ಮಂಗಳವಾರ, ಸೆಪ್ಟೆಂಬರ್ 17, 2019
21 °C

‘ಕಟಕ’ನ ಹದಿಮೂರು ಮುಖಗಳು!

Published:
Updated:
‘ಕಟಕ’ನ ಹದಿಮೂರು ಮುಖಗಳು!

ಸಿನಿಮಾವನ್ನು ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡುವುದು ತಿಳಿದಿದೆ. ಆದರೆ ಬಹುಭಾಷೆಯಲ್ಲಿ ಟೀಸರ್‌ ಬಿಡುಗಡೆ ಮಾಡುವುದನ್ನು ಕೇಳಿದ್ದೀರಾ? ಅದೂ ಎರಡಲ್ಲ, ಮೂರಲ್ಲ, ಹದಿಮೂರು ಭಾಷೆಗಳಲ್ಲಿ!

ಇಂಥದ್ದೊಂದು ಹೊಸ ಪ್ರಯತ್ನ ಮಾಡಿರುವುದು ರವಿ ಬಸ್ರೂರ್‌ ನಿರ್ದೇಶನದ ‘ಕಟಕ’ ಸಿನಿಮಾ ತಂಡ. ಸಂಗೀತ ನಿರ್ದೇಶಕರಾಗಿದ್ದ ರವಿ, ಈ ಚಿತ್ರದ ಮೂಲಕ ನಿರ್ದೇಶನದ ಗದ್ದುಗೆ ಏರುತ್ತಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಕರೆದು ಹದಿಮೂರು ಭಾಷೆಗಳಲ್ಲಿ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಲಾಯಿತು. ಸಿನಿಮಾವೊಂದರ ಟೀಸರ್‌ ಇಷ್ಟೊಂದು ಭಾಷೆಯಲ್ಲಿ ಬಿಡುಗಡೆಯಾಗಿರುವುದು ಇದೇ ಮೊದಲು ಎಂದೂ ತಂಡ ಹೇಳಿಕೊಂಡಿತು.

ಇಂಥದ್ದೊಂದು ಭಿನ್ನ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲು ಪುನೀತ್‌ ರಾಜಕುಮಾರ್‌ ಅತಿಥಿಯಾಗಿ ಹಾಜರಿದ್ದರು. ಅವರೇ ಚಿತ್ರದ ಟೀಸರ್‌ ಬಿಡುಗಡೆ ಮಾಡಿದರು. ಹೊಂಬಾಳೆ ಫಿಲಂಸ್‌ನ ಕಾರ್ತಿಕ್ ಗೌಡ, ನಿರ್ದೇಶಕ ಸಂತೋಷ್‌ ಆನಂದರಾಮ್‌ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

‘ಕಟಕ’ ಸಿನಿಮಾಗೆ ಬಂಡವಾಳ ಹೂಡಿರುವುದು ಎನ್‌. ಎಸ್‌. ರಾಜಕುಮಾರ್‌. ಬ್ಲ್ಯಾಕ್‌ ಮ್ಯಾಜಿಕ್‌ ಕಥೆಯನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಕಥೆಯನ್ನು ಹೆಣೆಯಲಾಗಿದೆ. ಮುಖ್ಯಭೂಮಿಕೆಯಲ್ಲಿ ಅಶೋಕ್‌, ಉಗ್ರಂ ಮಂಜು, ಸ್ಪಂದನ ಅಭಿನಯಿಸಿದ್ದಾರೆ. ಬೇಬಿ ಶ್ಲಾಘಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

‘ನಾನು ಪುನೀತ್‌ ರಾಜಕುಮಾರ್‌ ಅಭಿಮಾನಿ. ಅವರಿಂದ ಸರಳತೆಯ ಗುಣವನ್ನು ಕಲಿತುಕೊಂಡಿದ್ದೇನೆ. ನನ್ನ ನಿರ್ದೇಶನದ ಸಿನಿಮಾದಲ್ಲಿ ಅವರೇ ಒಂದು ಹಾಡನ್ನು ಹಾಡಿರುವುದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ. ನಾನೂ ಅವರ ರೀತಿಯಲ್ಲಿಯೇ ಬದುಕಬೇಕು ಎಂದು ಕನಸು ಕಟ್ಟಿಕೊಂಡವನು’ ಎಂದರು ನಿರ್ದೇಶಕ ರವಿ.

‘ಸಿನಿಮಾ ತುಂಬ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಹೆಚ್ಚು ಜನರನ್ನು ತಲುಪುವ ಮಾಧ್ಯಮ. ನಮ್ಮಲ್ಲಿ ಅನೇಕ ಹೊಸ ಪ್ರತಿಭೆಗಳಿವೆ. ಅವರಿಗೆ ಅವಕಾಶ ಕೊಡಬೇಕು ಎಂಬ ಉದ್ದೇಶದಿಂದ ‘ಕಟಕ’ ಸಿನಿಮಾದಲ್ಲಿ ಹಲವು ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ಟೀಸರ್‌ ಬಿಡುಗಡೆಗೊಳಿಸಿ ಮಾತನಾಡಿದ ಪುನೀತ್‌, ‘ಕುಮಾರ್‌ ನನ್ನ ಆತ್ಮೀಯ ಗೆಳೆಯ. ಹಾಗೆಯೇ ರವಿ ಒಳ್ಳೆಯ ಸಂಗೀತ ನಿರ್ದೇಶಕರು. ಈ ಚಿತ್ರದ ಮೂಲಕ ಸಿನಿಮಾ ನಿರ್ದೇಶಕನಾಗುತ್ತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಹದಿಮೂರು ಭಾಷೆಗಳಲ್ಲಿ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ಕೂಡ ಆ ಎಲ್ಲ ಭಾಷೆಗಳಿಗೆ ಡಬ್‌ ಆಗಲಿ’ ಎಂದು ಹಾರೈಸಿದರು. ಹೊಂಬಾಳೆ ಫಿಲಂಸ್‌ನ ಕಾರ್ತಿಕ್ ಗೌಡ, ‘ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಮ್ಮ ಸಂಸ್ಥೆಯಿಂದ ಇದೇ ತಿಂಗಳ 13ಕ್ಕೆ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

Post Comments (+)