ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗೆ ತನ್ನ ದಾರಿ ಸ್ಪಷ್ಟವಿದೆ, ಮನುಷ್ಯನಿಗೆ?!

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಗಂಗಾ ನದಿಯಲ್ಲಿ ಸ್ನಾನಕ್ಕೆ ಸಾಧುಗಳ ನಿರಾಕರಣೆ’, ‘ಯಮುನಾ ನದಿಯಲ್ಲಿ ತೇಲುತ್ತಿವೆ ರಾಶಿ ಮೂರ್ತಿಗಳು’- ಒಂದೇ ಪುಟದಲ್ಲಿದ್ದ ಈ ವರದಿಗಳು (ಪ್ರ.ವಾ., ಅ.2) ಪರಿಸರ ಕುರಿತ ಮನಷ್ಯನ ಹೊಣೆಗೇಡಿತನ ಎಂಥ ದಾರುಣ ಸ್ಥಿತಿ ತಲುಪಿದೆ ಎನ್ನುವುದನ್ನು ಬಿಂಬಿಸುತ್ತವೆ. ನಮ್ಮ ಬದುಕಿನ ಸಕಲ ಮಗ್ಗುಲುಗಳಲ್ಲೂ ನದಿಗಳ ಪಾತ್ರವಿದೆ. ಅವು ವಿಶೇಷವಾಗಿ ಒಂದು ಪ್ರಾಂತ್ಯದ ಆರ್ಥಿಕ ಮತ್ತು ಸಾಮಾಜಿಕ ಆಗುಹೋಗುಗಳನ್ನು ನಿರ್ಧರಿಸುತ್ತವೆ. ಮನುಷ್ಯನ ಮೂಲಭೂತ ಹಕ್ಕುಗಳು ಪ್ರಕೃತಿಯ ಕೊಡುಗೆಗಳನ್ನೇ ಅವಲಂಬಿಸಿವೆ. ನದಿಗಳು ಜೀವಿಯ ಅಸ್ತಿತ್ವದ ಹಾಗೂ ಅಭಿವರ್ಧನೆಯ ಬೆನ್ನೆಲುಬೆಂದು ತಿಳಿದರೂ ಅವುಗಳ ಮೇಲೆ ಮನುಷ್ಯನ ಅತಿಕ್ರಮಣ ಎಗ್ಗಿಲ್ಲದೆ ಸಾಗಿದೆ. ಅವನು ನದಿಯನ್ನು ಅಡ್ಡಗಟ್ಟಿದ. ಅದರ ದಿಕ್ಕೆಡಿಸಿದ. ಮಲಿನಗೊಳಿಸಿದ. ಎಲ್ಲರೂ ಅರಗಿಸಿಕೊಳ್ಳಬೇಕಾದ ನಿಷ್ಠುರ ಸತ್ಯವಿದು.

ವಿಶ್ವದಾದ್ಯಂತ ನದಿಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಮಾಲಿನ್ಯ, ನಗರೀಕರಣ, ಅತಿಯಾದ ಪ್ರಮಾಣದಲ್ಲಿ ನೀರಿನ ಬಳಕೆ, ಒಡ್ಡು, ಅಣೆಕಟ್ಟುಗಳ ನಿರ್ಮಾಣ, ಗಣಿಗಾರಿಕೆ ಹೀಗೆ... ಅರ್ಧದಷ್ಟು ಸಂಖ್ಯೆಯ ನದಿಗಳ ನೀರು ಬಳಸಲು ಯೋಗ್ಯವಾಗಿಲ್ಲ. ನದಿಗಳ ಮಾಲಿನ್ಯದಿಂದ ಜಲಚರಗಳು ಮಾತ್ರವಲ್ಲ, ಜಲಸಸ್ಯಗಳೂ ನಶಿಸುತ್ತವೆ. ಮೇಲಾಗಿ ಬದುಕು ಕಟ್ಟಿಕೊಡುವ ನದಿಗಳು ರೋಗರುಜಿನಗಳನ್ನು ಹರಡುವುದು ಎಂತಹ ವಿಪರ್ಯಾಸ?

ಅನಾದಿ ಕಾಲದಿಂದಲೂ ನದಿಗಳು ನಾಗರಿಕತೆಗಳ ಅಮಲಿಗೆ ಸಿಕ್ಕಿವೆ. ವರ್ತಮಾನದಲ್ಲಂತೂ ಅವು ತೀವ್ರತರವಾಗಿ ನಲುಗಿವೆ. ಜನಸಂಖ್ಯೆ ಹೆಚ್ಚಳ, ವ್ಯಾಪಕ ಕೈಗಾರಿಕೀಕರಣ, ದೂರದೃಷ್ಟಿರಹಿತ ಅವೈಜ್ಞಾನಿಕ ಯೋಜನೆಗಳು ನದಿ ನೀರಿನ ಲಭ್ಯತೆ ಹಾಗೂ ಗುಣಮಟ್ಟವನ್ನು ತಗ್ಗಿಸಿವೆ. ಪ್ರಕೃತಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಕೇವಲ ಶೇಕಡ 2.7 ರಷ್ಟು ಶುದ್ಧ ನೀರು. ಇದರ ಶೇಕಡ 0.0003 ರಷ್ಟು ಮಾತ್ರವೇ ನದಿಗಳಾಗಿ ಪ್ರವಹಿಸುವುದು ಎನ್ನುವುದು ಪರಿಗಣಿಸಬೇಕಾದ ಅಂಶ. ಎಂದಮೇಲೆ ನದಿಗಳು ವಿತರಿಸುವ ತಾಜಾ ನೀರು ಬಹು ಅಮೂಲ್ಯ. ನದಿ ಮಾತೃಸದೃಶ. ಸಹನೆಗೆ ಪರ್ಯಾಯ ಹೆಸರೇ ಅದು. ಮೈಯೆಲ್ಲಾ ಕಾಲಾಗಿರುವ ನದಿ ತಾನು ಸಾಗುವ ಹಾದಿಯುದ್ದಕ್ಕೂ ಜೀವಜಲವೆಂಬ ನಿತ್ಯಸಂಜೀವಿನಿ ಹಂಚುತ್ತದೆ. ಜೊತೆಗೆ ಹನಿ ಹನಿಯನ್ನೂ ಎಚ್ಚರದಿಂದ ಬಳಸಿ ಎನ್ನುವ ಸಂದೇಶವನ್ನೂ ಹೊತ್ತೊಯ್ಯುತ್ತದೆ.

‘ಹೊಳೆ ನೀರಿಗೆ ದೊಣೆನಾಯಕನ ಅಪ್ಪಣೆಯೇ’ ಎನ್ನುವಾಗ ಮನುಷ್ಯ ಹೊಣೆಯರಿತು ಅದರ ನೀರನ್ನು ಮೊಗೆಯುವ ಅವ್ಯಕ್ತ ಒಡಂಬಡಿಕೆಯಿದೆ. ಯಾರು ಹೇಗಾದರೂ ನೀರು ಬಸಿದುಕೊಳ್ಳಬಹುದಾದ ಸ್ವತ್ತು, ಅದರ ಆಸುಪಾಸಿನಲ್ಲಿ ನಿರಾಳವಾಗಿ ವಿಹರಿಸಲಡ್ಡಿಯೇನು ಎಂಬ ನಿರಂಕುಶ ಭಾವದ ಫಲಶ್ರುತಿ ಘನಘೋರ.

ಮಹಾಭಾರತದ ಕಾಳಿಂಗ ಮರ್ದನ ಪ್ರಸಂಗ ಈ ನಿಟ್ಟಿನಲ್ಲಿ ಒಂದು ಮಾದರಿ. ಯಮುನಾ ನದಿಯಲ್ಲಿದ್ದ ಕಾಳಿಂಗ ಸರ್ಪ ಸುತ್ತಮುತ್ತಲಿನ ನಿವಾಸಿಗಳಿಗೆ ಭಾರೀ ಆತಂಕ ಸೃಷ್ಟಿಸಿರುತ್ತದೆ. ತನ್ನ ನಂಜಿನಿಂದ ನೀರನ್ನು ಮಲಿನಗೊಳಿಸುತ್ತದೆ. ಶ್ರೀಕೃಷ್ಣ ಅದನ್ನು ಮರ್ದಿಸಿ ಬುದ್ಧಿವಾದ ಹೇಳುತ್ತಾನೆ. ಅದನ್ನು ಕೊಲ್ಲುವುದಿಲ್ಲ. ಬೇರೆಡೆಗೆ ಹೋಗೆಂದು ನಿರ್ದೇಶಿಸುತ್ತಾನೆ. ಅವನದು ಕಾಳಿಂಗ ಮರ್ದನವೇ ಹೊರತು ಸಂಹಾರವಲ್ಲ. ಇಲ್ಲಿ ಅವನ ಪರಿಸರ ಪ್ರೀತಿ ಎರಡು ಬಗೆಗಳಲ್ಲಿ ಪ್ರಕಟವಾಗುತ್ತದೆ.

ನದಿ ನೀರು ನಿರಂತರ ಪ್ರವಹಿಸುತ್ತದೆ. ಹರಿಯುವ ನೀರು ತೀರ್ಥವೆಂಬ ಭಾವನೆಯಿದೆ. ಅದೇ ಸರೋವರ, ಕೆರೆ, ಬಾವಿ, ಕಟ್ಟೆ, ಕುಂಟೆಗಳಲ್ಲಿ ವರ್ಷಾನುಗಟ್ಟಲೆ ನೀರು ನಿಂತಿರುತ್ತದೆ. ‘ನೀರಿದ್ರೆ ಊರು. ನಾರಿಯಿದ್ರೆ ಮನೆ’ ನುಡಿಗಟ್ಟಿನಲ್ಲಿ ನೀರು ಹೊಳೆಗೆ ಸಂಬಂಧಿಸಿದ್ದೇ. ಗಿರಿಶಿಖರಗಳಿಂದ ಖನಿಜಾಂಶಗಳನ್ನು ತರುವ ನದಿ ಒಂದು ಅರ್ಥದಲ್ಲಿ ಸಂಚಾರಿ ಧನ್ವಂತರಿ. ಭಾರತವನ್ನು ನದಿಗಳ ದೇಶವೆನ್ನಬಹುದು. ಶೇಕಡ 80 ರಷ್ಟು ಜನ ನದಿಗಳನ್ನೇ ಅವಲಂಬಿಸಿದ್ದಾರೆ. ನದೀಪಾತ್ರಗಳಲ್ಲಿ ವಾಸಿಸುತ್ತಾರೆ. 2,525 ಕಿ.ಮೀ. ಉದ್ದವಿರುವ ಗಂಗಾ ನದಿ ಭಾರತದ ನದಿಗಳಲ್ಲೇ ಅತಿ ದೊಡ್ಡದು. ಜಗತ್ತಿನಲ್ಲೇ ಅದಕ್ಕೆ ಎರಡನೆಯ ಸ್ಥಾನ. ಸಾಧು, ಸಂತರನ್ನು, ದಾರ್ಶನಿಕರನ್ನು ಅದು ಸೃಷ್ಟಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಸಾಗುವ ತನ್ನ ಹಾದಿಯುದ್ದಕ್ಕೂ ಅದು ಅಲ್ಲಿನ ಕೈಗಾರಿಕೆಗಳಿಗೆ ಎದೆಯೊಡ್ಡುವುದರಿಂದ ವರ್ಷಕ್ಕೆ 150 ಕೋಟಿ ಟನ್ ಕೆಸರುಗೂಡಿಸಿಕೊಳ್ಳಬೇಕಾದ ಅನಿವಾರ್ಯ! ಗಂಗಾ ನದಿಯ ನೀರನ್ನು ಅಶುದ್ಧಗೊಳಿಸುವಲ್ಲಿ ಮಾರಕ ರಾಸಾಯನಿಕಗಳದ್ದೇ ಸಿಂಹಪಾಲು.

ಯಮುನಾ ನದಿಯ ಪಾಡು ಇದಕ್ಕಿಂತ ಭಿನ್ನವೇನಲ್ಲ. ಸಿಂಗಪುರದಲ್ಲಿ 1960ರಲ್ಲಿ ಪ್ರಾರಂಭವಾದ ಸತತ ಅಭಿವೃದ್ಧಿ ಕಾಮಗಾರಿಗಳಿಂದ ಅಲ್ಲಿನ ನದಿ (ಸಿಂಗಪುರ್ ರಿವರ್) ಕಲುಷಿತವಾಯಿತು. ಆದರೆ ಮುಂದೆ 1977 ರಿಂದ 1983 ರ ತನಕ ಅದಕ್ಕೆ ಕಂಡುಕೊಂಡ ಪರಿಹಾರ ಯೋಜನೆಯನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲಾಯಿತು. ನದಿಯ ಹೂಳೆತ್ತಲಾಯಿತು. ಸರಹದ್ದಿನಲ್ಲಿ ವ್ಯಾಪಕವಾಗಿ ಗಿಡ, ಮರ ಬೆಳೆಸಲಾಯಿತು. ಅದು ಹರಿಯುವ ಹಾದಿಯುದ್ದಕ್ಕೂ ಇಕ್ಕೆಲಗಳಲ್ಲೂ ಗೋಡೆ ನಿರ್ಮಿಸಲಾಯಿತು. ಅಲ್ಲಲ್ಲಿ ವಿಹಾರ ಪಥಗಳನ್ನು ನಿರ್ಮಿಸಿ ನದಿಯನ್ನು ಪ್ರೇಕ್ಷಣೀಯ ತಾಣವನ್ನಾಗಿಸಲಾಯಿತು. ‘ಸಿಂಗಪುರ ನದಿ ನಮ್ಮದು. ಅದನ್ನು ಸರ್ವದಾ ತಳ ಗೋಚರಿಸುವಷ್ಟು ಪಾರದರ್ಶಕವಾಗಿ ಇಟ್ಟುಕೊಳ್ಳ
ಬೇಕು’ ಎಂಬ ಪ್ರಜ್ಞೆ ಅಲ್ಲಿನ ಪ್ರಜೆಗಳಲ್ಲಿ ಮೂಡಿತು. ನದಿ ಮತ್ತು ನಗರಕ್ಕೂ ತಡೆಗೋಡೆ ಕಟ್ಟುವುದು ಒಂದು ಪರಿಣಾಮಕಾರಿ ಕ್ರಮ. ಇದರಿಂದಾಗಿ ನಗರ ವಿಸರ್ಜಿಸುವ ಯಾವುದೇ ತ್ಯಾಜ್ಯ ನದಿ ಸೇರದು.

ನದಿಗಳನ್ನು ಕಲುಷಿತಗೊಳಿಸುವ ಯಾವುದೇ ಧಾರ್ಮಿಕ ವಿಧಿ, ಆಚರಣೆಗಳನ್ನು ಕೈ ಬಿಡುವುದು ಯುಕ್ತ. ನದಿಯಲ್ಲಿ ಮುಳುಗಿ ದೇಹಾಂತ್ಯ ಮಾಡಿಕೊಳ್ಳುವುದರಿಂದ, ಮೃತರ ಅಸ್ಥಿ ವಿಸರ್ಜನೆಯಿಂದ ಸದ್ಗತಿ ಎನ್ನುವ ನಂಬಿಕೆ ಮಹಾನದಿಗಳನ್ನು ಅವನತಿಯತ್ತ ದೂಡಿದೆ. ಬಾಗಿನ ಅರ್ಪಣೆ, ಪೂಜೆ ಪುನಸ್ಕಾರ ಸಾಂಕೇತಿಕವಾಗಿರಬೇಕೆ ಹೊರತು ಹೂವು, ಹಣ್ಣು, ಎಲೆ, ಕಾಯಿ ಇತ್ಯಾದಿ ಸಾಮಗ್ರಿಗಳು ಬೆರೆತರೆ ನೀರಿನ ಪಾಲಿಗೆ ಅದು ತ್ಯಾಜ್ಯವೇ. ನೀರು ಅಮೃತ ಬೆರೆಸಿದರೂ ತನ್ನ ತಾಜಾತನ ಕಳೆದುಕೊಳ್ಳುವುದು! ನದಿಗೆ ಸಮರ್ಪಿಸುವ ಕೃತಜ್ಞತೆಯೆಂದರೆ ಅದರ ನೀರು ಶುದ್ಧವಾಗಿರುವಂತೆ ಜತನದಿಂದ ನಿಗಾ ವಹಿಸುವುದು. ನದಿಗಳ ಶುದ್ಧೀಕರಣ ಅಭಿಯಾನದಡಿ ಏನೆಲ್ಲ ಯೋಜನೆಗಳನ್ನು ಹಮ್ಮಿಕೊಂಡರೂ ಸಾರ್ವಜನಿಕ ಜಾಗೃತಿಯೇ ನಿರ್ಣಾಯಕ. ನದಿಗಳ ಆದಿ ಸ್ಥಿತಿಯ ವೈಭವ ಮರುಕಳಿಸಬೇಕಿದೆ. ರಸ್ತೆ, ರೈಲು ವ್ಯವಸ್ಥೆಯಿಲ್ಲದ ದಿನಮಾನಗಳಲ್ಲಿ ಬೃಹತ್ ನದಿಗಳೇ ಸಾರಿಗೆಗೆ, ಸಂಪರ್ಕಕ್ಕೆ ಮಾರ್ಗಗಳಾಗಿದ್ದವು. ಬೃಹತ್ ಬಂಡೆಗಳನ್ನು ಸಾಗಿಸಲು ನದಿಗಳ ಪ್ರವಾಹವನ್ನೇ ನೆಚ್ಚಿಕೊಂಡಿದ್ದ ಕಾಲವಿತ್ತು. ನದಿಗೆ ತನ್ನ ದಾರಿ, ಗುರಿ ಸ್ಪಷ್ಟವಿರುವಂತೆ ಮನುಷ್ಯನಿಗೂ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT