ್ಮಿಸಲಾಗಿದೆ. ಜಾನಪದ ಮ್ಯೂಸಿಯಂನಲ್ಲಿ ದಿನಬಳಕೆಯ ವಸ್ತಗಳು, ಅಲಂಕಾರಿಕ ವಸ್ತುಗಳು, ಕೃಷಿ ಸಾಧನಗಳು, ಧಾರ್ಮಿಕ ಸಂಬಂಧಿ ವಸ್ತುಗಳು, ಕಲಾವಿದರ ಉಡುಪುಗಳು, ಲಂಬಾಣಿ ಜನಾಂಗದ ಆಭರಣ, ಹಳೆಯ ಕಾಲದ ನಾಟ್ಯಶೈಲಿ ಆಕರ್ಷಿಸುತ್ತಿವೆ.

ಇತಿಹಾಸ ಮ್ಯೂಸಿಯಂ ಹೊರ ಆವರಣದಲ್ಲಿ 9ನೇ ಶತಮಾನದಿಂದ ಆರಂಭವಾಗಿ 16ನೇ ಶತಮಾನದವರೆಗೆ ಶಾಸನಗಳು, ನಿಶದಿ ಕಲ್ಲುಗಳು, ಮಾಸ್ತಿ ಕಲ್ಲುಗಳು, ವೀರಗಲ್ಲು, ದಾನಶಾಸನ, ಒಳಭಾಗದಲ್ಲಿರುವ ಇತಿಹಾಸಪೂರ್ವ ಕಾಲದ ಕಲ್ಲುಗಳು, ಕಲ್ಲಿನ ಆಯುಧಗಳು, ದೇವಸ್ಥಾನದ ಚಿತ್ರಗಳು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಪ್ರಾಣಿಯ ಚಿತ್ರಗಳು, ಮಲೆನಾಡಿನ ಅಡುಗೆಗಳು ಮಲೆನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.

ನೂತನ ಘಟಕಗಳು: ಇದಿಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಘಟಕ, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಘಟಕ, ಪುಸ್ತಕ ಮಳಿಗೆ, ಸಭಾಂಗಣ, ಅಲ್ಲಲ್ಲಿ ಸೂಚನಾ ಫಲಕಗಳನ್ನು ನಿರ್ಮಿಸಲಾಗಿದೆ.

***

ಕೊನೆಗೂ ಬಂತು ಆಂಬುಲೆನ್ಸ್

ಕ್ಯಾಂಪಸ್‌ನಲ್ಲಿ ಆಂಬುಲೆನ್ಸ್‌ ಇಲ್ಲದ ಕಾರಣ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈಗ ಆಂಬುಲೆನ್ಸ್‌ನ ಸೇವೆ ದೊರೆತಿರುವ ಕಾರಣ ಆರೋಗ್ಯ ಸಮಸ್ಯೆ ಎದುರಾದರೆ ಶಿವಮೊಗ್ಗ ಭಾಗಗಳ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಅನುಕೂಲವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry