ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ಮತ್ತು ನಾರಾಯಣ ಇರುವ ಪ್ರಪಂಚ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಿರುತೆರೆಯ ಮೂಲಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟಿ ವಿನಯಾ ಪ್ರಸಾದ್ ಅವರು ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದು ಈಗ ಹಳೆಯ ಸುದ್ದಿ. ಅವರು ನಿರ್ದೇಶಿಸಿರುವ ‘ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ ಎನ್ನುವುದು ಹೊಸ ಸುದ್ದಿ.

ಈ ಸಿನಿಮಾದ ಬಗ್ಗೆ ವಿವರ ನೀಡಲು ವಿನಯಾ ಪ್ರಸಾದ್ ಅವರು ತಮ್ಮ ಸಿನಿಮಾ ತಂಡದ ಜೊತೆಯಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ‘ಮತ್ತೆ ಮತ್ತೆ ವೀಕ್ಷಿಸಬೇಕು ಎನ್ನುವ ಭಾವವನ್ನು ಈ ಸಿನಿಮಾ ಕೊಟ್ಟೇ ಕೊಡುತ್ತದೆ’ ಎನ್ನುವ ಆತ್ಮ ವಿಶ್ವಾಸದ ಮಾತುಗಳ ಮೂಲಕ ವಿನಯಾ ಪ್ರಸಾದ್ ಮಾತು ಆರಂಭಿಸಿದರು.

‘ಈ ಸಿನಿಮಾದಲ್ಲಿ ನಾನು ಲಕ್ಷ್ಮಿಯ ಪಾತ್ರದಲ್ಲಿ, ಹಿರಿಯ ನಟ ಮಂಜುನಾಥ ಹೆಗಡೆ ಅವರು ನಾರಾಯಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಸಮಾಜಕ್ಕೆ ಒಂದಲ್ಲ ಒಂದು ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ ಮನೋರಂಜನೆಯನ್ನು ಅಲಕ್ಷಿಸಿಲ್ಲ. ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ರಂಜನೆ ಸಿಗುವ ಬಗ್ಗೆ ಅನುಮಾನ ಬೇಡ’ ಎಂದು ಅವರು ಹೇಳಿದರು.

ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಆಸೆ ವಿನಯಾ ಅವರಲ್ಲಿ ಹದಿನೈದು ವರ್ಷಗಳ ಹಿಂದೆಯೇ ಬಂದಿತ್ತಂತೆ. ಆದರೆ ವೃತ್ತಿ ಹಾಗೂ ಕುಟುಂಬದ ಒತ್ತಡಗಳ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದರು ಅವರು. ಇಷ್ಟೇ ಅಲ್ಲ, ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದವರು ಕೂಡ ಅವರೇ. ‘ನಮ್ಮ ಇತಿಮಿತಿಯಲ್ಲಿ, ಪೂರ್ವ ತಯಾರಿಯೊಂದಿಗೆ ಹಣ ಹೂಡಿ, ಸಿನಿಮಾ ಮಾಡಿದ್ದೇವೆ. ಹಣ ಹೂಡಿಕೆ ಮಾಡಿದವರಿಗೆ ಇರಬಹುದಾದ ಯಾವ ಅಳುಕೂ ನಮ್ಮಲ್ಲಿ ಇಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ನಗುನಗುತ್ತಲೇ ಉತ್ತರ ನೀಡಿದರು.

‘ಪೂರ್ವ ತಯಾರಿಯೊಂದಿಗೆ ನಿರ್ದೇಶನಕ್ಕೆ ಇಳಿದಿದ್ದ ಕಾರಣ, ಈ ಕೆಲಸ ಬಹಳ ಖುಷಿಕೊಟ್ಟಿದೆ. ನಮಗೊಂದು ಕಥೆ ಹೇಳಬೇಕಿತ್ತು. ಆ ಕೆಲಸ ಮಾಡಿದ್ದೇವೆ’ ಎಂದರು. ಈ ಸಿನಿಮಾವನ್ನು ವಿನಯಾ ಪ್ರಸಾದ್ ಹಾಗೂ ಅವರ ತಂಡವು ಪ್ರೀತಿಯಿಂದ ‘ಎಲ್‌ಎನ್‌ಪಿಬಿ’ ಎಂದು ಕರೆದುಕೊಂಡಿದೆ.
ಎಲ್‌ಎನ್‌ಪಿಬಿ ಸಿನಿಮಾದ ಹಂಚಿಕೆಯ ಹೊಣೆಯನ್ನು ಜಾಕ್‌ ಮಂಜು ಅವರ ವಹಿಸಿಕೊಂಡಿದ್ದಾರೆ.

‘ಈ ರೀತಿ ಯೋಜನೆ ರೂಪಿಸಿ ಸಿನಿಮಾ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಹೇಳಿದರು ಮಂಜು. ಸಿನಿಮಾಕ್ಕೆ ಮಾಡಿರುವ ಖರ್ಚು ಎಷ್ಟು ಎಂದು ಹಲವು ಬಾರಿ ಕೇಳಿದರೂ ವಿನಯಾ ಪ್ರಸಾದ್ ಜಾಣತನದಿಂದ ತಪ್ಪಿಸಿಕೊಂಡರು! ವಿನಯಾ ಅವರ ಪುತ್ರಿ ಪ್ರಥಮಾ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT