ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಬ್ಬರಕ್ಕೆ ಎಂಟು ಬಲಿ

ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ
Last Updated 5 ಅಕ್ಟೋಬರ್ 2017, 20:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಭಾರಿ ವರ್ಷಧಾರೆಯಾಗಿದೆ.

ತುಮಕೂರು, ಕೋಲಾರ, ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.

ಮೂರು ಪ್ರತ್ಯೇಕ ಘಟನೆಗಳಲ್ಲಿ ಗುರುವಾರ ಸಿಡಿಲು ಬಡಿದು ಮಹಿಳೆ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರದಲ್ಲಿ ಆರು ಮಂದಿ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ಒಬ್ಬರು ಹಾಗೂ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.

ನಂದಿನಾಥಪುರ ಸಮೀಪದ ಚಿಕ್ಕಮ್ಮ ದೊಡ್ಡಮ್ಮ ದೇವಾಲಯ ಬಳಿ ಹೊಲದಲ್ಲಿ ದನ ಮೇಯಿಸುತ್ತಿದ್ದ ಹುಣಸವಾಡಿ ಗ್ರಾಮದ ಪುಟ್ಟಣ್ಣಯ್ಯ (60), ಸುವರ್ಣಮ್ಮ (45), ಸುಜಯ್ (23), ಸುದೀಪ್ (18), ತಿಮ್ಮೇಗೌಡ (60), ಉಮೇಶ (24) ಮೃತಪಟ್ಟಿದ್ದು, ಗಣೇಶ, ವಿಶ್ವ, ಮಾದೇಶ, ಸಂದೀಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಪ್ರಾಥಮಿಕ ಚಿಕಿತ್ಸೆ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಕಲಗೂಡು ತಾಲ್ಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ರೈತ ರಾಜೇಗೌಡ (55) ಮೃತಪಟ್ಟಿದ್ದಾರೆ. ಜಮೀನಿನ ಬಳಿಯಿದ್ದ ದನಗಳನ್ನು ಮನೆಗೆ ಹೊಡೆದುಕೊಂಡು ಬರಲು ತೆರಳಿದಾಗ ಸಿಡಿಲು ಬಡಿದಿದೆ.

ಚಿಂಚೋಳಿ ತಾಲ್ಲೂಕಿನ ಜಟ್ಟೂರು ಗ್ರಾಮದಲ್ಲಿ ಗುರುವಾರ ಸಿಡಿಲು ಬಡಿದು ಮಹಿಶಪ್ಪ ಅಂತಪ್ಪ ನಲ್ಲಾ (24) ಮೃತಪಟ್ಟಿದ್ದಾರೆ.‌

₹ 5 ಲಕ್ಷ ಪರಿಹಾರ:

ಸಿಡಿಲು ಬಡಿದು ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಪ್ರಕೃತಿ ವಿಕೋಪ ನಿಧಿಯಿಂದ ₹4 ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹1 ಲಕ್ಷ ಸೇರಿಸಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ರಾಮನಗರ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಗುರುವಾರವೂ ಉತ್ತಮ ಮಳೆ ಸುರಿಯಿತು. ಬುಧವಾರ ರಾತ್ರಿಯೂ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಒಳ್ಳೆಯ ಮಳೆಯಾಗಿದೆ.

ಕನಕಪುರದ ಸಾತನೂರು ಹೋಬಳಿಯಲ್ಲಿ ಮನೆಗಳು ಬಿದ್ದು ವ್ಯಾಪಕ ಹಾನಿಯಾಗಿದೆ. ಬಹುತೇಕ ಕೆರೆಗಳು ಭರ್ತಿಯಾಗುತ್ತಿದ್ದು, ಗ್ರಾಮಸ್ಥರು ಬಾಗಿನ ಅರ್ಪಿಸಿದರು.

ತುಮಕೂರು ಜಿಲ್ಲೆಯ ಗುಬ್ಬಿ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಬೆಳಿಗ್ಗೆಯವರೆಗೂ ಧಾರಾಕಾರ ಮಳೆ ಸುರಿದಿದೆ. 10 ಮನೆಗಳು ಕುಸಿದುಬಿದ್ದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಕೆರೆ ಕೋಡಿ ಬಿದ್ದು ನೀರು ಹರಿಯುತ್ತಿದೆ. ಈ ನೀರು ಬುಕ್ಕಾಪಟ್ಟಣ–ಶಿರಾ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಶೇಂಗಾ ಹೊಲಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಬಿರುಸಿನ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿವೆ. ತಾಲ್ಲೂಕಿನ ಅತಿ ದೊಡ್ಡ ಕೆರೆಗಳಲ್ಲಿ  ಒಂದಾದ ಉಡುವಳ್ಳಿ ಕೆರೆ ತುಂಬಲು ಒಂದು ಅಡಿಯಷ್ಟೇ ಬಾಕಿಯಿದೆ.

(ಅಬ್ಬರದ ಮಳೆಯಿಂದಾಗಿ ಜಲಾವೃತ್ತಗೊಂಡಿದ್ದ ಬೆಂಗಳೂರಿನ ಹೊಸೂರು ರಸ್ತೆ)

ದಕ್ಷಿಣದಲ್ಲಿ ಇನ್ನೆರಡು ದಿನ ಭಾರಿ ಮಳೆ

ಬೆಂಗಳೂರು: ‘ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಇರಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ಆಗಲಿದೆ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ. ಮೇತ್ರಿ ತಿಳಿಸಿದರು.

7ರಿಂದ ಉತ್ತರ ಒಳನಾಡಿನಲ್ಲಿ ಭಾರಿ ಮಳೆ: ‘7ರ ನಂತರ ಉತ್ತರ ಒಳನಾಡಿನಲ್ಲಿ ಮಳೆ ಪ್ರಬಲವಾಗುತ್ತದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಶ್ರೀನಿವಾಸ ರೆಡ್ಡಿ ಹೇಳಿದರು. ‘ಹಿಂಗಾರು ಮಳೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಗುಡುಗು, ಮಿಂಚು ಇರುತ್ತದೆ. ಈಗ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗುತ್ತದೆ’ ಎಂದರು.

ತೇವಾಂಶ ಏರಿಕೆಯಿಂದ ಬಿತ್ತನೆ ಕಷ್ಟ: ‘ಸೆಪ್ಟೆಂಬರ್‌ನಲ್ಲಿಯೇ ಉತ್ತರ ಒಳನಾಡಿನಲ್ಲಿ ಹಿಂಗಾರು ಬಿತ್ತನೆ ಆರಂಭವಾಗಿದೆ. ಇಲ್ಲಿಯವರೆಗೆ ಸಾಧಾರಣ ಮಳೆಯಾದ ಕಾರಣ ಬೆಳೆ ಹಾನಿಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸತತ ಮಳೆಯಾಗುವುದರಿಂದ ತೇವಾಂಶ ಹೆಚ್ಚುತ್ತದೆ. ಆಗ ಬಿತ್ತನೆ ಸಾಧ್ಯವಾಗುವುದಿಲ್ಲ’ ಎಂದು ಮಾಹಿತಿ ನೀಡಿದರು.

ಹಿಂಗಾರಿನಲ್ಲಿ ವಾಡಿಕೆ ಮಳೆ

‘ರಾಜ್ಯದಲ್ಲಿ ಹಿಂಗಾರಿನಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ರಾಜ್ಯದಲ್ಲಿ ವಾರ್ಷಿಕ 1,150 ಮಿ.ಮೀ ಮಳೆಯಾಗುತ್ತದೆ. ಇದಕ್ಕೆ ಹಿಂಗಾರು ಮಳೆ ಶೇ 16ರಷ್ಟು ಕೊಡುಗೆ ನೀಡುತ್ತದೆ. ಅಕ್ಟೋಬರ್‌ 1ರಿಂದ ಹಿಂಗಾರು ಆರಂಭವಾಗುತ್ತದೆ. ಹಿಂಗಾರಿನಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ 40ರಷ್ಟು, ಉತ್ತರ ಒಳನಾಡಿನಲ್ಲಿ ಶೇ 35ರಷ್ಟು ಹಾಗೂ ಕರಾವಳಿಯಲ್ಲಿ ಶೇ 25ರಷ್ಟು ಮಳೆಯಾಗುತ್ತದೆ.

‘ಹಿಂಗಾರಿನಲ್ಲಿ 188 ಮಿ.ಮೀ ವಾಡಿಕೆಯ ಮಳೆಯಾಗುತ್ತದೆ. ಕಳೆದ ವರ್ಷ ಕೇವಲ 53.3 ಮಿ.ಮೀ ಮಳೆಯಾಗಿದ್ದು, ಶೇ 72ರಷ್ಟು ಕೊರತೆ ಉಂಟಾಗಿತ್ತು. ಆದರೆ, ಈ ಸಲ ಐದು ದಿನಗಳಲ್ಲಿಯೇ 45.1 ಮಿ.ಮೀ ಮಳೆ ಸುರಿದಿದೆ. ಹಾಗಾಗಿ ವಾಡಿಕೆಯಷ್ಟು ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT