ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ತನಿಖೆಯಲ್ಲಿ ನ್ಯಾಯ ಸಿಗಲಿದೆ

ಪತ್ರಿಕಾಗೋಷ್ಠಿಯಲ್ಲಿ ಗೌರಿ ಲಂಕೇಶ್‌ ಕುಟುಂಬದ ಸದಸ್ಯರ ವಿಶ್ವಾಸದ ನುಡಿ
Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗೌರಿ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುವುದಿಲ್ಲ. ಎಸ್‍ಐಟಿ ತನಿಖೆ ಪ್ರಗತಿಯಲ್ಲಿದ್ದು, ನ್ಯಾಯ ದೊರಕುವ ವಿಶ‍್ವಾಸವಿದೆ’ ಎಂದು ಗೌರಿ ಲಂಕೇಶ್‌ ಸಹೋದರ ಹಾಗೂ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ತಿಳಿಸಿದರು.

ನಗರದಲ್ಲಿ ಗುರುವಾರ ಅವರು ತಾಯಿ ಇಂದಿರಾ ಮತ್ತು ಸಹೋದರಿ ಕವಿತಾ ಜತೆ ಪತ್ರಿಕಾಗೋಷ್ಠಿ ನಡೆಸಿದರು.

‘ಗೌರಿ ಹತ್ಯೆಯಾಗಿ ತಿಂಗಳಾಗಿದೆ. ಸರ್ಕಾರ ಹಂತಕರನ್ನು ಶೀಘ್ರ ಬಂಧಿಸಬೇಕು. ಗೌರಿಯನ್ನು ಯಾಕೆ ಕೊಂದರೆನ್ನುವುದು ನಮಗೆ ಗೊತ್ತಾಗಬೇಕು. ಇದೊಂದೇ ಕಾರಣಕ್ಕೆ ನಾವು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದೇವೆ' ಎಂದು ತಿಳಿಸಿದರು.

‘ಗೌರಿ ಹತ್ಯೆಗೂ ನರೇಂದ್ರ ಧಾಬೋಲ್ಕರ್‍, ಗೋವಿಂದ ಪಾನ್ಸಾರೆ ಹಾಗೂ ಎಂ.ಎಂ.ಕಲಬುರ್ಗಿ ಅವರ ಹತ್ಯೆಗೂ ಸಾಮ್ಯತೆ ಇದೆ. ಹಾಗೆಂದ ಮಾತ್ರಕ್ಕೆ ಈ ಎಲ್ಲ ಕೊಲೆಗಳನ್ನು ಒಬ್ಬರೇ ಮಾಡಿದ್ದಾರೆಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ. ತನಿಖೆ ಪ್ರಗತಿಯಲ್ಲಿರುವಾಗ ಯಾರೂ ಕೂಡ ಇದೇ ಅಂತಿಮ ತೀರ್ಪು ಎನ್ನುವಂತೆ ಮಾತನಾಡಬಾರದು’ ಎಂದು ಮನವಿ ಮಾಡಿದರು.

ಸದ್ಯಕ್ಕೆ ಗೌರಿ ಕುರಿತ ಸಿನೆಮಾ ಬೇಡ: ‘ಗೌರಿ ಬಗ್ಗೆ ಉತ್ತಮ ಸಿನೆಮಾ ನಿರ್ಮಿಸುವ ಉದ್ದೇಶ ನಮಗೂ ಇದೆ. ಆದರೆ, ತನಿಖೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಗೌರಿ ಕುರಿತ ಸಿನೆಮಾ ಮಾಡದಂತೆ ಚಿತ್ರ ತಂಡಕ್ಕೆ ತಾತ್ಕಾಲಿಕ ತಡೆ ನೋಟಿಸ್‌ ನೀಡಿದ್ದೇವೆ’ ಎಂದು ಕವಿತಾ ಲಂಕೇಶ್‌ ತಿಳಿಸಿದರು.

‘ತನಿಖಾಧಿಕಾರಿಗಳಿಗೆ, ನಮಗೆ ಹಾಗೂ ಗೌರಿ ಬಗ್ಗೆ ಸಿನೆಮಾ ಮಾಡುತ್ತಿರುವ ರಮೇಶ್‍ ಅವರಿಗೂ ಕೊಲೆಗಾರರು ಯಾರೆಂಬುದು ಗೊತ್ತಿಲ್ಲ. ಸಿನೆಮಾದಲ್ಲಿ ನಮಗನಿಸಿದ ಮಾಹಿತಿ ನೀಡುವುದು, ಚಿತ್ರದ ಮೂಲಕ ಒಂದು ತೀರ್ಮಾನಕ್ಕೆ ಬರುವುದು ಕೂಡ ತನಿಖೆ ಮೇಲೆ ಪ್ರಭಾವ ಬೀರುತ್ತದೆ. ಆ ಕಾರಣಕ್ಕೆ ನಮ್ಮ ತಾಯಿ ಸದ್ಯಕ್ಕೆ ಗೌರಿ ಬಗ್ಗೆ ಸಿನೆಮಾ ಮತ್ತು ಕಿರುಚಿತ್ರ ನಿರ್ಮಿಸದಂತೆ ನೋಟಿಸ್‍ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ನಟ ಪ್ರಕಾಶ್‌ ರೈ ವಿರುದ್ಧ ದೂರು (ಲಖನೌ): ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಬಗ್ಗೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನನಗಿಂತ ದೊಡ್ಡ ನಟ’ ಎಂದು ಟೀಕೆ ಮಾಡಿದ್ದ ನಟ ಪ್ರಕಾಶ್‌ ರೈ ಅವರ ವಿರುದ್ಧ ಲಖನೌ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ವಕೀಲರೊಬ್ಬರು ಈ ಸಂಬಂಧ ದೂರು ನೀಡಿದ್ದು, ಇದೇ 7ರಂದು ಪ್ರಕರಣ ವಿಚಾರಣೆಗೆ ಬರಲಿದೆ.

ಬೆಂಗಳೂರಿನಲ್ಲಿ ಡಿವೈಎಫ್‌ಐ ಹಮ್ಮಿಕೊಂಡಿದ್ದ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ರೈ, ಪ್ರಧಾನಿ ವಿರುದ್ಧ ಟೀಕೆ ಮಾಡಿದ್ದರು.

ಗೌರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಪತ್ರಕರ್ತೆ ಗೌರಿ ಹತ್ಯೆಯಾಗಿ ಅ.5ಕ್ಕೆ ತಿಂಗಳಾಗಿದ್ದು, ಇದೇ ಸಂದರ್ಭ ಗೌರಿಗೆ ರಷ್ಯಾದ ಅಂತರರಾಷ್ಟ್ರೀಯ ಪ್ರಶಸ್ತಿ 'ಆನಾ ಪೊಲಿತ್ಕೊವಾಸ್ಕಾಯ ವಾರ್ಷಿಕ ಪ್ರಶಸ್ತಿ’ ಮರಣೋತ್ತರವಾಗಿ ಲಭಿಸಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಗುಲಾಲಿ ಇಸ್ಮಾಯಿಲ್‌ ಜತೆಗೆ ಗೌರಿಗೆ ಜಂಟಿ ಪ್ರಶಸ್ತಿ ಸಿಕ್ಕಿದೆ.

‘ಇದೇ ಮೊದಲ ಬಾರಿಗೆ ಭಾರತೀಯರಿಗೆ ಈ ಪ್ರಶಸ್ತಿ ಲಭಿಸಿದೆ. ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡಿ ಗೌರಿ ರೀತಿಯಲ್ಲೇ ಹತ್ಯೆಗೀಡಾದ ಪತ್ರಕರ್ತೆ ಅನಾ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ರಾ ಇನ್ ವಾರ್ ವೇದಿಕೆ ನೀಡುತ್ತಿದೆ’ ಎಂದು ಕವಿತಾ ತಿಳಿಸಿದರು.

ಭಾವುಕರಾದ ಇಂದಿರಾ

ಗೌರಿ ಅವರ ತಾಯಿ ಇಂದಿರಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಗಳ ಬಗ್ಗೆ ನೆನೆದು, ಭಾವುಕರಾಗಿ ಕಣ್ಣೀರು ಒರೆಸಿಕೊಂಡರು.

‘ನನ್ನ ಮಗಳು ಗೌರಿಗೆ ಪ್ರಶಸ್ತಿ ಲಭಿಸಿರುವುದು ಖುಷಿ ನೀಡಿದೆ. ಅವಳು ಈ ರೀತಿ ಕೊನೆಗೊಂಡಿದ್ದರ ಬಗ್ಗೆ ಬೇಜಾರಿದೆ. ಆದರೆ, ಅವಳು ಇಷ್ಟೊಂದು ಜನರ ಪ್ರೀತಿ, ವಿಶ್ವಾಸ ಸಂಪಾದಿಸಿರುವುದು ಹೆಮ್ಮೆ ತಂದಿದೆ. ಈಗ ನಮ್ಮ ಕುಟುಂಬದಲ್ಲಿ ಎಲ್ಲರೂ ಒಂದಾಗಿದ್ದೇವೆ’ ಎಂದರು.

* ಎಸ್‌ಐಟಿ ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಇದೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸುವುದಿಲ್ಲ. ಆದಷ್ಟು ಬೇಗ ಗೌರಿ ಹತ್ಯೆಗೆ ನ್ಯಾಯ ಕೊಡಿಸಲಿ       

– ಇಂದ್ರಜಿತ್‌ ಲಂಕೇಶ್‌, ಗೌರಿ ಸಹೋದರ

ಗೌರಿ ಕುರಿತ ಸಿನೆಮಾ ನಿರ್ಮಾಣಕ್ಕೆ ಇದು ಸೂಕ್ತ ಸಂದರ್ಭ ಅಲ್ಲ. ಮೊದಲು ತನಿಖೆ ಮುಗಿಯಲಿ. ಈಗಿರುವ ಗೊಂದಲ ನಿವಾರಣೆಯಾಗಲಿ

  – ಕವಿತಾ ಲಂಕೇಶ್‌, ಗೌರಿ ಸಹೋದರಿ ಹಾಗೂ ಚಿತ್ರನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT