ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹಂತಕನ ಕಂಡ ವಿದ್ಯಾರ್ಥಿಯ ವಿಚಾರಣೆ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗುತ್ತಿದ್ದ ಹಂತಕನನ್ನು ಹತ್ತಿರದಿಂದ ನೋಡಿದ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

‘ರಾಜರಾಜೇಶ್ವರಿನಗರ ಸಮೀಪದ ಐಡಿಯಲ್‌ ಹೋಮ್ಸ್‌ ಟೌನ್‌ಶಿಪ್‌ ನಿವಾಸಿಯಾದ ಆ ವಿದ್ಯಾರ್ಥಿ, ಸೆ.5ರ ರಾತ್ರಿ 7.50ರ ಸುಮಾರಿಗೆ ಗೌರಿ ಅವರ ಮನೆ ಮುಂದೆ ನಡೆದು ಹೋಗುತ್ತಿದ್ದ. ಆತನ ಪಕ್ಕದಲ್ಲೇ ಮೂವರು ಕಟ್ಟಡ ಕಾರ್ಮಿಕರಿದ್ದರು. ಇದೇ ವೇಳೆ ಗೌರಿ ಅವರ ಮನೆಯ ಗೇಟ್‌ ತೆಗೆದು ಹೊರ ಬಂದ ಹಂತಕ, ಸಹಚರನ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೌರಿ ಅವರ ಮನೆಯಲ್ಲಿದ್ದ ಎರಡು ಕ್ಯಾಮೆರಾಗಳಲ್ಲಿ ಆ ವಿದ್ಯಾರ್ಥಿ ಹಾಗೂ ಕಾರ್ಮಿಕರ ದೃಶ್ಯ ಸೆರೆಯಾಗಿಲ್ಲ. ಆದರೆ, ರಸ್ತೆ ಕೊನೆಯ ಕಟ್ಟಡವೊಂದರಲ್ಲಿದ್ದ ಕ್ಯಾಮೆರಾದಲ್ಲಿ ಅವರು ಸೆರೆಯಾಗಿದ್ದಾರೆ. ಹಂತಕ ಬೈಕ್‌ನಲ್ಲಿ ಹೋಗುವಾಗ ಸುಮಾರು ದೂರ ಹಿಂದೆ ತಿರುಗಿ ಆ ವಿದ್ಯಾರ್ಥಿ ಹಾಗೂ ಕಾರ್ಮಿಕರನ್ನೇ ನೋಡಿಕೊಂಡು ಹೋಗಿದ್ದಾನೆ’ ಎಂದು ಮಾಹಿತಿ ನೀಡಿದರು.

ಕತ್ತಲಲ್ಲಿ ಕಾಣಲಿಲ್ಲ: ‘ವಿದ್ಯಾರ್ಥಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ‘ಹತ್ಯೆ ನಡೆದ ಸಮಯದಲ್ಲಿ ನಾನು ಆ ರಸ್ತೆಯಲ್ಲೇ ಹೋಗಿರಲಿಲ್ಲ. ನನಗೇನೂ ಗೊತ್ತಿಲ್ಲ’ ಎಂದು ಆರಂಭದಲ್ಲಿ ಹೇಳಿಕೆ ಕೊಟ್ಟ. ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ತೋರಿಸಿದಾಗ, ಅದರಲ್ಲಿರುವವನು ನಾನೇ ಎಂದು ಒಪ್ಪಿಕೊಂಡ’ ಎಂದು ಅಧಿಕಾರಿಗಳು ಹೇಳಿದರು.

‘ಆ ರಾತ್ರಿ ಸುತ್ತಮುತ್ತಲ ಪ್ರದೇಶದಲ್ಲಿ ಕರೆಂಟ್ ಇರಲಿಲ್ಲ. ಅದು ಗೌರಿ ಅವರ ಮನೆ ಎಂಬುದೂ ನನಗೆ ಗೊತ್ತಿರಲಿಲ್ಲ. ಅವರ ಮನೆ ಗೇಟ್ ತೆಗೆದು ಹೊರಬಂದ ಸುಮಾರು 5.3 ಅಡಿ ಎತ್ತರದ ವ್ಯಕ್ತಿಯೊಬ್ಬ, ಇನ್ನೊಬ್ಬನ ಜತೆ ಬೈಕ್‌ನಲ್ಲಿ ಹೊರಟು ಹೋದ. ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ, ಚಹರೆ ಸ್ಪಷ್ಟವಾಗಿ ಕಾಣಲಿಲ್ಲ.’

‘ಅದು ಕೆಂಪು ಬಣ್ಣದ ಬೈಕ್. ಪಲ್ಸರ್, ಡಿಸ್ಕವರಿ ಅಥವಾ ಪ್ಯಾಷನ್ ಬೈಕ್ ಇರಬಹುದು. ನೋಂದಣಿ ಸಂಖ್ಯೆ ಕಾಣಿಸಲಿಲ್ಲ. ಅವರು ಹೊರಟು ಹೋದ ಸ್ವಲ್ಪ ಸಮಯದ ನಂತರ ಮಾಧ್ಯಮದವರು ಹಾಗೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಗೌರಿ ಹತ್ಯೆ ನಡೆದಿರುವ ವಿಚಾರ ನನಗೆ ಗೊತ್ತಾಗಿದ್ದು ಆಗಲೇ’ ಎಂದು ವಿದ್ಯಾರ್ಥಿ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದರು.

ನಂಬರ್‌ ಪ್ಲೇಟ್ ಇಲ್ಲ: ‘ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಅದು ಕೆಂಪು ಬಣ್ಣದ ಪಲ್ಸರ್ ಬೈಕ್ ಎಂಬುದು ಬಹುತೇಕ ಖಚಿತವಾಗಿದೆ. ಅದರ ಮುಂಭಾಗದಲ್ಲಿ ನೋಂದಣಿ ಫಲಕ ಇಲ್ಲ. ಹಿಂಭಾಗದ ನೋಂದಣಿ ಫಲಕದಲ್ಲಿರುವ ಸಂಖ್ಯೆಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ‘ಕೆಎ 02 ಎ’ ಎಂಬ ಸಂಖ್ಯೆಗಳಷ್ಟೇ ಕಾಣಿಸುತ್ತವೆ. ಇಷ್ಟೆಲ್ಲ ಸಂಚು ರೂಪಿಸಿ ಕೃತ್ಯ ಎಸಗಿರುವವರು ನಂಬರ್‌ ಪ್ಲೇಟ್ ಬದಲಿಸದೆ ಇರಲಾರರು’ ಎಂದು ತನಿಖಾಧಿಕಾರಿಗಳು ಹೇಳಿದರು.

ನಕ್ಸಲ್ ಆಯಾಮ ಕೈಬಿಟ್ಟರು

ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆಯಾಗಿದೆ ಎಂದು ಎಫ್‌ಎಸ್‌ಎಲ್ ವರದಿ ಕೊಟ್ಟಿದೆ.

ಈ ವರದಿ ಕೈಸೇರಿದ ಬಳಿಕ ನಕ್ಸಲ್‌ ಆಯಾಮದ ತನಿಖೆಯನ್ನು ಕೈಬಿಟ್ಟಿರುವ ಎಸ್‌ಐಟಿ ಅಧಿಕಾರಿಗಳು, ಸೈದ್ಧಾಂತಿಕ ಕಾರಣಕ್ಕೇ ಹತ್ಯೆ ನಡೆದಿರಬಹುದು ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT