ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಹತ್ಯೆ ಮುಕ್ತ ಭಾರತ ನಿರ್ಮಾಣವಾಗಲಿ

ವಿಜಯಪುರದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆಶಯ
Last Updated 5 ಅಕ್ಟೋಬರ್ 2017, 10:43 IST
ಅಕ್ಷರ ಗಾತ್ರ

ವಿಜಯಪುರ: ‘ಗೋ ಹತ್ಯೆ ಮುಕ್ತ ಭಾರತ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ವಿಜಯಪುರದ ಶಿವಾನುಭವ ಮಂಟಪದಲ್ಲಿ ಬುಧವಾರ ಸಂಜೆ ಭಾರತೀಯ ಗೋ- ಪರಿವಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಯಾಕ್ಷರ ಅಭಿಯಾನಕ್ಕೆ ಚಾಲನೆ ನೀಡಿದ ಸ್ವಾಮೀಜಿ ಆಶೀವರ್ಚನ ನೀಡಿದರು.

‘ಭಾರತದಲ್ಲಿ ಗೋ ಹತ್ಯೆ ಸಂಪೂರ್ಣವಾಗಿ ನಿಲ್ಲಬೇಕು. ಗೋವಿನ ಒಂದು ತೊಟ್ಟು ರಕ್ತ ಸಹ ಭೂಮಿಗೆ ಬೀಳಬಾರದು, ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆ ಸಂಕಲ್ಪ ಮಾಡಬೇಕು. ಈ ಸಂಕಲ್ಪ ಹಾಗೂ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿಯೇ ‘ಅಭಯಾಕ್ಷರ’ ಅಭಿಯಾನ ಸಂಘಟಿಸಲಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ ಬೆಂಗಳೂರು ನಗರವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಕನಿಷ್ಠ 20 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಗೊಳ್ಳಬೇಕು. ಸಂಗ್ರಹಣೆಯಾಗುವ ಎಲ್ಲ ಸಹಿಗಳನ್ನು ಕ್ರೋಢೀಕರಿಸಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಮನವಿ ರೂಪದಲ್ಲಿ ಸಲ್ಲಿಸಲಾಗುವುದು’ ಎಂದರು.

‘ಗೋ -ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತಹ ಕಾನೂನು ರೂಪಿಸಬೇಕು ಎಂದು ಸಹಿ ಸಹಿತ ಲಿಖಿತ ಪತ್ರಗಳನ್ನು ಪ್ರಧಾನಮಂತ್ರಿಗೆ ಸಲ್ಲಿಸುವ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದೂ ಇದೇ ಸಂದರ್ಭ ಹೇಳಿದರು.

‘ಈಗಾಗಲೇ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ರಾಜಕೀಯ ನೇತಾರರು ಸಹ ತಮ್ಮ ‘ಹಸ್ತಾಕ್ಷರ’ ಹಾಕುವ ಮೂಲಕ ಅಭಯಾಕ್ಷರಕ್ಕೆ ಸಾತ್‌ ನೀಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವರಾದ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ ಸಹ ಸಹಿ ಮಾಡಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.

ಯರನಾಳ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಮನಗೂಳಿಯ ಸಂಗನಬಸವ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಗೋ ಹತ್ಯೆ ನಿಷೇಧಿಸುವಂತೆ ಒತ್ತಾಯಿಸುವ ಲಿಖಿತ ರೂಪದ ಮನವಿಗೆ ತಮ್ಮ ಹಸ್ತಾಕ್ಷರ ಹಾಕುವ ಮೂಲಕ ಬೆಂಬಲ ಸೂಚಿಸಿದರು.

ಕಸಾಯಿಖಾನೆ ಮುಕ್ತ ಜಿಲ್ಲೆ: ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ‘ವಿಜಯಪುರ ಜಿಲ್ಲೆಯಲ್ಲಿ ಕಗ್ಗೋಡದ ರಾಮನಗೌಡ ಯತ್ನಾಳ ಗೋ-ರಕ್ಷಾ ಕೇಂದ್ರದ ವತಿಯಿಂದ ಗೋ ರಕ್ಷಣೆಗೆ ಸಂಬಂಧಿಸಿದಂತೆ ಹತ್ತಾರು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಗಳಿಂದಾಗಿ ವಿಜಯಪುರ ಜಿಲ್ಲೆ ಕಸಾಯಿಖಾನೆ ಮುಕ್ತ ಜಿಲ್ಲೆಯಾಗಿ ರೂಪುಗೊಳ್ಳಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT