ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಅಧಿಕಾರ ಕೊಟ್ಟಿದ್ದು ನಾವು

‘ಮನೆ ಮನೆಗೆ ಕುಮಾರಣ್ಣ, ಈ ಬಾರಿ ಜೆಡಿಎಸ್‌ ಸರ್ಕಾರ’ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ದೇವೇಗೌಡ ಹೇಳಿಕೆ
Last Updated 5 ಅಕ್ಟೋಬರ್ 2017, 10:26 IST
ಅಕ್ಷರ ಗಾತ್ರ

ತುಮಕೂರು: ‘ಸಿದ್ಧಗಂಗಾ ಕ್ಷೇತ್ರದಲ್ಲಿ ನಿಂತು ಗಟ್ಟಿಯಾಗಿ ಹೇಳುತ್ತಿದ್ದೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದು ಎಲ್ಲ ವರ್ಗದ, ಜಾತಿಯ ಮಹಿಳೆಯರಿಗೆ ಅಧಿಕಾರ ಸಿಗುವಂತೆ ಮಾಡಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.

ಸಿದ್ಧಗಂಗಾ ಮಠದ ಆವರಣದಲ್ಲಿ ಬುಧವಾರ ’ಮನೆ ಮನೆಗೆ ಕುಮಾರಣ್ಣ, ಈ ಬಾರಿ ಜೆಡಿಎಸ್‌ ಸರ್ಕಾರ’ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

‘ನನ್ನ ಹೆಸರಿನಲ್ಲಿ ಗೌಡ ಇರಬಹುದು. ಆದರೆ ನಾನು ಜಾತಿಯನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಗೌಡನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಆದರೆ ಈ ರಾಜ್ಯದ ಅಧಿಕಾರವನ್ನು ಕೇವಲ ಒಕ್ಕಲಿಗರು, ಲಿಂಗಾಯತರು ಮಾತ್ರವೇ ಅನುಭವಿಸಲು ಬಿಡಲಿಲ್ಲ’ ಎಂದರು.

‘ಮನೆ ಮನೆಗೆ ಕುಮಾರಣ್ಣ, ಗೌರಿಶಂಕರ್‌ ನಡಿಗೆ ಹಳ್ಳಿಯ ಕಡೆಗೆ’ ಎನ್ನುವ ಮೂಲಕ ಗೌರಿಶಂಕರ್‌ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಪಕ್ಷದ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

‘ನನಗೆ ಪಿತೃಗಳ ಆಶೀರ್ವಾದವಿದೆ. ಈಗ ಗುರುಗಳ ಆಶೀರ್ವಾದ ಸಿಕ್ಕಿದೆ. ಜನರ ಆಶೀರ್ವಾದ ಸಿಗಲಿದೆ ಎಂಬ ನಂಬಿಕೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಈಗ ಮಾತನಾಡುವುದಿಲ್ಲ. ಕಾಲ ಬಂದಾಗ ಮಾತನಾಡುತ್ತೇನೆ’ ಎಂದು ಹೇಳಿದರು.

ಬೆಂಗಳೂರಿನ ಉಪ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಅದನ್ನು ಯಾದವ ಸಮುದಾಯದ ಮಹಿಳೆಗೆ ನೀಡಿದ್ದೇವೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂದರು.

ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಮನೆ ಮನೆಗೆ ಕುಮಾರಣ್ಣ ಅಲ್ಲ, ಮನ ಮನಗಳಲ್ಲಿ ಕುಮಾರಣ್ಣ ನೆಲೆಸಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಬೆಮಲ್‌ ಕಾಂತರಾಜು, ರಮೇಶ್‌ಬಾಬು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚೆನ್ನಿಗಪ್ಪ, ಮುಖಂಡರಾದ ಬಿ.ಸತ್ಯನಾರಾಯಣ, ಗೌರಿಶಂಕರ್‌, ಬೆಳ್ಳಿ ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT