ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಗಾಂಧಿ ಜಯಂತಿ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಟಿವಿ ಆನ್ ಮಾಡಿದೆ. ಗಾಂಧಿ ಜಯಂತಿ ಕಾರ್ಯಕ್ರಮ ಬಿತ್ತರಗೊಳ್ಳುತ್ತಿತ್ತು. ಎಲ್ಲ ಧರ್ಮಗಳನ್ನು ಗೌರವಿಸುತ್ತಿದ್ದ, ಎಲ್ಲ ಧರ್ಮಗಳ ಸಾರವನ್ನು ಗ್ರಹಿಸಿದ್ದ ಮಹಾತ್ಮನ ಜನ್ಮದಿನದಂದು ಸರ್ವ ಧರ್ಮ ಪ್ರಾರ್ಥನೆ ನಡೆಯುತ್ತಿತ್ತು. ಕೋಮು ಸಾಮರಸ್ಯ ಅಭಾವವಾಗಿರುವ ಈ ಸಂದರ್ಭದಲ್ಲಿ ಇದರ ಅಗತ್ಯವಿದೆ ಎನಿಸಿತು. ಆಲಿಸುವವರ ಬಗ್ಗಡವಾದ ಮನಸ್ಸು ಸ್ವಲ್ಪವಾದರು ತಿಳಿಯಾಗಿ, ಕೆಲವು ಮೌಲ್ಯಗಳು ಜಾಗೃತ ವಾದೀತು ಎನಿಸಿತು. ಅಲ್ಲದೆ ಪರಸ್ಪರ ಮತಸಹಿಷ್ಣುತೆ ಅಂಕುರಿಸೀತು ಎನಿಸಿತು. ಭಗವದ್ಗೀತೆ, ಧಮ್ಮಪದ, ಬೈಬಲ್, ಕುರಾನ್ ಮೊದಲಾದ ಗ್ರಂಥಗಳ ಕೆಲಕೆಲ ಭಾಗಗಳ ಪಠನವಾಯಿತು. ಬಾಲ್ಯದಿಂದಲೂ ಗಾಂಧೀಜಿಯ ಮೇಲೆ ಜೈನಧರ್ಮದ ಪ್ರಭಾವ ವಿಶೇಷವಾಗಿ ಆಗಿತ್ತು.

ಆದ್ದರಿಂದ ಆ ಧರ್ಮದ ಪ್ರಾರ್ಥನೆ ಯಾವುದು ಬರುತ್ತೆ ಅಂತ ಕಾಯುತ್ತಿದ್ದೆ. ಕಾಯುತ್ತಲೇ ಇದ್ದೆ. ಅದು ಪ್ರಸಾರವಾದ ಸಂದರ್ಭದಲ್ಲಿ ನಾನು ಅನ್ಯ ವಿಷಯದಲ್ಲಿ ಪರವಶನಾಗಿ ಅದನ್ನು ವೀಕ್ಷಿಸಲಿಲ್ಲವೋ ಏನೋ ಎಂಬ ಭ್ರಮೆಯೂ ಆವರಿಸಿತು. ಚಿತ್ತ ಗೊಂದಲಗೊಂಡಿತು. ಆಗ ಕತ್ತಲೆಯಲ್ಲಿ ಹರಿದುಬಂದ ಬೆಳಕಿನ ಗೆರೆಯಂತೆ ಒಳದನಿಯೊಂದು, ’ಆ ಕಾರ್ಯಕ್ರಮಕ್ಕೆ ನಿನ್ನನ್ನೇ ಆಹ್ವಾನಿಸಿದ್ದರೆ ಒಂದೆರಡು ನಿಮಿಷಗಳಲ್ಲಿ ಏನನ್ನು ಹೇಳುತ್ತಿದ್ದೆ? ಏನನ್ನು ಪಠಿಸುತ್ತಿದ್ದೆ?’- ಎಂದು ಪ್ರಶ್ನಿಸಿತು. ಆವೇಶ ಬಂದಂತಾಯಿತು. ಧ್ವನಿವರ್ಧಕದ ಮುಂದೆ ನಿಂತು ನುಡಿಯ
ತೊಡಗಿದೆ-

ಮಹಾತ್ಮ ಗಾಂಧೀಜಿ ಅವರ ಮಾರ್ಗ, ಅಹಿಂಸಾಮಾರ್ಗ. ಆ ಅಹಿಂಸೆಯೇ ಜೈನಧರ್ಮದ ಪ್ರಾಣ. ಆ ಧರ್ಮದ ಪ್ರಾತಿನಿಧಿಕ ಗ್ರಂಥವೇ, ಸಮಣಸುತ್ತಂ. ಇದು ಪ್ರಾಕೃತ ಭಾಷೆಯಲ್ಲಿದೆ. ಅಲ್ಲಿಯ ಕೆಲವು ಸುತ್ತ(ಸೂತ್ರ/ಸೂಕ್ತಿ)ಗಳು ಹೀಗಿವೆ-

ಣಮೋ ಅರಿಹಂತಾಣಂ, ಣಮೋ ಸಿದ್ಧಾಣಂ, ಣಮೋ ಆಯರಿಯಾಣಂ |
ಣಮೋ ಉವಜ್ಝಾಯಾಣಂ, ಣಮೋ ಲೋಏ ಸವ್ವ ಸಾಹೂಣಂ ||
(ಅರಿಹಂತರುಗಳಿಗೆ ನಮಸ್ಕಾರ, ಸಿದ್ಧರುಗಳಿಗೆ ನಮಸ್ಕಾರ, ಆಚಾರ್ಯರುಗಳಿಗೆ ನಮಸ್ಕಾರ, ಉಪಾಧ್ಯಾಯರುಗಳಿಗೆ ನಮಸ್ಕಾರ, ಲೋಕ ದಲ್ಲಿರುವ ಎಲ್ಲ ಸಾಧುಗಳಿಗೆ ನಮಸ್ಕಾರ.)

ತುಂಗಂ ನ ಮಂದರಾಓ, ಆಗಾಸಾಓ ವಿಸಾಲಯಂ ನತ್ಥಿ |
ಜಹ ತಹ ಜಯಮ್ಮಿ ಜಾಣಸು, ಧಮ್ಮಮಹಿಂಸಾ ಸಮಂ ನತ್ಥಿ ||
(ಮಂದರ ಪರ್ವತಕ್ಕಿಂತ ಎತ್ತರವಾದುದು ಇಲ್ಲ; ಆಕಾಶಕ್ಕಿಂತ ವಿಶಾಲವಾದುದು ಇಲ್ಲ; ಹಾಗೆಯೇ ವಿಚಾರಿಸಿ ನೋಡಿದರೆ ಅಹಿಂಸೆಗೆ ಸಮನಾದುದು ಇಲ್ಲ.)

ಜೀವವಹೋ ಅಪ್ಪವಹೋ, ಜೀವದಯಾ ಅಪ್ಪಣೋ ದಯಾ ಹೋಇ |
ತಾ ಸವ್ವ ಜೀವಹಿಂಸಾ ಪರಿಚತ್ತಾ, ಅತ್ತಕಾಮೇಹಿಂ ||
(ಜೀವ ವಧೆ, ತನ್ನ ವಧೆಯಾಗಿದೆ. ಜೀವದಯೆ ತನ್ನ ದಯೆಯಾಗಿದೆ. ಆತ್ಮಹಿತವನ್ನು ಇಚ್ಛಿಸುವವನು ಜೀವಹಿಂಸೆಯನ್ನು
ಪರಿತ್ಯಜಿಸಬೇಕು)

ಜಂ ಇಚ್ಛಸಿ ಅಪ್ಪಣತೋ, ಜಂ ಚ ಣ ಇಚ್ಛಸಿ ಅಪ್ಪಣತೋ |
ತಂ ಇಚ್ಛ ಪರಸ್ಸ ವಿ ಯಾ, ಎತ್ತಿಯಗಂ ಜಿಣಸಾಸಣಂ ||
(ನೀನು ನಿನಗಾಗಿ ಏನನ್ನು ಬಯಸುವೆಯೋ, ಅದನ್ನು ಇತರರಿಗೂ ಬಯಸು. ನೀನು ನಿನಗಾಗಿ ಏನನ್ನು ಬಯಸುವುದಿಲ್ಲವೋ ಅದನ್ನು ಇತರರಿಗೂ ಬಯಸಬೇಡ. ಇದೇ ಜಿನಶಾಸನ, ಇದೇ ತೀರ್ಥಂಕರರ ಉಪದೇಶ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT